ಸಾರಾಂಶ
ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗೆ ಜಾರಿಗೊಳಿಸಲಾಗಿದ್ದ ಅನೇಕ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿದೆ.
ಶಿರಸಿ: ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗೆ ಜಾರಿಗೊಳಿಸಲಾಗಿದ್ದ ಅನೇಕ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿದೆ. ರೈತ ವಿರೋಧಿ ಸರ್ಕಾರದ ನಡೆಯನ್ನು ಖಂಡಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾದಿಂದ ಜು.೩೧ರಂದು ಮುಂಡಗೋಡದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ ತಿಳಿಸಿದರು.
ಅವರು ಸೋಮವಾರ ನಗರದ ದೀನದಯಾಳ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಯೂರಿಯಾ ಗೊಬ್ಬರ ಸಿಗದೇ ರೈತರು ಪರದಾಡುವಂತಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ರೈತ ಮಕ್ಕಳಿಗೆ ಜಾರಿಗೊಳಿಸಿದ್ದ ರೈತ ವಿದ್ಯಾನಿಧಿಯೋಜನೆ ಸೇರಿದಂತೆ ಇನ್ನಿತರ ಯೋಜನೆ ತಡೆ ಹಿಡಿದಿದೆ. ಕೃಷಿ ಪಂಪ್ ಸೆಟ್‌ಗೆ ₹೩ ಲಕ್ಷ ವಸೂಲಿ ಮಾಡುತ್ತಿದೆ. ಬಿತ್ತನೆ ಬೀಜದ ದರ ಶೇ.೨೦ರಷ್ಟು ಏರಿಕೆ ಮಾಡಿದೆ. ಕೇಂದ್ರ ಸರ್ಕಾರವು ಬರ ಪೀಡಿತ ಪ್ರದೇಶಗಳ ರೈತರ ನೆರವಿಗೆ ₹೩೫೪೪ ಕೋಟಿ ಅನುದಾನ ನೀಡಿತ್ತು. ಅದನ್ನು ಕಾಂಗ್ರೆಸ್ ನುಂಗಿ ನೀರು ಕುಡಿದೆ. ಭೂಸಿರಿ ಯೋಜನೆ ಸಿರಿಧಾನ್ಯಕ್ಕೆ ₹೧೦ ಸಾವಿರ ಪ್ರೋತ್ಸಾಹಧನ, ಹಾಲಿನ ಪ್ರೋತ್ಸಾಹಧನ ನೀಡುತ್ತಿಲ್ಲ. ಕೇಂದ್ರ ಸರ್ಕಾರವು ೬.೩೦ ಲಕ್ಷ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಸಿತ್ತು. ಅದರಲ್ಲಿ ೨.೪೩ ಲಕ್ಷ ಮೆಟ್ರಿಕ್ ಟನ್ ಕಾಳಸಂತೆಯಲ್ಲಿ ರಾಜ್ಯ ಸರ್ಕಾರ ಮಾರಾಟ ಮಾಡಿದೆ ಎಂದು ದೂರಿದರು.ಬಿಜೆಪಿ ನಗರ ಮಂಡಲಾಧ್ಯಕ್ಷ ಆನಂದ ಸಾಲೇರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಲಿಂಗಯ್ಯ ಅಲ್ಲಯ್ಯನಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾಜಿ ನರಸಾನಿ, ಕಚೇರಿ ಕಾರ್ಯದರ್ಶಿ ಶ್ರೀರಾಮ ನಾಯ್ಕ, ಸಾಮಾಜಿಕ ಜಾಲತಾಣದ ಸಂಚಾಲಕ ರವಿಚಂದ್ರ ಶೆಟ್ಟಿ ಇದ್ದರು.
ಸಂಸದರು ಫೋಟೋಕ್ಕೆ ಪೋಸ್ ಕೊಡುತ್ತಾರೆ ಎಂಬ ಹೇಳಿಕೆಯನ್ನು ಖಂಡಿಸುತ್ತೇವೆ. ರಾಜಕೀಯಕ್ಕಾಗಿ ಇಂತಹ ಹೇಳಿಕೆ ಸರಿಯಲ್ಲ. ಸೀಬರ್ಡ್ ನಿರಾಶ್ರಿತರ ಭಾವನೆ ಅರ್ಥ ಮಾಡಿಕೊಳ್ಳಬೇಕು. ತಮ್ಮ ಆಡಳಿತದ ವೈಫಲ್ಯ ಮುಚ್ಚಿಕೊಳ್ಳಲು ಇಂತಹ ಹೇಳಿಕೆ ನೀಡುವುದನ್ನು ಖಂಡಿಸುತ್ತೇವೆ ಎನ್ನುತ್ತಾರೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ.