ಸರ್ವೇ ಕಾರ್ಯ ಸ್ಥಗಿತಗೊಳಿಸುವಂತೆ ಪ್ರತಿಭಟನೆ

| Published : Feb 26 2025, 01:04 AM IST

ಸಾರಾಂಶ

ಈ ವೇಳೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದರಿಂದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಸುಮಾರು ಎರಡು ಬಸ್ ಜನರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ

ಹೊನ್ನಾವರ: ತಾಲೂಕಿನ ಕಾಸರಕೋಡಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಬಂದರು ಕಾರ್ಯ ಸಂಬಂಧ ಸಂಪರ್ಕ ರಸ್ತೆ ಸರ್ವೇ ಕಾರ್ಯ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಶಾಲಾ ಮಕ್ಕಳು ಸೇರಿದಂತೆ ಸ್ಥಳೀಯರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.

ಎಂಟುನೂರಕ್ಕೂ ಅಧಿಕ ಪೊಲೀಸರ ಸರ್ಪಗಾವಲಿನಲ್ಲಿ ಸರ್ವೇ ಕಾರ್ಯ ನಿರಾತಂಕವಾಗಿ ನಡೆಯಿತು. ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಮಂದಿ ಪ್ರತಿಭಟನೆ ಕೈಗೊಂಡರು. ಹೀಗಿದ್ದೂ ಸರ್ವೇ ಕಾರ್ಯ ಅಧಿಕಾರಿಗಳು ಮುಂದುವರೆಸಿದರು. ಬಿಗಿ ಪೊಲೀಸ್‌ ಬಂದೋಬಸ್ತ್ ನಡುವೆ ಗಡಿ ಗುರುತನ್ನು ಅಧಿಕಾರಿಗಳು ಮಾಡಿದ್ದಾರೆ.

ಈ ಹಿಂದೆ ಅನೇಕ ಬಾರಿ ಪೊಲೀಸ್ ಬಂದೋಬಸ್ತ್ ನಲ್ಲಿ ಸರ್ವೇ ಮಾಡಲು ಮತ್ತು ರಸ್ತೆ ನಿರ್ಮಾಣ ಕೆಲಸ ಮಾಡಲು ಕಂಪನಿ ಪ್ರಯತ್ನ ಪಟ್ಟರೂ ಮೀನುಗಾರರ ಬಿಗು ಹೋರಾಟ ಅವಕಾಶ ಮಾಡಿಕೊಟ್ಟಿರಲಿಲ್ಲ. ಮೀನುಗಾರರ ಮತ್ತು ಗುತ್ತಿಗೆ ಪಡೆದ ಕಂಪನಿಯ ನಡುವೆ ಹೋರಾಟ ನಡೆಯುತ್ತಲೆ ಇತ್ತು. ಮಂಗಳವಾರ ಮಾತ್ರ ಅದಾವುದಕ್ಕೂ ಅವಕಾಶ ನೀಡದ ಆಡಳಿತ ವ್ಯವಸ್ಥೆ ಪ್ರಾರಂಭದಲ್ಲೇ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಿ ಸರ್ವೇ ಮಾಡಲು ಸಿದ್ಧತೆ ಮಾಡಿಕೊಂಡಿತ್ತು.

ಈ ವೇಳೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದರಿಂದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಸುಮಾರು ಎರಡು ಬಸ್ ಜನರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರ ವರ್ತನೆಯಿಂದ ಕೋಪಗೊಂಡ ಸ್ಥಳೀಯರು ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದರು. ಅಲ್ಲದೆ ಬಂಧಿತರನ್ನು ಬಿಡದೆ ಇದ್ದರೆ ಸಮುದ್ರಕ್ಕೆ ಹಾರಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು. ಸಮುದ್ರಕ್ಕೆ ಇಳಿದ ಮೂವರು ಮಹಿಳೆಯರು ಅಸ್ವಸ್ಥಗೊಂಡಿದ್ದಾರೆ. ಅವರನ್ನು ಕೂಡಲೇ ಆ್ಯಂಬುಲೆನ್ಸ್‌ ಮೂಲಕ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಅವರಲ್ಲಿ ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಹೊರ ಜಿಲ್ಲೆಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸ್ಥಳೀಯರು ಪ್ರತಿಭಟನೆ ಬಿಗಿಗೊಳಿಸಿದಂತೆ ಪೊಲೀಸರು ದಾಳಿ ಮಾಡಿ ಅಟ್ಟಾಡಿಸಿಕೊಂಡು ಹೋಗಿ ಬಂಧಿಸಿದರು.

