ಕುಡಿಯುವ ನೀರಿಗೆ ಒತ್ತಾಯಿಸಿ ತಾಲೂಕಿನ ಬ್ಯಾಗವಾಟ ಗ್ರಾಪಂಗೆ ಬೀಗಹಾಕಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಮಾನ್ವಿ: ಕುಡಿಯುವ ನೀರಿಗೆ ಒತ್ತಾಯಿಸಿ ತಾಲೂಕಿನ ಬ್ಯಾಗವಾಟ ಗ್ರಾಪಂಗೆ ಬೀಗಹಾಕಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಕುಡಿಯುವ ನೀರಿನ ಕೆರೆ ತುಂಬಿದೆ, ಕೆರೆಯ ನೀರನ್ನು ಶುದ್ದೀಕರಿಸಿ ಶುದ್ದ ಕುಡಿಯುವ ನೀರನ್ನು ಗ್ರಾಮಪಂಚಾಯಿತಿ ನೀರು ಸರಬರಾಜು ಮಾಡುವ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಶಿವಕುಮಾರರವರ ನಿರ್ಲಕ್ಷ್ಯದಿಂದಾಗಿ ಗ್ರಾಮದ ಮಲ್ಲಿಕಾರ್ಜುನ ಗುಡ್ಡದ ಬಳಿ ಇರುವ ಕುಡಿಯುವ ನೀರಿನ ಟ್ಯಾಂಕ್ ಅನ್ನು ತುಂಬಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳದೆ ಇರುವುದರಿಂದ ಹಾಗೂ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಶಿಥಿಲಗೊಂಡಿದೆ. ಆ ಟ್ಯಾಂಕ್‌ನಲ್ಲಿ ನೀರನ್ನು ಸಂಗ್ರಹ ಮಾಡುವುದಕ್ಕೆ ಸಾಧ್ಯವಾಗದೆ ಇರುವುದರಿಂದ ಗ್ರಾಮದ ಅಂಬೇಡ್ಕರ್ ನಗರ ಸೇರಿದಂತೆ 4 ವಾರ್ಡ್‌ಗಳಲ್ಲಿನ ಜನರಿಗೆ ಕಳೆದ 6 ದಿನಗಳಿಂದ ಸಮರ್ಪಕವಾಗಿ ಕುಡಿಯುವ ನೀರಿನ ಪೂರೈಕೆಯಾಗದೆ ಪರದಾಡುವಂತಾಗಿದೆ, ಈ ಕುರಿತು ಗ್ರಾಪಂ ಆಡಳಿತಾಧಿಕಾರಿಗಳ ಗಮನಕ್ಕೆ ತರುವುದಕ್ಕೆ ಹೊದರೆ ಅವರು ಕಚೇರಿಗೆ ಸರಿಯಾಗಿ ಬರುವುದೇ ಇಲ್ಲ ಎಂದು ದೂರಿದರು.

ಗ್ರಾಮದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ, ಗ್ರಾಮದಲ್ಲಿನ ಜನರು ಸಂಭ್ರಮದಿಂದ ನಾಡಹಬ್ಬ ದಸರಾ ಆಚರಣೆ ಮಾಡುವುದಕ್ಕೆ ನೀರಿನ ಸಮಸ್ಯೆಯಾಗಿದ್ದು, ಕೂಡಲೇ ಕುಡಿಯುವ ನೀರು ಒದಗಿಸಲು ಕ್ರಮ ವಹಿಸಬೇಕು, ಇಲ್ಲವಾದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.