ಸಾರಾಂಶ
ಚಾಮರಾಜನಗರದಲ್ಲಿ ಟಿ.ನರಸೀಪುರದ ನಳಂದ ಬುದ್ಧವಿಹಾರದ ಬಂತೇಜಿ ಬೋಧಿರತ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಬಿಹಾರದಲ್ಲಿ ಬೌದ್ಧ ಬಿಕ್ಕುಗಳ ಮೇಲಿನ ಹಲ್ಲೆ ಖಂಡಿಸಿ ಮಾ.11ರಂದು ಚಾಮರಾಜನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಟಿ. ನರಸೀಪುರದ ನಳಂದ ಬುದ್ದವಿಹಾರದ ಬಂತೇಜಿ ಬೋಧಿರತ್ನ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಹಾರದ ಬೌದ್ಧ ಗಯಾದ ಟೆಂಪಲ್ ಆ್ಯಕ್ಟ್ 1949 ಅನ್ನು ರದ್ದುಗೊಳಿಸಿ ಮಹಾಬೋಧಿ ಮಹಾವಿಹಾರದ ಆಡಳಿತವನ್ನು ಸಂಪೂರ್ಣ ಬೌದ್ಧರಿಗೆ ವಹಿಸಬೇಕೆಂದು ಆಗ್ರಹಿಸಿ ಸತ್ಯಾಗ್ರಹ ಮಾಡಲಾಗುತ್ತಿದೆ. ಈ ಸತ್ಯಾಗ್ರಹದಲ್ಲಿದ್ದ ಕೆಲವು ನಕಲಿ ಬಂತೇಜಿಗಳಿಗೆ ಭೋಜನದಾನ ಮಾಡಿ ಹೋರಾಟಗಾರ ಬಿಕ್ಕುಗಳನ್ನು ಅಪಮಾನಿಸಿದ್ದಾರೆ ಎಂದು ಆರೋಪಿಸಿದರು.
ಬುದ್ಧಮಂದಿರದ ಮುಂದೆ ಬಿಕ್ಕುಗಳನ್ನು ಬಿಹಾರ ಪೊಲೀಸರು ಸತ್ಯಾಗ್ರಹಕ್ಕೆ ಅನುಮತಿ ಇಲ್ಲ ಎಂದು ಬಂಧಿಸಿದ್ದಾರೆ. ಅಲ್ಲದೇ ಬಿಕ್ಕುಗಳ ಆರೋಗ್ಯದ ನೆಪಹೊಡ್ಡಿ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಬಿಹಾರ ಪೊಲೀಸರ ಈ ಅಮಾನವೀಯ ಕ್ರಮ ಖಂಡಿಸಿ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲು ಭಾರತೀಯ ಬೌದ್ಧ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಭೀಮರಾವ್ ಅಂಬೇಡ್ಕರ್ ಕರೆ ನೀಡಿದ್ದಾರೆ ಎಂದರು.ಪ್ರತಿಭಟನೆ ಕರೆ ನೀಡಿದ ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ಬೌದ್ಧ ಸಂಘ ಸಂಸ್ಥೆ ಹಾಗೂ ದಲಿತ ಪರ ಸಂಘಟನೆಗಳು ಮಾ.11ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಬೌದ್ಧ ಬಿಕ್ಕುಗಳು ಹಾಗೂ ಅನುಯಾಯಿಗಳು ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ತಿರುಪತಿ ದೇವಸ್ಥಾನವನ್ನು ಪುರೋಹಿತರು ನಡೆಸುತ್ತಿದ್ದಾರೆ. ಆದೇ ರೀತಿ ಬುದ್ಧಗಯಾದ ದೇವಸ್ಥಾನವನ್ನು ಬೌದ್ಧ ಬಿಕ್ಕುಗಳಿಗೆ ವಹಿಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಸಿ.ಎಂ.ಕೃಷ್ಣಮೂರ್ತಿ, ಲಿಂಗಣ್ಣ, ಚಿನ್ನಸ್ವಾಮಿ, ಮಹಿ, ಕಮಲ್‌ರಾಜ್, ಬಸವರಾಜ್, ಪಾಳ್ಯ ಮಹೇಶ್ ಇದ್ದರು.