ಮಹಿಳೆಯರ ಪ್ರತಿಭಟನೆ ಮತ್ತಷ್ಟು ಜೋರಾದಂತೆ ಹೋರಾಟಕ್ಕೆ ಮುಂದಾದ ಮಹಿಳೆಯರನ್ನು ಎಳೆದುಕೊಂಡು ಹೋಗಿ ಬಸ್ ಹತ್ತಿಸಿ ಮಂಕಿಯಲ್ಲಿರುವ ವಿಪತ್ತು ಪರಿಹಾರ ಕೇಂದ್ರದಲ್ಲಿ ಇಡಲಾಗಿದೆ. ನೂಕು ನುಗ್ಗಾಟದಲ್ಲಿ ಭಟ್ಕಳ ಡಿವೈಎಸ್ ಪಿ ಮಹೇಶ್ ಎಂ.ಕೆ ಮತ್ತು ಮಹಿಳಾ ಪಿ.ಎಸ್. ಐಗೆ ಪೆಟ್ಟಾಗಿದೆ.

ಸಚಿವರ ಹೆಸರು ಬರೆದಿಟ್ಟು ಆತ್ಮಹತ್ಯೆ:

ಇದೇ ವೇಳೆ ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ವಾಣಿಜ್ಯ ಬಂದರು ಸರ್ವೇ ಕಾರ್ಯ ನಡೆಯುವ ಸ್ಥಳಕ್ಕೆ ಬಂದು ನಮಗೆ ರಕ್ಷಣೆ ನೀಡಬೇಕು. ಬಂಧಿತರನ್ನು ಬಿಡುಗಡೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳದೆ ಇದ್ದರೆ ಸಚಿವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಆಕ್ರೋಶ ಹೊರ ಹಾಕಿದರು.

ಮುಗಿದ ಸರ್ವೇ ಕಾರ್ಯ:

ಟೊ೦ಕಾ ಪ್ರದೇಶದಲ್ಲಿ ಈ ಹಿಂದೆ ೫೦ ಮೀ ಸರ್ವೇ ನಡೆಸಿತ್ತು, ಈ ಬಾರಿ ೩೫ ಮೀ ಸರ್ವೆ ನಡೆಸಿದ್ದು, ಅಂದಾಜು ಎರಡೂವರೆ ಕಿಮೀನಷ್ಟು ಸರ್ವೇ ಮಾಡಿದೆ. ಸರ್ವೇ ನಡೆಸಿ ಗುರುತು ಮಾಡಿ ಎಂಬತ್ತಕ್ಕಿಂತ ಹೆಚ್ಚು ಕಂಬ ಹಾಕಿ ಗಡಿ ಗುರುತು ಮಾಡಿದೆ. ಸರ್ವೇ ವ್ಯಾಪ್ತಿಗೆ ಒಳಪಡುವ ಮನೆಗಳ ಮಾಹಿತಿ ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಒಂದು ಕಡೆ ಪ್ರತಿಭಟನೆ, ಗಲಾಟೆ, ಬಂಧನ, ಆಸ್ಪತ್ರೆಗೆ ರವಾನೆ, ಮಾತಿಗೆ ಮಾತು ನಡೆಯುತ್ತಿದ್ದರೆ ಮತ್ತೊಂದು ಕಡೆ ನಿಷೇಧಾಜ್ಞೆಯ ಪ್ರಮುಖ ಉದ್ದೇಶ ಸರ್ವೇ ಕೆಲಸ ನಡೆದಿದೆ.

