ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮೈಕ್ರೋ ಫೈನಾನ್ಸ್ ಹಾವಳಿ ತಪ್ಪಿಸಿ ಹಾಗೂ ಆನ್‌ಲೈನ್ ರಮ್ಮಿ ಮತ್ತು ಗೇಮ್‌ಗಳನ್ನು ರಾಜ್ಯದಲ್ಲಿ ನಿಷೇಧ ಮಾಡುವಂತೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರ ಸಂಘದಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಅಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಗೀತಾಹುಡೇದ ಅವರಿಗೆ ಮನವಿ ಸಲ್ಲಿಸಿದರು. ಮೆರವಣಿಗೆಯುದ್ದಕ್ಕೂ ರಾಜ್ಯ ಕೇಂದ್ರ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದರು.ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಿದ್ದು, ರೈತರು ಮಹಿಳೆಯರು ಯುವಕರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ವಸೂಲಾತಿಯಲ್ಲಿ ನಿಯಮವನ್ನು ಪಾಲಿಸುತ್ತಿಲ್ಲ. ಮಾನ ಹಾನಿಕಾರಕವಾದಂತ ಶಬ್ದಗಳನ್ನು ಬಳಕೆ ಮಾಡಿ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ಹಾಗೂ ಇಂಥ ಪ್ರಕರಣ ಬೆಳಕಿಗೆ ಬಂದಾಗ ಪ್ರಕರಣ ದಾಖಲಿಸಲು ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.ವಸೂಲಾತಿಗೆ ಬರುವ ಕಂಪನಿ ಏಜೆಂಟರು ಪೊಲೀಸ್ ಠಾಣೆಯಿಂದ ಯಾವುದೇ ರಹದಾರಿ ಪಡೆದಿರುವುದಿಲ್ಲ. ಇಂತಹ ವಸೂಲುದಾರರ ನೋಂದಣಿಯು ಮತ್ತು ಹಿನ್ನೆಲೆ ಯಾವುದೇ ಠಾಣೆಯಲ್ಲಿ ಗುರುತಿನ ಚೀಟಿ ಸಹ ಇರುವುದಿಲ್ಲ. ಇವರು ಮನಬಂದಂತೆ ವಸೂಲಾತಿಗೆ ಇಳಿಯುತ್ತಾರೆ. ಆರ್‌ಬಿಐ ನಿಯಮಗಳನ್ನು ಸಹ ಪಾಲಿಸುವುದಿಲ್ಲ ಎಂದರು.ಸರ್ಕಾರ ಹೇಳಿಕೆ ನೀಡಿರುವುದು ಕೇವಲ ಪ್ರಕಟಣೆಯಾಗಿ ಮಾತ್ರ ಉಳಿದಿದೆ. ಕಾರಣ ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಎರಡು ಆತ್ಮಹತ್ಯೆಯ ಪ್ರಕರಣಗಳು ಇಂದು ದಾಖಲಾಗಿವೆ. ಆದ್ದರಿಂದ ಲೋಕಸಭಾ ಸದಸ್ಯರು ಮಂತ್ರಿಗಳು ಮೊದಲು ಕೇಂದ್ರ ಸರ್ಕಾರದ ಹಣಕಾಸು ಸಚಿವರ ಜೊತೆ ಚರ್ಚೆ ಮಾಡಿ ಮೈಕ್ರೋ ಫೈನಾನ್ಸ್‌ಗಳ ಮಿತಿಮೀರಿದ ವರ್ತನೆಗೆ ಕಡಿವಾಣಗ ಹಾಕಬೇಕು ಹಾಗೂ ವಸೂಲಾತಿಗೆ ಸ್ಪಷ್ಟ ನಿಖರ ನಿಯಮಗಳನ್ನು ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.