ಮಂಡ್ಯ ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಲು ಫೆ.15ರಂದು ಪ್ರತಿಭಟನಾ ಧರಣಿ

| Published : Feb 13 2024, 12:48 AM IST

ಸಾರಾಂಶ

ಮಂಡ್ಯ ಜಿಲ್ಲೆಯ ಜನ ಧರ್ಮ ಉಳುಮೆ, ಉಳುಮೆಯ ಆಚರಣೆಯಿಂದ ಕಟ್ಟಿಕೊಂಡ ಬದುಕು, ಈಗ ಉಳುಮೆಯ ಧರ್ಮವನ್ನು ಮೂಲೆಗೆ ತಳ್ಳಿ ಬಾವುಟ ಧರ್ಮವನ್ನು ಮುಂದೆ ಮಾಡಲಾಗಿದೆ. ಧರ್ಮ ಮತ್ತು ದೇವರನ್ನು ಮುಂದಿಟ್ಟು ಓಟು ಬಾಚಿಕೊಳ್ಳುವ ಸಾಧನೆ ಮಾಡಿಕೊಂಡು ಅಧಿಕಾರದ ಸಿಂಹಾಸನವೇರಲು ಜನರ ಬದುಕನ್ನು ಮೆಟ್ಟಲು ಮಾಡಿಕೊಳ್ಳಲಾಗುತ್ತಿದೆ. ಇದು ಆತಂಕಕಾರಿ ವಿಚಾರವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯಜಿಲ್ಲೆಯ ಉಳುಮೆ, ಸಂಸ್ಕೃತಿ ಉಳಿವಿಗಾಗಿ, ಶಾಂತಿ-ಸೌಹಾರ್ದತೆ-ಸಹಬಾಳ್ವೆಗಾಗಿ ಫೆ.15ರಂದು ಜಿಲ್ಲಾಕಾರಿ ಕಚೇರಿ ಬಳಿ ವಿವಿಧ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಒಕ್ಕೂಟದ ಗುರುಪ್ರಸಾದ್ ಕೆರಗೋಡು ತಿಳಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಧರಣಿ ಸತ್ಯಾಗ್ರಹ ನಡೆಯಲಿದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ಚಿಂತಕ ದೇವನೂರು ಮಹಾದೇವ, ಸಾಹಿತಿ ಕಾಳೇಗೌಡ ನಾಗವಾರ, ಕೋಟಿಗಾನಹಳ್ಳಿ ರಾಮಯ್ಯ ಸೇರಿದಂತೆ ಹಲವರು ಭಾಗವಹಿಸುವರು ಎಂದರು.

ರಾಷ್ಟ್ರಕವಿ ಕುವೆಂಪು ಹೇಳಿದಂತೆ ಜಿಲ್ಲೆಯ ಜನತೆ ಧರ್ಮ, ದುಡಿಮೆ, ಹಸಿರೇ ಉಸಿರು, ಇಂತಹ ಪವಿತ್ರ ಧರ್ಮವನ್ನು ಪಲ್ಲಟಗೊಳಿಸುವ ಉಸಿರು ಕಟ್ಟಿಸುವ ಘಟನಾವಳಿಗಳಿಗೆ ಜಿಲ್ಲೆ ಇತ್ತೀಚಿನ ದಿನಗಳಲ್ಲಿ ಸಾಕ್ಷಿಯಾಗಿದೆ ಎಂದರು.

