ಸಾರಾಂಶ
ನ್ಯಾ.ನಾಗಮೋಹನ ದಾಸ್ ಆಯೋಗ ಸಲ್ಲಿಸಿರುವ ವರದಿ ಅವೈಜ್ಞಾನಿಕವಾಗಿದ್ದು, ಈ ವರದಿಯನ್ನು ಸರ್ಕಾರ ಯಥಾವತ್ ಜಾರಿಗೊಳಿಸದಂತೆ ಆಗ್ರಹಿಸಿ ಆ.೧೮ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಲಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರಾಜ್ಯ ಛಲವಾದಿ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಅಣಗಳ್ಳಿ ಬಸವರಾಜು ತಿಳಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನ್ಯಾ.ನಾಗಮೋಹನ ದಾಸ್ ಆಯೋಗ ಸಲ್ಲಿಸಿರುವ ವರದಿ ಅವೈಜ್ಞಾನಿಕವಾಗಿದ್ದು, ಈ ವರದಿಯನ್ನು ಸರ್ಕಾರ ಯಥಾವತ್ ಜಾರಿಗೊಳಿಸದಂತೆ ಆಗ್ರಹಿಸಿ ಆ.೧೮ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಲಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರಾಜ್ಯ ಛಲವಾದಿ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಅಣಗಳ್ಳಿ ಬಸವರಾಜು ತಿಳಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೧೦ ಗಂಟೆಗೆ ಪ್ರತಿಭಟನೆ ಬಲಗೈ ಸಮಾಜದ ಮುಖಂಡರುಗಳ ನೇತೃತರವದಲ್ಲಿ ಪ್ರತಿಭಟನಾ ಧರಣಿ ನಡೆಯಲಿದ್ದು ಜಿಲ್ಲೆಯಿಂದ ಒಂದು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನಾಂಗದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ನ್ಯಾ. ನಾಗಮೋಹನದಾಸ್ ವರದಿ ಕುರಿತು ಆ.೧೯ಕ್ಕೆ ಸಚಿವ ಸಂಪುಟದ ಸಭೆಯಲ್ಲಿ ಚರ್ಚೆಯಾಗಲಿದ್ದು, ಸಂಪುಟದ ಸಚಿವರು ಸಭೆಯಲ್ಲಿ ಯಾವುದೇ ಕಾರಣಕ್ಕೂ ವರದಿಯನ್ನು ಅಂಗೀಕರಿಸಬಾರದು. ರಾಜ್ಯದಲ್ಲಿ ಪರಿಶಿಷ್ಟ ಸಮುದಾಯ ೧.೪೭ ಕೋಟಿ ಜನಸಂಖ್ಯೆ ಹೊಂದಿದ್ದು ಸಮೀಕ್ಷೆಯಲ್ಲಿ ೧.೦೫ ಕೋಟಿ ತೋರಿಸಲಾಗಿದೆ. ಹಾಗಾದರೆ ಉಳಿದ ೪೦ ಲಕ್ಷ ಜನಸಂಖ್ಯೆ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು. ನ್ಯಾ. ನಾಗಮೋಹನದಾಸ್ ಆಯೋಗ ನಡೆಸಿದ ಸಮೀಕ್ಷೆಯಲ್ಲಿ ಬಲಗೈ ಜನಾಂಗದ ೪,೭೪,೯೫೪ ಜನಸಂಖ್ಯೆಯನ್ನು ಎಡಗೈ ಜನಾಂಗಕ್ಕೆ ಸೇರಿಸಲಾಗಿದೆ ಎಂದು ತಿಳಿಸಿದರು.ಅಲ್ಲದೇ ಜಾತಿಯಲ್ಲದ ಆದಿಕರ್ನಾಟಕ, ಛಲವಾದಿ, ಆದಿದ್ರಾವಿಡ ಜನಾಂಗಗಳಿಗೆ ಶೇ.೧ ರಷ್ಟು ಮೀಸಲಾತಿ ನೀಡಲಾಗಿದೆ. ಬಲಗೈ ಸಮುದಾಯಕ್ಕೆ ಸೇರಬೇಕಾದ ಅನೇಕ ಜಾತಿಗಳನ್ನು ಎಡಗೈ ಸಮುದಾಯಕ್ಕೆ ಸೇರಿಸಿ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.
ಮಾದಿಗ ಹೋರಾಟ ಸಮಿತಿಯ ಭಾಸ್ಕರ್‌ಪ್ರಸಾದ್ ಮಾತನಾಡಿ, ಹೋರಾಟದ ನೆಪದಲ್ಲಿ ನಮ್ಮ ಸಮಾಜದ ಸಚಿವರು, ಸ್ವಾಮೀಜಿಗಳನ್ನು ನಿಂದಿಸುವುದು ಅವಮಾನಕಾರಿ ಹೇಳಿಕೆ ನೀಡುವದನ್ನು ಛಲವಾದಿ ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ. ಜನಸಂಖ್ಯೆ ಆಧಾರಿತ ಮೀಸಲಾತಿ ವರ್ಗೀಕರಣ ಮಾಡಲಿ ಎಂದು ಸರ್ಕಾರವನ್ನು ಒತ್ತಾಯಿಸಲಿ. ಆದರೆ ಸಮುದಾಯ ಮತ್ತು ಮುಖಂಡರ ವಿರುದ್ದ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಅಣಗಳ್ಳಿ ಬಸವರಾಜು ಎಚ್ಚರಿಸಿದರು.ಮಹಾಸಭಾದ ಜಿಲ್ಲಾಧ್ಯಕ್ಷ ರಮೇಶ್, ಮುಖಂಡರಾದ ಮಹದೇವು, ರವಿ, ಕಾಶಿ ಇದ್ದರು.