ಸರ್ಕಾರಿ ಶಾಲೆಗಳ ಉಳಿಸಿ, ಶಿಕ್ಷಕ ಹುದ್ದೆ ಭರ್ತಿಗಾಗಿ ಪ್ರತಿಭಟನೆ

| Published : Nov 22 2025, 01:30 AM IST

ಸಾರಾಂಶ

ರಾಜ್ಯದಲ್ಲಿ 700 ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಿ, ಸುತ್ತಮುತ್ತಲಿನ ಸರ್ಕಾರಿ ಶಾಲೆ, ಪಿಯು ಕಾಲೇಜುಗಳನ್ನು ವಿಲೀನಗೊಳಿಸುವ ಹೆಸರಿನಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳನ್ನೇ ಮುಚ್ಚಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ನಗರದಲ್ಲಿ ಶುಕ್ರವಾರ ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಸಂಚಾಲನಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

- ಪಬ್ಲಿಕ್ ಶಾಲೆ ನೆಪದಲ್ಲಿ ಸರ್ಕಾರಿ ಶಾಲೆ ಮುಚ್ಚುವ ಹುನ್ನಾರ: ಎಸ್‌ಎಫ್ಐ ಅಸಮಾಧಾನ ।- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದಲ್ಲಿ 700 ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಿ, ಸುತ್ತಮುತ್ತಲಿನ ಸರ್ಕಾರಿ ಶಾಲೆ, ಪಿಯು ಕಾಲೇಜುಗಳನ್ನು ವಿಲೀನಗೊಳಿಸುವ ಹೆಸರಿನಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳನ್ನೇ ಮುಚ್ಚಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ನಗರದಲ್ಲಿ ಶುಕ್ರವಾರ ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಸಂಚಾಲನಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ಸರ್ಕಾರದ ಕ್ರಮ ಖಂಡಿಸಿ ಘೋಷಣೆ ಕೂಗುವ ಮೂಲಕ ಎಸ್‌ಎಫ್ಐ ಜಿಲ್ಲಾ ಸಮಿತಿ ಪದಾಧಿಕಾರಿಗಳು, ಮುಖಂಡರು, ವಿದ್ಯಾರ್ಥಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ. ಬಳಿಕ ಉಪವಿಭಾಗಾಧಿಕಾರಿ ಕಚೇರಿ ಅಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.

ಸಂಘಟನೆ ಜಿಲ್ಲಾ ಸಂಚಾಲಕ ಎಲ್.ಜಿ.ಸಂಜು ನಾಯ್ಕ ಮಾತನಾಡಿ, ರಾಜ್ಯದಲ್ಲಿ ಸುಮಾರು 47,493 ಸರ್ಕಾರಿ ಶಾಲೆ, ಪದವಿಪೂರ್ವ ಕಾಲೇಜುಗಳಿವೆ. ಈ ಪೈಕಿ 19,603 ಪ್ರಾಥಮಿಕ ಶಾಲೆ, 21,676 ಹಿರಿಯ ಪ್ರಾಥಮಿಕ ಶಾಲೆ, 4,895 ಪ್ರೌಢಶಾಲೆ, 1,319 ಪಿಯು ಕಾಲೇಜುಗಳಾಗಿವೆ. 309 ಕರ್ನಾಟಕ ಪಬ್ಲಿಕ್ ಶಾಲೆಗಳಿವೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯು 2015-16ರಲ್ಲಿ 47.1 ಲಕ್ಷದಿಂದ 2025-26ರಲ್ಲಿ 38.2 ಲಕ್ಷಕ್ಕೆ ಅಂದರೆ ಶೇ.19ರಷ್ಟು ಕಡಿಮೆಯಾಗಿದೆ. ಒಟ್ಟು ದಾಖಲಾತಿಯಲ್ಲಿ ಸರ್ಕಾರಿ ಶಾಲೆಗಳ ಪಾಲು 46% ರಿಂದ 38% ಕ್ಕೆ ಕುಸಿದಿದೆ ಎಂದರು.