ಜಿಲ್ಲೆಯ ಜನ ಧರ್ಮ ಉಳುಮೆ, ಉಳುಮೆಯ ಆಚರಣೆಯಿಂದ ಕಟ್ಟಿಕೊಂಡ ಬದುಕು, ಈಗ ಉಳುಮೆಯ ಧರ್ಮವನ್ನು ಮೂಲೆಗೆ ತಳ್ಳಿ ಬಾವುಟ ಧರ್ಮವನ್ನು ಮುಂದೆ ಮಾಡಲಾಗಿದೆ. ಧರ್ಮ ಮತ್ತು ದೇವರನ್ನು ಮುಂದಿಟ್ಟು ಓಟು ಬಾಚಿಕೊಳ್ಳುವ ಸಾಧನೆ ಮಾಡಿಕೊಂಡು ಅಧಿಕಾರದ ಸಿಂಹಾಸನವೇರಲು ಜನರ ಬದುಕನ್ನು ಮೆಟ್ಟಲು ಮಾಡಿಕೊಳ್ಳಲಾಗುತ್ತಿದೆ. ಇದು ಆತಂಕಕಾರಿ ವಿಚಾರವಾಗಿದೆ ಎಂದರು.

ದುಬಾರಿಯಾದ ರಸಗೊಬ್ಬರ, ಬೆಲೆ ಸಿಗದ ಕಬ್ಬು, ಭತ್ತ ಸಕಾಲಕ್ಕೆ ನೆರವಿಗೆ ಬಾರದ ಸರ್ಕಾರಗಳು, ಬಾವುಟವಲ್ಲ. ಇಂತಹ ಸಮಸ್ಯೆಗಳನ್ನು ಎದುರಿಸಲು ಇರಬೇಕಾದ ದುಡಿಮೆಯನ್ನೇ ಧರ್ಮವೆಂದು ಬದುಕುತ್ತಿರುವ ಸಕಲೆಂಟು ಜಾತಿಗಳ ನಡುವೆ ಪ್ರೀತಿ, ವಿಶ್ವಾಸ, ಐಕ್ಯತೆ. ಆದರೆ, ಬಾವುಟದ ಹೆಸರಲ್ಲಿ ಆಡವಾಡುತ್ತಿರುವವರು ರೈತರ, ಕೂಲಿಕಾರರ, ದಲಿತರ, ಮಹಿಳೆಯರ, ಯುವಜನರ ಐಕ್ಯತೆ ಮುರಿದು ಬದುಕನ್ನು ಬೀದಿಗೆಸೆಯುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

ಕೆರಗೋಡಿನಲ್ಲಿ ಹತ್ತಿರುವ ನೆಲಹುಲ್ಲಿನ ಬೆಂಕಿ ಇಡೀ ಜಿಲ್ಲೆಗೆ, ನಾಡಿಗೆ ಹರಡುವ ಮುನ್ನ ಬದುಕು ಮತ್ತು ಸಾಮರಸ್ಯವನ್ನು ಬಲಿ ತೆಗೆದುಕೊಳ್ಳುವ ಮುನ್ನ ನಾವು ನೀರು ಹಾಕುವ ಕೆಲಸ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಫೆ.15ರಂದು ಜಿಲ್ಲಾಕಾರಿ ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದರು.

ಇಡೀ ಘಟನೆಗೆ ಸ್ಥಳೀಯ ಪಂಚಾಯ್ತಿ ಆಡಳಿತ ಮಂಡಳಿಯೇ ನೇರ ಕಾರಣ. ಶಾಸಕರು ಸಹ ಸರಿಯಾದ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದರೆ ಇದನ್ನು ತಪ್ಪಿಸಬಹುದಿತ್ತು ಎಂದು ಪರೋಕ್ಷವಾಗಿ ಶಾಸಕರಿಗೆ ಚಾಟಿ ಬೀಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಟಿ.ಎಲ್.ಕೃಷ್ಣೇಗೌಡ, ಎನ್. ದೊಡ್ಡಯ್ಯ, ಲಕ್ಷ್ಮಣ್ ಚೀರನಹಳ್ಳಿ, ಪ್ರೊ. ಹುಲ್ಕೆರೆ ಮಹದೇವು, ಚಂದ್ರಶೇಖರ್, ವಿಜಯಕುಮಾರ್ ಇದ್ದರು.