ತಿಪಟೂರು: ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಪ್ರತಿಭಟನೆ

| Published : Jan 14 2024, 01:35 AM IST / Updated: Jan 14 2024, 04:23 PM IST

ಸಾರಾಂಶ

ತಿಪಟೂರು ತಾಲೂಕಿನ ಕಸಬಾ ಹೋಬಳಿ ಹುಚ್ಚನಹಟ್ಟಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದ ಇಲ್ಲಿನ ಮಹಿಳೆಯರಿಗೆ ನೆಮ್ಮದಿ ಇಲ್ಲದಂತಾಗಿದೆ.

ಕನ್ನಡಪ್ರಭ ವಾರ್ತೆ ತಿಪಟೂರು

ತಾಲೂಕಿನ ಕಸಬಾ ಹೋಬಳಿ ಹುಚ್ಚನಹಟ್ಟಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದ ಇಲ್ಲಿನ ಮಹಿಳೆಯರಿಗೆ ನೆಮ್ಮದಿ ಇಲ್ಲದಂತಾಗಿದೆ. 

ಈ ಬಗ್ಗೆ ಅಬಕಾರಿ ಇಲಾಖೆಗೆ ಹಾಗೂ ಸಂಬಂದಪಟ್ಟ ಪೊಲೀಸ್ ಠಾಣೆಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಹುಚ್ಚನಹಟ್ಟಿ ಗ್ರಾಮದ ೨೦ಕ್ಕೂ ಹೆಚ್ಚು ಮಹಿಳೆಯರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಪವನ್‌ಕುಮಾರ್‌ಗೆ ಮನವಿ ಸಲ್ಲಿಸಿದರು.

ಸ್ತ್ರೀಶಕ್ತಿ ಸಂಘದ ಮಹಿಳೆ ದೇವಿರಮ್ಮ ಮಾತನಾಡಿ, ನಮ್ಮ ಗ್ರಾಮದಲ್ಲಿ ಸುಮಾರು 120 ಮನೆಗಳಿದ್ದು, ಇಲ್ಲಿನ ಜನರು ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಇಲ್ಲಿನ 10ಕ್ಕೂ ಹೆಚ್ಚು ಚಿಲ್ಲರೆ ಅಂಗಡಿಗಳಲ್ಲಿ ಹಲವು ವರ್ಷಗಳಿಂದಲೂ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ನಮ್ಮ ಮನೆಗಳ ದುಡಿಯುವ ಗಂಡಸರು ಕುಡಿತದ ಚಟಕ್ಕೆ ಒಳಗಾಗಿ ಕೂಲಿ ಮಾಡಿದ ಹಣವನ್ನೆಲ್ಲಾ ವ್ಯಯ ಮಾಡುತ್ತಿದ್ದಾರೆ. 

ಇದರಿಂದ ಜೀವನ ನಡೆಸುವುದು ಕಷ್ಟಕರವಾಗುತ್ತಿದೆ. ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ನಮ್ಮ ದೈನಂದಿನ ಜೀವನವನ್ನು ನಿರ್ವಹಿಸುವುದು ಹೇಗೆಂಬ ಚಿಂತೆ ಕಾಡುತ್ತಿದೆ. ಮಹಿಳೆಯರು ಅಕ್ರಮ ಮದ್ಯ ಮಾರಾಟದ ಅಂಗಡಿಗಳಿಗೆ ಹೋಗಿ ಗಲಾಟೆ ಮಾಡಿದರೆ ನೀವು ಯಾರಿಗಾದರೂ ದೂರು ಕೊಡಿ, ನಾವು ಹೆದರುವುದಿಲ್ಲ ಎಂದು ಬಹಿರಂಗವಾಗಿ ಹೇಳುತ್ತಾರೆ. 

ಅಲ್ಲದೆ ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯ ಮಾರುವ ಅಂಗಡಿಯವರಿಗೆ ಸೂಚನೆ ಕೊಟ್ಟು ಸುಮ್ಮನೆ ಬಂದು ನಾಟಕವಾಡಿ ಹೋಗುತ್ತಾರೆ. ಮದ್ಯದ ಅಂಗಡಿಯವರೊಂದಿಗೆ ಅಧಿಕಾರಿಗಳು ಶಾಮೀಲಾಗಿದ್ದು, ಇದರಿಂದ ಎಷ್ಟೋ ಬಡ ಕುಟುಂಬಗಳು ಬೀದಿಪಾಲಾಗುತ್ತಿವೆ. ಈ ಬಗ್ಗೆ ಕೂಡಲೆ ಕ್ರಮಕೈಗೊಂಡು ಅಕ್ರಮ ಮದ್ಯಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.

ಕಾಡುಗೊಲ್ಲ ಸಮಾಜದ ತಾ. ಅಧ್ಯಕ್ಷ ಬಾಲರಾಜು ಮತ್ತು ಕೆಆರ್‌ಎಸ್ ಪಕ್ಷದ ಶಿವಕುಮಾರ್ ಮತ್ತಿಹಳ್ಳಿ ಮಾತನಾಡಿ, ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಹಲವಾರು ವರ್ಷಗಳಿಂದಲೂ ನಡೆಯುತ್ತಿದ್ದು ದಿನದಿಂದ ದಿನಕ್ಕೆ ಕುಡುಕರ ಹಾವಳಿ ಹೆಚ್ಚಾಗುತ್ತಿದೆ. 

ಕಾನೂನು ಬಾಹಿರವಾಗಿ ಮನೆಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದರೂ, ಅಬಕಾರಿ ಇಲಾಖೆ ಕಾನೂನು ಕ್ರಮ ತೆಗೆದುಕೊಳ್ಳದೆ ಮೀನಮೇಷ ಎಣಿಸುತ್ತಿದೆ. ಇದರಿಂದ ಅನೇಕ ಸಂಸಾರಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿವೆ. 

ಈ ಬಗ್ಗೆ ಹಲವು ಬಾರಿ ಅಬಕಾರಿ ಇಲಾಖೆಗೆ ದೂರು ನೀಡಿದರೂ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಕೂಡಲೇ ಅಧಿಕಾರಿಗಳು ಕ್ರಮಕೈಗೊಂಡು ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಅಬಕಾರಿ ಇಲಾಖೆ ಮುಂದೆ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಪವನ್‌ಕುಮಾರ್, ಅಕ್ರಮ ಮದ್ಯ ಮಾರಾಟ ಒಂದು ಸಾಮಾಜಿಕ ಪಿಡುಗಾಗಿದೆ. ಗ್ರಾಮಸ್ಥರು ಈಗಾಗಲೇ ಅಬಕಾರಿ ಇಲಾಖೆಗೆ ಮನವಿ ನೀಡಿದ್ದೇವೆಂದು ಹೇಳಿದ್ದು, ನಾನು ಮತ್ತೊಮ್ಮೆ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು.

ಪ್ರತಿಭಟನೆಯಲ್ಲಿ ಗ್ರಾಮದ ಮಹಿಳೆಯರಾದ ಶ್ವೇತಾ, ಶಾರಮ್ಮ, ಭಾರತಿ, ಶಿವಮ್ಮ, ಜ್ಯೋತಿ, ಶಶಿಕಲಾ, ಮಲ್ಲಿಗಮ್ಮ, ಭವ್ಯ, ರತ್ನ, ಉಮಾದೇವಿ, ಕೆಂಪದೇವಿ, ರೇಣುಕ, ಶೈಮಲಮ್ಮ ಸೇರಿದಂತೆ ೨೦ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.