ಆದರೆ, ಖಾಸಗಿ ಅನುದಾನ ರಹಿತ ಶಾಲೆಗಳ ಪಾಲು 2015-16ರಲ್ಲಿ 36.3 ಲಕ್ಷ ವಿದ್ಯಾರ್ಥಿಗಳಿಂದ 2025-26ರಲ್ಲಿ 47 ಲಕ್ಷ ವಿದ್ಯಾರ್ಥಿಗಳಿಗೆ ಅಂದರೆ ಶೇ.29ರಷ್ಟು ದಾಖಲಾಗಿ ಹೆಚ್ಚಾಗಿದೆ. ಸರ್ಕಾರ 2017-18 ರಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯನ್ನು ತಾಲೂಕಿಗೊಂದು ಕೆಪಿಎಸ್ ಶಾಲೆ ಪ್ರಾರಂಭಿಸುವುದಾಗಿ 2018ರಲ್ಲಿ 175 ಸರ್ಕಾರಿ ಶಾಲೆ, 2019ರಲ್ಲಿ 100 ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಉನ್ನತೀಕರಿಸಿದೆ. ನಂತರ ಹೊಸ ಶಿಕ್ಷಣ ನೀತಿ ಜಾರಿಯಾದ ನಂತರ ಎನ್‌ಇಪಿಯಲ್ಲಿ ತಿಳಿಸಿದಂತೆ ಪಂಚಾಯತಿಗೊಂದು ಶಾಲೆ ಮಾಡಲು ಸರ್ಕಾರ ಮುಂದಾಗಿದೆ ಎಂದು ದೂರಿದರು.

2025 ರಿಂದ 2027 ರೊಳಗೆ ರಾಜ್ಯದಲ್ಲಿ 700 ಪಂಚಾಯಿತಿಗಳಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಉನ್ನತೀಕರಿಸಿ ಪಂಚಾಯಿತಿ ವ್ಯಾಪ್ತಿ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚಲು ಸರ್ಕಾರ ಮುಂದಾಗಿದೆ. ಈಗಾಗಲೇ ಉನ್ನತೀಕರಣ ಮಾಡಲಾದ ಕೆಪಿಎಸ್ ಶಾಲೆಗಳಲ್ಲಿ ಸರ್ಕಾರ ತಿಳಿಸಿರುವ ಆಡಳಿತಾತ್ಮಕ ಕ್ರಮ ಜಾರಿಗೊಳಿಸಲು ಸರ್ಕಾರ ವಿಫಲವಾಗಿದೆ. ಉನ್ನತೀಕರಣ ಮಾಡಲಾಗಿರುವ 304 ಕೆಪಿಎಸ್ ಶಾಲೆಗಳಿಗೆ ಸರಿಯಾಗಿ ಮೂಲಸೌಕರ್ಯ ಹಾಗೂ ಶಿಕ್ಷಕರ ನೇಮಕಾತಿ ಮಾಡಿಲ್ಲ. 2017ರಿಂದ 2024-25 ರವರೆಗೆ ಪ್ರಸ್ತುತ 308 ಕರ್ನಾಟಕ ಪಬ್ಲಿಕ್ ಶಾಲೆಗಳಿವೆ. ಆದರೆ ಹೊಸ 304 ಕೆಪಿಎಸ್ ಶಾಲೆ ಕಟ್ಟಡ ನಿರ್ಮಾಣ ಮಾಡಿಲ್ಲ ಎಂದು ಆರೋಪಿಸಿದರು.

4 ಕೆಪಿಎಸ್‌ ಶಾಲೆಗಳನ್ನು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ನಿಧಿಯಲ್ಲಿ ಕಾರ್ಪೊರೇಟ್ ಉದ್ಯಮಿಗಳು ನಿರ್ಮಾಣ ಮಾಡಿ ಸರ್ಕಾರಕ್ಕೆ ಹಸ್ತಾಂತರಿಸಿದ್ದಾರೆ. ಸರ್ಕಾರಿ ಶಾಲೆ ಉನ್ನತೀಕರಣ ಮಾಡಿದ್ದೇವೆಂದು ಹೇಳಿ ಅದೇ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಮರುನಾಮಕರಣ ಮಾಡಿದ್ದಾರೆ. ಹೊಸ ಕೆಪಿಎಸ್ ಶಾಲೆಗಳನ್ನು ಪ್ರಾರಂಭ ಮಾಡಲು ಎನ್.ಜಿ.ಒ., ಕಾರ್ಪೋರೆಟ್ ಸಂಸ್ಥೆ, ಸ್ವಯಂ ಸೇವಾ ಸಂಸ್ಥೆಗಳು, ಆಸಕ್ತ ದಾನಿಗಳು ಶಾಲೆಗಳನ್ನು ಪ್ರಾರಂಭ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹಲವು ಮಾನದಂಡಗಳನ್ನು ಸುತ್ತೋಲೆಯಲ್ಲಿ ತಿಳಿಸಿದೆ ಎಂದು ತಿಳಿಸಿದರು.

