ಸಾರಾಂಶ
ಅಂಗವಿಕಲರ, ಪಾಲಕರ ಒಕ್ಕೂಟ ತಾಲೂಕು ಸಮಿತಿಯಿಂದ ಮನವಿ
ಕನ್ನಡಪ್ರಭ ವಾರ್ತೆ ಕುಷ್ಟಗಿವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ತಾಲೂಕು ಸಮಿತಿಯಿಂದ ಪಟ್ಟಣದ ತಾಲೂಕು ಪಂಚಾಯಿತಿಯ ಆವರಣದಲ್ಲಿ ಪ್ರತಿಭಟನೆ ನಡೆಸಿ ತಾಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಬೆಲೆ ಏರಿಕೆಯಿಂದಾಗಿ ಅಂಗವಿಕಲರು ಬದುಕು ಸಾಗಿಸುವುದು ಕಷ್ಟವಾಗಿದೆ. ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಆತಂಕ ಕಾಡುತ್ತಿದೆ. ಅಂಗವಿಕಲರಿಗೆ ಬೇಕಾಗುವ ವೈದ್ಯಕಿಯ ಸೌಲಭ್ಯಗಳ ದರವು ಏರಿಕೆಯಾಗುತ್ತಿದೆ. ಆದರೆ ನಮಗೆ ಸಿಗಬೇಕಾದ ಸಹಾಯಧನ ಏರಿಕೆಯಾಗುತ್ತಿಲ್ಲ. ಈ ಕುರಿತು ಸೆ. 4ರಂದು ಕಾರಟಗಿಯಲ್ಲಿರುವ ಸಚಿವರ ಮನೆಯ ಮುಂದೆ ಬ್ರಹತ್ ಪ್ರತಿಭಟನೆ ನಡೆಯಲಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಜೆಟ್ ಮಾತ್ರ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಆದರೆ ಕೇಂದ್ರ ಸರ್ಕಾರ ನೀಡುವ ಅಂಗವಿಕಲರ ಮಾಸಾಶನ ಮಾತ್ರ ಏರಿಕೆ ಕಂಡಿಲ್ಲ. ಅಂಗವಿಕಲರನ್ನು ದಿವ್ಯಾಂಗರೆಂದು ಕರೆಯುವ ಕೇಂದ್ರ ಸರ್ಕಾರಕ್ಕೆ ಮಾಸಾಶನದ ಮೊತ್ತ ಹಾಗೂ ಸೌಲಭ್ಯಗಳನ್ನು ಏರಿಸಬೇಕು ಎಂದು ಅರಿವಿಲ್ಲವೇ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.ಬೇರೆ ರಾಜ್ಯಗಳಲ್ಲಿ ಅಂಗವಿಕಲರ ಮಾಸಾಶನ, ವೈದ್ಯಕೀಯ ಸೌಲಭ್ಯಗಳು ಉತ್ತಮವಾಗಿದ್ದು, ನಮ್ಮ ರಾಜ್ಯದಲ್ಲಿ ಯಾಕಿಲ್ಲ? ಈ ಕುರಿತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ವಿ.ಆರ್.ಡಬ್ಲ್ಯೂ, ಎಂ.ಆರ್.ಡಬ್ಲ್ಯೂ, ಯು.ಆರ್.ಡಬ್ಲ್ಯೂಗಳ ವೇತನ ಏರಿಕೆಯಾಗಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ರಂಗಪ್ಪ ದಾಸರ, ಶರಣಪ್ಪ ಮಡಿವಾಳರ, ಬಸವರಾಜ ಮೇಳಿ, ಬಸವರಾಜ ಗೋನಾಳ, ದುರಗಪ್ಪ, ಶರಣಪ್ಪ, ಹನಮಂತ ರಾಗಿ, ಶರಣಪ್ಪ ಬಿಸನಾಳ, ಶಿವಪ್ಪ, ಕನಕಪ್ಪ ಸೇರಿದಂತೆ ಇತರರಿದ್ದರು.ಬೇಡಿಕೆಗಳುಅಂಗವಿಕಲರ ಸಹಾಯಧನ ₹10 ಸಾವಿರ ನೀಡಬೇಕು.
ಪಂಚಾಯಿತಿಯಲ್ಲಿ ಶೇ.5ರಷ್ಟು ಹಣ ಅಂಗವಿಕಲರ ಕಲ್ಯಾಣಕ್ಕಾಗಿ ಬಳಕೆಯಾಗಬೇಕು.ಉದ್ಯೋಗ ಖಾತ್ರಿಯನ್ನು ಅಂಗವಿಕಲರಿಗೆ ಸಮರ್ಪಕವಾಗಿ ಬಳಸುವಂತಾಗಲು ಪಂಚಾಯಿತಿಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕು.
ಹತ್ತನೇ ತರಗತಿ ಪಾಸಾದ ಎಲ್ಲ ಅಂಗವಿಕಲರಿಗೆ ಉದ್ಯೋಗ ನೀಡಬೇಕು.ಖಾಸಗಿ ವಲಯದಲ್ಲೂ ಅಂಗವಿಕಲರ ಮೀಸಲಾತಿ ಅನುಷ್ಠಾನಗೊಳಿಸಬೇಕು.
ಅಂಗವಿಕಲರಿಗಾಗಿ ಕೆಲಸ ಮಾಡುತ್ತಿರುವ ಪುನರ್ವಸತಿ ಕಾರ್ಯಕರ್ತರಿಗೆ ಕನಿಷ್ಠ ವೇತನ ಜಾರಿ ಮಾಡಬೇಕು.