ಶಿಗ್ಗಾಂವಿ ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಅಕ್ರಮ ನೇಮಕಾತಿಯ ತನಿಖೆಗೆ ಆಗ್ರಹಿಸಿ ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಿ ಡಿ. 18ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಜಾನಪದ ಸ್ನಾತಕೋತ್ತರ ಹಾಗೂ ಸಂಶೋಧಕರ ಒಕ್ಕೂಟದ ಅಧ್ಯಕ್ಷ ಡಾ.ಶಿವಸೋಮಣ್ಣ ನಿಟ್ಟೂರ ಹೇಳಿದರು.

ಹಾವೇರಿ: ಶಿಗ್ಗಾಂವಿ ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಅಕ್ರಮ ನೇಮಕಾತಿಯ ತನಿಖೆಗೆ ಆಗ್ರಹಿಸಿ ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಿ ಡಿ. 18ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಜಾನಪದ ಸ್ನಾತಕೋತ್ತರ ಹಾಗೂ ಸಂಶೋಧಕರ ಒಕ್ಕೂಟದ ಅಧ್ಯಕ್ಷ ಡಾ.ಶಿವಸೋಮಣ್ಣ ನಿಟ್ಟೂರ ಹೇಳಿದರು.ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಯಲ್ಲಿ ನಡೆದಿರುವ ಅಕ್ರಮ ನೇಮಕಾತಿ ಕುರಿತು ನಾಡಿನ ಶಿಕ್ಷಣ ತಜ್ಞರು ಅಥವಾ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಅಕ್ರಮ ನೇಮಕಾತಿಯನ್ನು ರದ್ದುಪಡಿಸಿ, ಖೊಟ್ಟಿ ಅಂಕಪಟ್ಟಿಗಳನ್ನು ನೀಡಿ ವಿವಿಗೆ ಸಹಾಯಕ ಕುಲಸಚಿವರಾಗಿರುವ ಶಹಜಹಾನ್ ಮುದಕವಿ ಅವರನ್ನು ವಜಾಗೊಳಿಸಿ, ಬಂಧಿಸಬೇಕು. ಈ ಕುರಿತು ದಾಖಲೆ ಸಮೇತವಾಗಿ ಈಗಾಗಲೇ ಸಿಎಂ, ಉನ್ನತ ಶಿಕ್ಷಣ ಸಚಿವರು ಸೇರಿದಂತೆ ಹಲವರಿಗೆ ಮನವಿ ಮಾಡಲಾಗಿದೆ. ಆದರೂ ಯಾವ ಕ್ರಮವೂ ಆಗಿಲ್ಲ. ಈ ಕುರಿತು ಜನವರಿಯಲ್ಲಿ ವಿವಿ ಆವರಣದಲ್ಲಿ ಪ್ರತಿಭಟಿಸಲಾಗುವುದು ಎಂದರು.ಸಂಘದ ಉಪಾಧ್ಯಕ್ಷ ನಾಗರಾಜ ಎಸ್. ಮಾತನಾಡಿ, ವಿವಿ ಕುಲಪತಿ ಡಾ.ಟಿ.ಎಂ.ಭಾಸ್ಕರ ಕೂಡ ಮುದಕವಿ ಬೆಂಬಲಕ್ಕೆ ನಿಂತಿದ್ದಾರೆ. ವಿವಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದೇ ಕಾರಣಕ್ಕೆ ಮುದಕವಿ ಪರವಾಗಿ ಇಡೀ ವಿವಿ ಸಿಬ್ಬಂದಿಯೊಂದಿಗೆ ತಾವೂ ಹಾವೇರಿಯಲ್ಲಿ ಸುದ್ದಿಗೋಷ್ಠಿಗೆ ಹಾಜರಾಗಿದ್ದರು. ದಾಖಲೆಗಳನ್ನು ಕೊಟ್ಟಿದ್ದರೂ ಮುದಕವಿ ವಿರುದ್ಧ ವಿಸಿ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದರು. ಬಿ.ಎಂ.ದುಗಾಣಿ, ಬಸವರಾಜ ಗೊಬ್ಬಿ ಇದ್ದರು.