ಸಾರಾಂಶ
ಹಾನಗಲ್ಲ: ಸತತ ಮಳೆಯಿಂದಾಗಿ ಗೋವಿನಜೋಳ ಹಾಗೂ ಇತರ ಬೆಳೆಗಳು ಹಾನಿಯಾಗಿದ್ದು, ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಆ. ೨೯ರಂದು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ರೈತಸಂಘದ ಪದಾಧಿಕಾರಿಗಳು ಎಚ್ಚರಿಸಿದರು.ಶುಕ್ರವಾರ ತಹಸೀಲ್ದಾರ್‌ರಿಗೆ ಮನವಿ ಸಲ್ಲಿಸಿದ ರೈತಸಂಘ ರೈತರ ಬೆಳೆ ಹಾನಿಯಾಗಿರುವುದನ್ನು ಅಧಿಕಾರಿಗಳು ಪರಿಶೀಲಿಸದಿರುವುದು ಖಂಡನೀಯ. ಕೂಡಲೇ ಜಂಟಿ ಸಮೀಕ್ಷೆ ಆರಂಭಿಸಬೇಕು. ಇದರೊಂದಿಗೆ ಬೆಳೆಹಾನಿಯಾಗಿರುವ ಕುರಿತು ಹಾನಿಗೊಳಗಾದ ರೈತರು ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಿ ಸರ್ಕಾರದ ಗಮನ ಸೆಳೆಯಲು ಚಿಂತನೆ ನಡೆಸಿದ್ದೇವೆ. ಹವಾಮಾನ ಆಧಾರಿತ ಮಾವು, ಅಡಕೆ, ಶುಂಠಿಯ ಕಳೆದ ವರ್ಷದ ಬೆಳೆವಿಮಾ ಪರಿಹಾರ ಇದುವರೆಗೂ ಬಿಡುಗಡೆಯಾಗಿಲ್ಲ. ವಿಮಾ ಕಂಪನಿ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹಾರ ಬಿಡುಗಡೆಗೆ ಮುಂದಾಗಬೇಕು. ರೈತರು ಹೊಸದಾಗಿ ಕೊರೆಸಿದ ಕೊಳವೆಬಾವಿಗಳಿಗೆ ಹೆಸ್ಕಾಂ ಆರ್.ಆರ್ ಸಂಖ್ಯೆ ನೀಡುತ್ತಿಲ್ಲ. ೨೦೨೩ರಲ್ಲಿ ವಿತರಿಸಿದ ಬೆಳೆಹಾನಿ ಪರಿಹಾರ ಇನ್ನೂ ಬಹಳಷ್ಟು ರೈತರಿಗೆ ವಿತರಣೆಯಾಗಿಲ್ಲ. ಕೇವಲ ಎನ್‌ಡಿಆರ್‌ಎಫ್ ಪರಿಹಾರ ವಿತರಿಸಿರುವ ರಾಜ್ಯ ಸರ್ಕಾರ ತನ್ನ ಪಾಲಿನ ಎನ್‌ಡಿಆರ್‌ಎಫ್ ಪರಿಹಾರ ವಿತರಿಸಿಲ್ಲ. ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಪರಿಹಾರ ನೀಡುವುದಾಗಿ ಕೃಷಿ ಸಚಿವರು ಘೋಷಿಸಿದ್ದು, ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ. ಯಾವೊಬ್ಬ ರೈತರಿಗೂ ಹಣ ಜಮಾ ಆಗಿಲ್ಲ. ೨೦೧೯ರಲ್ಲಿ ಆಗಿದ್ದ ಅತಿವೃಷ್ಟಿಯ ಸಂದರ್ಭದಲ್ಲಿ ೧೭೩ ರೈತರ ಡಿ-ಸಿಲ್ಟಿಂಗ್ ಪ್ರಕರಣಗಳು ಸರ್ಕಾರಕ್ಕೆ ಅನುಮೋದನೆಗೊಂಡು ಎರಡು ವರ್ಷ ಕಳೆದಿದ್ದರೂ ಪರಿಹಾರ ಜಮಾ ಆಗುತ್ತಿಲ್ಲ. ೨೦೧೯ರಲ್ಲಿನ ಅತಿವೃಷ್ಟಿ ಪರಿಹಾರದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳಿಂದ ಹಣ ಅವ್ಯವಹಾರ ನಡೆದಿದ್ದು, ಪೊಲೀಸ್ ತನಿಖೆ ನೆಪದಲ್ಲಿ ಇನ್ನೂ ಇತ್ಯರ್ಥವಾಗುತ್ತಿಲ್ಲ. ಇದರಲ್ಲಿ ಬಾಕಿ ಉಳಿದಿರುವ ರೈತರಿಗೆ ಪರಿಹಾರ ಬಿಡುಗಡೆಗೊಂಡಿಲ್ಲ, ಅದನ್ನು ಪರಿಶೀಲಿಸಿ ಕೂಡಲೇ ಹಣ ವಿತರಣೆಗೆ ವ್ಯವಸ್ಥೆ ಕೈಗೊಳ್ಳಬೇಕು. ರೈತರ ಪಹಣಿ ಪತ್ರಿಕೆಯಲ್ಲಿ ಸರಕಾರ ಅಂತಾ ದಾಖಲಾಗಿದ್ದು, ಇದರಲ್ಲಿ ರೈತರ ತಪ್ಪಿಲ್ಲದಿದ್ದರೂ ಸಮಸ್ಯೆ ಎದುರಿಸುವಂತಾಗಿದೆ. ಈ ಕುರಿತು ಉಪವಿಭಾಗಾಧಿಕಾರಿಗಳು ಕಂದಾಯ ಇಲಾಖೆಯಲ್ಲಿನ ತಂತ್ರಾಂಶದಲ್ಲಿರುವ ನ್ಯೂನತೆಗಳನ್ನು ಸರಿಪಡಿಸಬೇಕು. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಆ.೨೯ ರಂದು ಪಟ್ಟಣದ ಮಹಾತ್ಮಾಗಾಂಧಿ ವೃತ್ತದಲ್ಲಿ ರೈತರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಂಬಂಧಿಸಿದ ಎಲ್ಲ ಅಧಿಕಾರಿಗಳೂ ಅಂದು ಆಗಮಿಸಿ ಪರಿಹಾರ ಸೂಚಿಸಬೇಕು ಎಂದರು.ಪ್ರತಿಭಟನೆಯಲ್ಲಿ ಮರಿಗೌಡ ಪಾಟೀಲ, ರುದ್ರಪ್ಪ ಹಣ್ಣಿ, ಶ್ರೀಕಾಂತ ದುಂಡಣ್ಣನವರ, ಮಹೇಶ ವಿರುಪಣ್ಣನವರ, ಶಂಕರಗೌಡ ಪಾಟೀಲ, ಶಂಭುಗೌಡ ಪಾಟೀಲ, ಸೋಮಣ್ಣ ಜಡೆಗೊಂಡರ, ಮಹಲಿಂಗಪ್ಪ ಅಕ್ಕಿವಳ್ಳಿ, ರವಿ ನೆರ್ಕಿಮನಿ, ಅಶೋಕ ಸಂಶಿ, ರಾಜೀವ ದಾನಪ್ಪನವರ, ಶಿವಯೋಗಿ ಬಾಳಿಹಳ್ಳಿ, ಕರಬಸಪ್ಪ ಹಿರೇಕಾಂಶಿ, ಮಾಲತೇಶ ಕಲ್ಲಿಕರೆಣ್ಣನವರ, ಎಂ.ಎಂ.ಬಡಗಿ, ಅಜ್ಜನಗೌಡ ಪಾಟೀಲ, ಶ್ರೀಕಾಂತ ಮಾಂಗ್ಲೆನವರ, ಮಂಜು ತೆಲಗಡ್ಡಿ, ಮೂಕಯ್ಯ ಗುರುಲಿಂಗಮ್ಮನವರ, ಶಂಕ್ರಪ್ಪ ಊರಲಗಿ, ಶಿವಪ್ಪ ಹುಲಮನಿ ಇದ್ದರು.