ತಕ್ಷಣ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸುಗ್ರೀವಾಜ್ಞೆಯ ಮೂಲಕ ಕಠಿಣ ನಿಯಮಗಳನ್ನು ಜಾರಿಗೆ ತಂದು ಅಕ್ರಮ ಹಾಗೂ ಮಿತಿಮೀರಿದ ವರ್ತನೆ ಮಾಡಿದಂತಹ ಮೈಕ್ರೋ ಫೈನಾನ್ಸ್ ಕಂಪನಿಗಳನ್ನು ರಾಜ್ಯದಿಂದ ಗಡಿಪಾರು ಮಾಡುವ ನಿಯಮವನ್ನು ರೂಪಿಸಬೇಕು ಎಂದರು.ಇಲ್ಲವಾದರೆ ರೈತ ಸಂಘಟನೆಗಳು ಜಾಗೃತರಾಗಿ ಮೈಕ್ರೋ ಫೈನಾನ್ಸ್ ಕಂಪನಿಗಳನ್ನು ಧ್ವಂಸ ಮಾಡುವ ಹಾಗೂ ಬೀಗ ಜಡಿಯುವ ಚಳವಳಿಯನ್ನು ಹಮ್ಮಿಕೊಳ್ಳಬೇಕಾಗುತ್ತದ. ರಾಷ್ಟ್ರೀಕೃತ ಬ್ಯಾಂಕ್ ಗಳು ಹಾಗೂ ಸಹಕಾರಿ ಸಂಘಗಳಲ್ಲಿ ಸಮಯಕ್ಕೆ ಸರಿಯಾಗಿ ದಾಖಲೆಗಳ ಸರಳಿಕರಣ ಕಾರಣ ಮಾಡಿ ಸಕಾಲಕ್ಕೆ ಸಾಲ ಸಿಗುವಂತಿದ್ದರೆ ಇಂತಹ ಅನಾಹುತಗಳು ಸಂಭವಿಸುತ್ತಿರಲಿಲ್ಲ. ಇದನ್ನು ಪರಿಗಣಿಸಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ತಾಲೂಕಿನ ಮಲಿಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಚಿನ್ನವನ್ನು ಬಿಡಿಸಿ ಕೊಡುವಲ್ಲಿ ಜಿಲ್ಲಾಡಳಿತ ಇರುವ ಕಾನೂನು ತೊಡಕುಗಳನ್ನು ಸರಿಪಡಿಸಿ ತಕ್ಷಣ ರೈತರಿಗೆ ಚಿನ್ನವನ್ನು ಮರಳಿ ಕೊಡಿಸಬೇಕು ಹಾಗೂ ಮೊಬೈಲ್ ಗೇಮ್ ಮತ್ತು ಆನ್‌ಲೈನ್ ರೆಮ್ಮಿಗಳಿಗೆ ಕಡಿವಾಣ ಹಾಕಿ ಯುವಕರನ್ನು ರಕ್ಷಿಸಬೇಕೆಂದು ಮನವಿ ಮಾಡಿದರು.ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲಿಯೂರು ಹರ್ಷ, ಜಿಲ್ಲಾ ಕಾರ್ಯದರ್ಶಿ ಮಲಿಯೂರು ಮಹೇಂದ್ರ, ಊಡಿಗಾಲ ಗ್ರಾಮ ಘಟಕದ ಅಧ್ಯಕ್ಷ ಮಂಜುನಾಥ್, ಮಹೇಶ್, ಗುರುಮಲ್ಲಪ್ಪ, ಚೇತನ್, ಪ್ರಕಾಶ್ ಗಾಂಧಿ, ಜನ್ನೂರ್ ಶಾಂತರಾಜ್, ಬಸವರಾಜಪ್ಪ, ಊರದಳ್ಳಿ ರಾಮಣ್ಣ, ಗುರು, ಸೋಮಪ್ಪ ಸದಾನಂದ, ಮಹೇಶ್, ದೇವಪ್ಪ ದೇವಪ್ಪ ಶಿವಪ್ಪ ಕಿಲಪುರ ನಂದೀಶ್, ಶ್ರೀಕಂoಠ, ಗುರುವಿನಪುರ ಚಂದ್ರಮೋಹನ್, ಮುಕ್ಕಡಹಳ್ಳಿ ರಾಜು, ಪುಟ್ಟಮಲ್ಲೆಗೌಡ, ಜಗದಾಂಬಿಕ, ಗಿರಿಜಾ, ಲಕ್ಷ್ಮಮ್ಮ, ಮಂಜು, ಬಾಬು, ಪಿ ಮರಳಿ, ಶಿವಣ್ಣ ಇತರರು ಭಾಗವಹಿಸಿದ್ದರು.-------28ಸಿಎಚ್‌ಎನ್51ಮೈಕ್ರೋ ಫೈನಾನ್ಸ್ ಹಾವಳಿ ತಪ್ಪಿಸಿ ಹಾಗೂ ಆನ್‌ಲೈನ್ ರಮ್ಮಿ ಮತ್ತು ಗೇಮ್‌ಗಳನ್ನು ರಾಜ್ಯದಲ್ಲಿ ನಿಷೇಧದ ಮಾಡುವಂತೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರ ಸಂಘದದಿಂದ ಚಾಮರಾಜನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.--------