೩೨ ಮೀಟರ್ ಅಗಲದ ರಸ್ತೆ ನಿರ್ಮಾಣಕ್ಕೆ ಸರ್ವೇ ನಡೆದಿದೆ. ಇದರಿಂದ ೧೨೧ ಮನೆಗಳಿಗೆ ಹಾನಿಯಾಗುತ್ತದೆ. ಆದರೆ ಸಚಿವರು ಕೇವಲ ೮ ಮನೆಗೆ ಹಾನಿಯಾಗಲಿದೆ ಎಂದು ಹೇಳಿರುವ ಬಗ್ಗೆ ಅಧಿಕಾರಿಗಳು ಹೇಳುತ್ತಾರೆ. ನಮ್ಮ ಪ್ರಮುಖ ಬೇಡಿಕೆ ಮೊದಲು ನಮ್ಮ ಸ್ಥಳ ಸರ್ವೇ ಮಾಡಿ ನಾವು ವಾಸಿಸುತ್ತಿದ್ದ ಸರ್ವೇ ನಂ. ೩೦೩ ಪ್ರದೇಶ ಏನಾಗಿದೆ. ಈ ಹಿಂದಿನಿಂದಲೂ ಈ ಪ್ರದೇಶದಲ್ಲಿ ನಾವು ವಾಸಿಸುತ್ತಿದ್ದೇವೆ. ಆದರೆ ಏಕಾಏಕಿ ೩೦೫ ಸರ್ವೇ ನಂಬರ್ ಸಿದ್ಧಪಡಿಸಿ ಪೊರ್ಟ್ ಕಂಪನಿಗೆ ನೀಡಿದ್ದು ಯಾಕೆ ? ಪೊಲೀಸ್ ದಬ್ಬಾಳಿಕೆ ನಡುವೆ ಸರ್ವೇ ಮಾಡಲು ಅನುಮತಿ ನೀಡಿದವರು ಯಾರು ಎಂದು ಪ್ರಶ್ನಿಸಲು ಬಂದವರನ್ನೆ ದೌರ್ಜನ್ಯ ಮಾಡಿ ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ ಎಂದು ಮೀನುಗಾರ ಮುಖಂಡ ಹಮ್ಜಾ ಪಟೇಲ್ ಹೇಳಿದ್ದಾರೆ.

ಸರ್ವೇ ಮಾಡಲು ಸರ್ಕಾರ ಆದೇಶಿಸಿದ್ದರೆ ಅದರ ಪ್ರತಿ ತೋರಿಸಿ, ಅದರನ್ನು ಜನತೆಗೆ ತೋರಿಸಿ ತಿಳಿ ಹೇಳುತ್ತೇವೆ ಎಂದು ನಾವು ಹೇಳಿದ್ದೇವೆ. ಕೆಲವೇ ದಿನದಲ್ಲಿ ತೋರಿಸುತ್ತೇವೆ ಎಂದು ೪ ವರ್ಷ ಕಳೆದರೂ ತೋರಿಸದೇ ಕಾಲಹರಣ ಮಾಡುತ್ತಾ ಸರ್ವೆ ಮಾಡುತ್ತಿದ್ದಾರೆ. ಇದು ಪೊಲೀಸರ ದಬ್ಬಾಳಿಕೆ ಪ್ರಜಾಪ್ರಭುತ್ವದ ಕಗ್ಗೋಲೆ ಪೊಲೀಸರು ಜನರ ರಕ್ಷಣೆಗೆ ಇರುವವರು. ಅದೇ ಪೊಲೀಸರಿಂದ ಇಂದು ಜನರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಮೀನುಗಾರ ಮುಖಂಡ ರಾಜೇಶ ತಾಂಡೇಲ್ ತಿಳಿಸಿದ್ದಾರೆ.

ಆದೇಶ ಲೆಕ್ಕಿಸದೇ ಪ್ರತಿಭಟನೆ

ಸರ್ವೆ ನಡೆಸಲು ಅನುಕೂಲವಾಗುವಂತೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮುಂಭಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಕಾಸರಕೋಡಿನ ಹೀರೆಮಠ ಸ್ನಶಾನದಿಂದ ಅಭಿವೃದ್ಧಿ ಯೋಜನಾ ಸ್ಥಳದವರೆಗೆ ಹೋಗುವ ರಸ್ತೆ ಕಾಮಗಾರಿ ನಡೆಯುವ ಸುತ್ತಲಿನ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಾಯ್ದೆ ೨೦೨೩ ಕಲಂ ೧೬೩ ರ ಅನ್ವಯ ಮಂಗಳವಾರ ಬೆಳಗ್ಗೆ ೬ ಗಂಟೆಯಿಂದ ರಾತ್ರಿ ೯ ಗಂಟೆಯವರೆಗೂ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದರು. ಆದರೆ ಆ ಆದೇಶ ಲೆಕ್ಕಿಸದೆ ಸ್ಥಳೀಯರು ಪ್ರತಿಭಟನೆ ನಡೆಸಿದರು.