ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿಯಲ್ಲಿ ಎಂಇಎಸ್ ಸ್ಮೃತಿ ಭವನ ಕಟ್ಟಡ ನಿರ್ಮಿಸಿದರೆ ರಾಜ್ಯದಲ್ಲಿ ಕ್ರಾಂತಿಯಾಗುತ್ತದೆ. ಎಂಇಎಸ್ ನಿಷೇಧಿಸುವಂತೆ ಆಗ್ರಹಿಸಿ ಏ.26ರಂದು ರಾಜ್ಯಾದ್ಯಂತ ಈಡುಗಾಯಿ ಒಡೆದು ಪ್ರತಿಭಟನೆ ಮಾಡಲಾಗುವುದು ಎಂದು ವಾಟಾಳ ಪಕ್ಷದ ನಾಯಕ ವಾಟಾಳ ನಾಗರಾಜ ತಿಳಿಸಿದರು.ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಇಎಸ್ ನಿಷೇಧಿಸುವುದಾಗಿ ಮುಖ್ಯಮಂತ್ರಿಗಳು ಹೇಳುತ್ತಲೇ ಬಂದಿದ್ದಾರೆ. ಆದರೆ ಈವರೆಗೂ ನಿಷೇಧಿಸಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳಿಗೆ ಎಂಇಎಸ್ ನಿಷೇಧಿಸುವ ಮನಸ್ಸು ಇಲ್ಲ ಎಂದರು.
ಸ್ಮೃತಿ ಭವನ ನಿರ್ಮಿಸುತ್ತಿರುವುದು ಸರ್ಕಾರಕ್ಕೆ ಸವಾಲಾಗಿದೆ. ಯಾವುದೇ ಕಾರಣಕ್ಕೂ ಈ ಭವನವನ್ನು ಕಟ್ಟಲು ಅನುಮತಿ ನೀಡಬಾರದು. ಗಡಿಭಾಗದಲ್ಲಿ ಪದೇ ಪದೆ ಗಲಾಟೆ ಮಾಡುತ್ತಿರುವ ಎಂಇಎಸ್ ನಾಯಕರನ್ನು ಗಡೀಪಾರು ಮಾಡಬೇಕು. ಬೆಳಗಾವಿ ಜಿಲ್ಲೆಯ ರಾಜಕಾರಣಿಗಳು ಮರಾಠಿಗರ ಏಜೆಂಟರಾಗಿದ್ದಾರೆ. ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಪೂರಕವಾಗುವಂತೆ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ಕಟ್ಟಡ ನಿರ್ಮಿಸಲಾಗಿದೆ. ವರ್ಷದಲ್ಲಿ ಒಮ್ಮೆ ಮಾತ್ರ ಅಧಿವೇಶನ ನಡೆಯುತ್ತದೆ. ಬಳಿಕ ಯಾವ ಸಚಿವರು ಇಲ್ಲಿಗೆ ಬರುತ್ತಿಲ್ಲ. ಸುವರ್ಣಸೌಧದ ಸದ್ಬಳಕೆಯಾಗಬೇಕು. ಅಧಿವೇಶನದಲ್ಲಿಯೂ ಈ ಭಾಗದ ಅಭಿವೃದ್ಧಿ ಕುರಿತು ಚರ್ಚೆ ನಡೆಯುತ್ತಿಲ್ಲ. ಕಳಸಾ- ಬಂಡೂರಿ ನಾಲಾ ನೀರಾವರಿ ಯೋಜನೆ ಜಾರಿಗೊಳಿಸುತ್ತಿಲ್ಲ. ಬೇಸಿಗೆ ಕಾಲದಲ್ಲಿ ಕೃಷ್ಣಾ ನದಿತೀರದ ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆಯಿಂದ ಬಳುತ್ತಿವೆ. ಮಹಾರಾಷ್ಟ್ರ ಕೊಯ್ನಾ ಜಲಾಶಯದಿಂದ ನೀರು ಬಿಡುತ್ತಿಲ್ಲ. ಮಹಾರಾಷ್ಟ್ರ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ಕರ್ನಾಟಕಕ್ಕೆ ನೀರು ಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ ಪತ್ರ ಬರೆದರೆ ಸಾಲದು ಎಂದರು.ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಧರಣಿ: ವಾಟಾಳ ಖಾಕಿ ವಶಕ್ಕೆ
ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸುವಂತೆ ಆಗ್ರಹಿಸಿ ಕನ್ನಡ ಹೋರಾಟಗಾರ ವಾಟಾಳ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.ನಗರದ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಎಂಇಎಸ್ ಮತ್ತು ಬೆಳಗಾವಿ ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ತೆರಳುತ್ತಿದ್ದಂತೆಯೇ ಚನ್ನಮ್ಮ ವೃತ್ತದಲ್ಲೇ ಪ್ರತಿಭಟನಾಕಾರರನ್ನು ತಡೆದು, ತಮ್ಮ ವಶಕ್ಕೆ ತೆಗೆದುಕೊಂಡರು. ತಮ್ಮನ್ನು ವಶಕ್ಕೆ ಪಡೆದ ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸಿದ ವಾಟಾಳ ನಾಗರಾಜ ಅವರು ಪೊಲೀಸರ ನಡೆ ವಿರುದ್ಧ ಕಿಡಿಕಾರಿದರು. ನಾನು ಜೀವನುದ್ದಕ್ಕೂ ಕನ್ನಡಪರವಾಗಿ ಹೋರಾಟ ಮಾಡುತ್ತ ಬಂದಿದ್ದೇನೆ. ನಮ್ಮನ್ನು ಏಕೆ ಬಂಧಿಸಿದ್ದೀರಿ? ನಮ್ಮ ಬಂಧನಕ್ಕೆ ಕಾರಣವೇನು? ನೀವೇನೂ ಎಂಇಎಸ್ ಪರವಾಗಿದ್ದೀರಾ? ನೀವೇನೂ ಮರಾಠಿ ಏಜೆಂಟರಾ? ಎಂದು ಪೊಲೀಸರ ವಿರುದ್ಧ ಕಿಡಿ ಕಾರಿದರು. ಪೊಲೀಸರ ನಡೆಗೆ ತೀವ್ರ ಆಕ್ರೋಶಗೊಂಡ ಪ್ರತಿಭಟನಾಕಾರರು ಪೊಲೀಸರ ವಿರುದ್ಧವೂ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.