ವಿವಿಧ ಬೇಡಿಕೆ ಈಡೇರಿಕೆಗಾಗಿ 24ಕ್ಕೆ ಪ್ರತಿಭಟನೆ

| Published : Nov 23 2025, 02:00 AM IST

ಸಾರಾಂಶ

ಧ್ರುವ ಪೌಲ್ಟ್ರಿ ಫಾರಂನಲ್ಲಿ ನೊಣಗಳ ಕಾಟ, ಅಭಿಲೇಖನಾಲಯ ದಾಖಲಾತಿ ಕೊಠಡಿಯಲ್ಲಿ ಸಿಬ್ಬಂದಿಗಳ ಕಾರುಬಾರು ಮತ್ತು ತಾಲೂಕಿನಲ್ಲಿ ನೀರಾವರಿ ಸಮಸ್ಯೆ ಬಗ್ಗೆ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ನ. 24ರಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಘಟಕದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಘಟಕದ ಚಂಗಡಿ ಕರಿಯಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ಧ್ರುವ ಪೌಲ್ಟ್ರಿ ಫಾರಂನಲ್ಲಿ ನೊಣಗಳ ಕಾಟ, ಅಭಿಲೇಖನಾಲಯ ದಾಖಲಾತಿ ಕೊಠಡಿಯಲ್ಲಿ ಸಿಬ್ಬಂದಿಗಳ ಕಾರುಬಾರು ಮತ್ತು ತಾಲೂಕಿನಲ್ಲಿ ನೀರಾವರಿ ಸಮಸ್ಯೆ ಬಗ್ಗೆ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ನ. 24ರಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಘಟಕದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಘಟಕದ ಚಂಗಡಿ ಕರಿಯಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಜಲತ್ವ ಸಮಸ್ಯೆಗಳ ಒಳಗೊಂಡಂತೆ ರೈತರು ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಗೆ ಆಗಮಿಸಬೇಕು ಎಂದರು.ಹನೂರು ರೈತ ಘಟಕದ ಅಧ್ಯಕ್ಷ ಮಾದಪ್ಪ ಮಾತನಾಡಿ, ಹನೂರು ಕಸಬಾ ಹೋಬಳಿಯ ಉಲ್ಲೇಪುರ ಗ್ರಾಮದಲ್ಲಿರುವ ಧ್ರುವ ಪೌಲ್ಟ್ರಿ ಫಾರಂನಿಂದ ನೊಣಗಳ ಕಾಟ ಹೆಚ್ಚಾಗಿದ್ದು, ರೈತರು ಬೆಳೆಗಳನ್ನು ತೆಗೆಯಲು ಆಗುತ್ತಿಲ್ಲ. ಜೊತೆಗೆ ಇಳುವರಿ ಸಹ ನೊಣಗಳ ಕಾಟದಿಂದ ಕ್ಷಿಣಿಸುತ್ತಿದೆ.

ಸುತ್ತಮುತ್ತಲಿನ ಪ್ರದೇಶದಲ್ಲಿರುವ ರೈತ ಕುಟುಂಬದವರು ಮನೆಗಳಲ್ಲಿ ಊಟ ಮಾಡಲು ಸಹ ಸಾಧ್ಯವಾಗದ ಸ್ಥಿತಿ ಇದೆ. ಎಲ್ಲಿ ನೋಡಿದರೂ ನೊಣದ ಕಾಟ ಜೊತೆಗೆ ಸನಿಹದಲ್ಲೇ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಏಕಲವ್ಯ ಶಾಲೆ ಮಕ್ಕಳಿಗೆ ತೊಂದರೆಯಾಗಿದೆ. ಮುಂದಿನ ದಿನಗಳಲ್ಲಿ ಕೋಳಿ ಸಾಕಾಣಿಕೆ ಮಾಡಲು ಬಿಡಲ್ಲ. ಪಪಂ ಅಧಿಕಾರಿಗಳು ಪರವಾನಗಿ ರದ್ದುಪಡಿಸಬೇಕು. ತಾಲೂಕು ದಂಡಾಧಿಕಾರಿಗಳಿಗೂ ಮನವಿಯನ್ನು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ವಿರುದ್ಧ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಹಣ ನೀಡಿದವರಿಗೆ ಮಾತ್ರ ದಾಖಲೆ:

ಪಟ್ಟಣದ ತಾಲೂಕು ದಂಡಾಧಿಕಾರಿಗಳ ಕಚೇರಿ ಮುಂಭಾಗ ಇರುವ ಅಭಿಲೇಖನಾಲಯ ಕಂದಾಯ ಇಲಾಖೆಯ ಸರ್ಕಾರಿ ದಾಖಲೆಗಳ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಹಣ ನೀಡಿದವರಿಗೆ ಮಾತ್ರ ದಾಖಲೆ ನೀಡುತ್ತಾರೆ. ಇಲ್ಲದಿದ್ದರೆ ಯಾರಿಗೆ ಹೇಳುತ್ತೀರಾ ಹೋಗಿ ಹೇಳಿ ಎಂದು ಉಡಾಫೆ ಉತ್ತರ ನೀಡುತ್ತಾರೆ. ಹೀಗಾಗಿ ಈ ಹಿಂದೆ ಇದ್ದಂತಹ ತಾಲೂಕು ದಂಡಾಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಇತ್ತೀಚೆಗೆ ಬಂದಿರುವ ತಾಲೂಕು ದಂಡಾಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು. ಸಮಸ್ಯೆ ಬಗ್ಗೆ ಹಲವಾರು ಮೌಖಿಕವಾಗಿ ತಿಳಿಸಲಾಗಿದೆ. ಸಿಬ್ಬಂದಿಗೆ ತಾಲೂಕು ದಂಡಾಧಿಕಾರಿ ಸೂಚನೆ ನೀಡಿದ್ದರು ಅವರ ಮಾತಿಗೆ ಕಿಮ್ಮತ್ತಿಲ್ಲದ ರೀತಿಯಲ್ಲಿ ಇಲ್ಲಿನ ಸಿಬ್ಬಂದಿ ನಡೆದುಕೊಳ್ಳುತ್ತಾರೆ ಎಂದರು..

ರೈತ ಮುಖಂಡ ಪುಟ್ಟಸ್ವಾಮಿ, ಜಿಲ್ಲಾ ಉಪಾಧ್ಯಕ್ಷ , ವಿನೇಶ್ ಕುಮಾರ್ ರೈತ ಮುಖಂಡರಾದ ಆಳಗೇಶನ್ , ಮಹದೇವು, ರವಿ, ಜಿ. ಶಿವಕುಮಾರ್, ನಂದೀಶ್ ಕುಮಾರ್ ಉಪಸ್ಥಿತರಿದ್ದರು .