ಸಂಘಟನೆ ಮುಖಂಡರಾದ ಬೀರೇಶ ಕಾಳಪ್ಪನವರ, ಎ.ದಯಾನಂದ, ಪಿ.ವರುಣಕುಮಾರ, ಜಿ.ಎಸ್.ಲೋಕೇಶಗೌಡ, ಅರಾ ಫತ್ ಅಲಿ ಇತರರು ಇದ್ದರು.

- - -

(ಬಾಕ್ಸ್‌) * 59,000 ಶಿಕ್ಷಕರ ಹುದ್ದೆ ನೇಮಕಾತಿಗೆ ಮುಂದಾಗಿ 25-10-2021ರ ಸುತ್ತೋಲೆ ಪ್ರಕಾರ ಸಿಎಸ್‌ಆರ್‌ ನಿಧಿಯಲ್ಲಿ ಪ್ರಾರಂಭವಾಗುವ ಹೊಸ ಕೆಪಿಎಸ್‌ ಶಾಲೆಗಳಿಗೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಸಂಪೂರ್ಣ ವೆಚ್ಚ ದಾನಿಗಳು, ಸಂಸ್ಥೆಗಳು ಭರಿಸಬೇಕು, ಅಗತ್ಯ ಮೂಲಸೌಕರ್ಯ ಮತ್ತು ಅತಿಥಿ ಶಿಕ್ಷಕರು ಮತ್ತು ಆಯಾಗಳನ್ನು ನೇಮಕ ಮಾಡಿ, 2 ವರ್ಷ ಅವಧಿಗೆ ನಿಯಮಾನುಸಾರ ಗೌರವ ಸಂಭಾವನೆ ಪಾವತಿಸಲು ಸಿದ್ಧರಿರುವಂತೆ ಮಾನದಂಡದಲ್ಲಿ ತಿಳಿಸಿದೆ ಎಂದು ಎಲ್.ಜಿ.ಸಂಜು ನಾಯ್ಕ ಹೇಳಿದರು.

ಮಾನದಂಡಗಳ ಪ್ರಕಾರ ಸಂಪೂರ್ಣ ಖಾಸಗಿ ಆಡಳಿತಕ್ಕೆ ಅವಕಾಶ ಮಾಡಿಕೊಡುತ್ತಿದೆ. ಸರ್ಕಾರ ಮೂಲಸೌಕರ್ಯ ಒದಗಿಸುವುದಿಲ್ಲ. ಸರ್ಕಾರ ಒಟ್ಟಿನಲ್ಲಿ ಶಾಲೆಗಳನ್ನು ಖಾಸಗಿಯವರಿಗೆ, ಸಂಘ ಸಂಸ್ಥೆಯವರಿಗೆ ಬಿಟ್ಟು ಕೊಡುವ ಪ್ರಯತ್ನ ಮಾಡುತ್ತಿದೆ. ಸರ್ಕಾರ ಜವಾಬ್ದಾರಿಯನ್ನು ಖಾಸಗಿಯವರಿಗೆ ಹೆಗಲಿಗೆ ಹಾಕಿ ಕೈ ತೊಳದುಕೊಳ್ಳಲು ಮುಂದಾಗಿದೆ ಎಂದು ಟೀಕಿಸಿದರು. ವಿಲೀನದ ಹೆಸರಿನಲ್ಲಿ ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು. ರಾಜ್ಯದ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಬೇಕು. ಖಾಲಿ ಇರುವ 59,000 ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

- - -

-21ಕೆಡಿವಿಜಿ5:

ರಾಜ್ಯದಲ್ಲಿ 47 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ಕೈಬಿಡುವಂತೆ ದಾವಣಗೆರೆಯಲ್ಲಿ ಎಸ್ಎಫ್ಐ ಸಂಘಟನೆ ಪ್ರತಿಭಟನೆ ನಡೆಸಿ, ಎಸಿ ಕಚೇರಿ ಅಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿತು.