ಒಳಮೀಸಲಾತಿಯಲ್ಲಿ ಲಂಬಾಣಿ ಸಮುದಾಯಕ್ಕೆ ಅನ್ಯಾಯ ಖಂಡಿಸಿ 10ರಂದು ಪ್ರತಿಭಟನೆ

| Published : Sep 07 2025, 01:00 AM IST

ಸಾರಾಂಶ

ನಿವೃತ್ತ ನ್ಯಾ. ನಾಗಮೋಹನ ದಾಸ್ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿ ಅವೈಜ್ಞಾನಿಕವಾಗಿದೆ. ಬಂಜಾರ (ಲಂಬಾಣಿ) ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ಇದನ್ನು ಸರಿಪಡಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ಸರ್ಕಾರದ ವಿರುದ್ಧ ಸೆ. ೧೦ರಂದು ಬೆಂಗಳೂರ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಶಿರಹಟ್ಟಿ: ನಿವೃತ್ತ ನ್ಯಾ. ನಾಗಮೋಹನ ದಾಸ್ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿ ಅವೈಜ್ಞಾನಿಕವಾಗಿದೆ. ಬಂಜಾರ (ಲಂಬಾಣಿ) ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ಇದನ್ನು ಸರಿಪಡಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ಸರ್ಕಾರದ ವಿರುದ್ಧ ಸೆ. ೧೦ರಂದು ಬೆಂಗಳೂರ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.ಶನಿವಾರ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿಯನ್ನು ಸರ್ಕಾರ ಅನುಷ್ಠಾನಕ್ಕೆ ತಂದಿದೆ. ೧೦೧ ಜಾತಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿ ಮೀಸಲಾತಿ ವರ್ಗೀಕರಣ ಮಾಡಲಾಗಿದೆ. ಬಂಜಾರ ಸೇರಿದಂತೆ ಕೊರಮ, ಕೊರಚ, ಬೋವಿ ಜಾತಿಗಳಿಗೆ ಇದರಿಂದ ಅನ್ಯಾಯವಾಗಿದೆ ಎಂದು ದೂರಿದರು. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿ ಶೇ. ೪.೫ರಷ್ಟು ಮೀಸಲಾತಿ ನೀಡಲಾಗಿತ್ತು. ಈಗ ನೀಡಿರುವ ಮೀಸಲಾತಿ ವರ್ಗೀಕರಣ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು. ಬಂಜಾರ ಸಮುದಾಯದ ಅಂಕಿ ಅಂಶ ತಪ್ಪಾಗಿದೆ. ಜಾತಿ ಗಣತಿಯಲ್ಲಿ ಕಡಿಮೆ ಜನಸಂಖ್ಯೆ ತೋರಿಸಿರುವ ಕಾರಣ ಏನು? ಈ ಬಗ್ಗೆ ಸರಿಯಾದ ಕ್ರಮದಲ್ಲಿ ಸರ್ಕಾರ ಸಮೀಕ್ಷೆ ನಡೆಸಿ ವರದಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.ಸಂವಿಧಾನದಲ್ಲಿ ಸ್ಪೃಶ್ಯ ಮತ್ತು ಅಸ್ಪೃಶ್ಯ ಪದ ಬಳಕೆ ನಿಷೇಧಿಸಿದ್ದು, ಆಯೋಗದ ವರದಿಯಲ್ಲೂ ಇದೇ ಪದ ಬಳಕೆ ಮಾಡಿ ವರ್ಗೀಕರಣ ಮಾಡಿರುವುದು ಸರಿಯಲ್ಲ. ಸಮುದಾಯದವರು ಉದ್ಯೋಗ ಅರಸಿ ಗುಳೆ ಹೋಗಿರುವುದರಿಂದ ಸಮೀಕ್ಷೆಯಿಂದ ಹೊರಗಿದ್ದಾರೆ. ಈ ಬಗ್ಗೆಯೂ ಸೂಕ್ತ ರೀತಿಯಲ್ಲಿ ಸಮೀಕ್ಷೆ ನಡೆಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ಬೆಂಗಳೂರ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಒಳಮೀಸಲಾತಿ ಹೋರಾಟ, ಪ್ರತಿಭಟನೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಸಂಖ್ಯೆ ಜನ ಸೇರುವ ನಿರೀಕ್ಷೆ ಇದ್ದು, ತಾಲೂಕು ಮತ್ತು ಜಿಲ್ಲೆಯಿಂದಲೂ ೨ ಸಾವಿರಕ್ಕೂ ಹೆಚ್ಚು ಜನ ಬರಬೇಕು ಎಂದು ಮನವಿ ಮಾಡಿದ ಅವರು, ಈ ಹೋರಾಟ ನಮ್ಮ ಮಕ್ಕಳ ಶಿಕ್ಷಣ ಮತ್ತು ಬದುಕಿನ ಪ್ರಶ್ನೆಯಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಿವಣ್ಣ ಲಮಾಣಿ ನೆಲೋಗಲ್, ಜಾನು ಲಮಾಣಿ, ಗುರಪ್ಪ ಲಮಾಣಿ, ಪುಂಡಲೀಕ ಲಮಾಣಿ, ಆನಂದ ನಾಯಕ, ನಾನಪ್ಪ ಲಮಾಣಿ, ಈರಣ್ಣ ಚವ್ಹಾಣ, ಸೋಮಣ್ಣ ಲಮಾಣಿ, ಚಂದೆಪ್ಪ ಲಮಾಣಿ, ಕಿರಣ ಲಮಾಣಿ, ಶೇಖಪ್ಪ ಲಮಾಣಿ, ಮಲ್ಲೇಶ ಲಮಾಣಿ, ಕೃಷ್ಣಾ ಸೂರಣಗಿ ಸೇರಿ ನೂರಾರು ಜನ ಇದ್ದರು.