ವಿವಿಧ ಬೇಡಿಕೆಗಳ ಒತ್ತಾಯಿಸಿ ನಾಳೆ ಪ್ರತಿಭಟನೆ

| Published : Jun 09 2024, 01:31 AM IST

ವಿವಿಧ ಬೇಡಿಕೆಗಳ ಒತ್ತಾಯಿಸಿ ನಾಳೆ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನೆಲ್ಯಹುದಿಕೇರಿ ಗ್ರಾ.ಪಂ. ಎದುರು ಜೂ. 10ರಂದು ಪ್ರತಿಭಟನೆ ನಡೆಸಲಾಗುವುದು. ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಲಾಗುವುದು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ನೆಲ್ಯಹುದಿಕೇರಿ ಗ್ರಾ‌ಪಂ ಎದುರು ಜೂ. 10ರಂದು ಪ್ರತಿಭಟನೆ‌ ನಡೆಸಲಾಗುವುದು ಎಂದು ಸಿಪಿಐಎಂ ಪಕ್ಷದ ನೆಲ್ಯಹುದಿಕೇರಿ ಶಾಖೆ ಪ್ರಮುಖ ಪಿ. ಆರ್. ಭರತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು ಸಾರ್ವಜನಿಕರು ಜೀವ ಭಯದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡುಬಿಟ್ಟ ಪರಿಣಾಮ ರೈತರ ಬೆಳೆಗಳು ನಾಶವಾಗುತ್ತಿದೆ. ಸ್ಥಳೀಯ ತೋಟ ಕಾರ್ಮಿಕರು ಕಾಡಾನೆಗಳ ಹಾವಳಿಗೆ ಹೆದರಿ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದು ಅರಣ್ಯ ಇಲಾಖೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿನ ರಸ್ತೆಗಳು ಸಂಚಾರಕ್ಕೆ ಯೋಗ್ಯವಲ್ಲದಂತಾಗಿದೆ. ಅಲ್ಲದೆ ಬಹುತೇಕ ಕಾಂಕ್ರೀಟ್ ರಸ್ತೆಗಳ ಬದಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಗಳಲ್ಲಿ ನೀರು‌ ನಿಂತು ರಸ್ತೆ ಹದಗೆಟ್ಟಿದ್ದು ಕೂಡಲೇ ರಸ್ತೆ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಭರತ್ ಆಗ್ರಹಿಸಿದರು.

ನೆಲ್ಯಹುದಿಕೇರಿ ಗ್ರಾಮ ವ್ಯಾಪ್ತಿಯಲ್ಲಿ ಗಿರಿಜನರಿಗಾಗಿ ಮೀಸಲಿಟ್ಟಿದ್ದ ನಾಲ್ಕು ಏಕರೆ ಜಾಗವನ್ನು ವ್ಯಕ್ತಿಯೋರ್ವ ಒತ್ತುವರಿ ಮಾಡಿಕೊಂಡಿದ್ದು ಕೂಡಲೇ ಒತ್ತುವರಿ ಜಾಗವನ್ನು ಬಿಡಿಸಿ ಗಿರಿಜನರಿಗೆ ನೀಡಬೇಕು ಎಂದರು. ಜಿಲ್ಲೆಯಲ್ಲಿ ಜೀತಪದ್ಧತಿ ವಿವಿಧ ರೂಪದಲ್ಲಿ ಇಂದಿಗೂ ಜಾರಿಯಲ್ಲಿದೆ. ಇಂದಿಗೂ ಜಿಲ್ಲೆಯಲ್ಲಿ ಸಾಲದ ಹೊರೆಯಲ್ಲಿ ಜೀತದಾಳಾಗಿ ಬದುಕುತ್ತಾ, ಕಡಿಮೆ‌ ವೇತನದಲ್ಲಿ ಕೆಲಸ‌ಮಾಡಿ ಬದುಕುತ್ತಿರುವ ಕುಟುಂಬಗಳಿವೆ. ಜೀತ ಪದ್ಧತಿಯೊಳಗಿರುವ ಕುಟುಂಬಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿ ಪ್ರಾಣಿಗಳಿಗಿಂತಲೂ ಕಡೆಯಾಗಿ ಬದುಕುತ್ತಿದ್ದಾರೆ. ಈ ಹಿಂದೆ ಜೀತ ಪದ್ಧತಿಯ ವಿರುದ್ದ ದೂರನ್ನು ಉಪವಿಭಾಗಾಧಿಕಾರಿಗಳಿಗೆ ದೂರನ್ನು‌ ನೀಡಬಹುದಾಗಿತ್ತು. ಆದರೆ ಇದೀಗ ಜೀತ ಪದ್ಧತಿಗೆ ಒಳಪಟ್ಟವರು ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಕಳುಹಿಸಬೇಕಾಗಿದೆ. ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

2019 ರ ಪ್ರಳಯದಲ್ಲಿ ಮನೆ ಕಳೆದುಕೊಂಡು ನಿರಾಶ್ರಿತರಾದವರಿಗೆ ಸರ್ಕಾರವು ಇದುವರೆಗೂ ಸೂರು ನೀಡುವತ್ತ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಈಗಾಗಲೇ ಜಿಲ್ಲಾಡಳಿತ ವಶಪಡಿಸಿಕೊಂಡ 8.22 ಎಕರೆ ಜಾಗದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ನಿರಾಶ್ರಿತರ ಹೊಸ ಪಟ್ಟಿಯನ್ನು ತಯಾರಿಸಬೇಕು ಹಾಗೂ ತಲಾ 10 ಲಕ್ಷ ಹಣವನ್ನು ಮನೆ ನಿರ್ಮಿಸಲು ನೀಡಬೇಕು ಎಂದು ಒತ್ತಾಯಿಸಿದರು. ಜಿಲ್ಲೆಯಲ್ಲಿ ಕಾರ್ಪೊರೇಟರುಗಳು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಾಗವನ್ನು ಬಿಡಿಸಿ ನಿವೇಶನ ರಹಿತರಾಗಿ ತೋಟದ‌ಮನೆಯಲ್ಲಿ ವಾಸವಿರುವ ಕುಟುಂಬಗಳಿಗೆ ನೀಡಬೇಕು ಎಂದು ಮನವಿ ಮಾಡಿದರು.

ಅಲ್ಲದೆ ಗ್ರಾಮದಲ್ಲಿ ನಿವೇಶನ ಹೊಂದಿರುವ ಬಡವರ್ಗದ ಜನರು 94ಸಿ ಮುಖಾಂತರ ಹಕ್ಕು ಪತ್ರಕ್ಕೆ ಅರ್ಜಿ ಸಲ್ಲಿಸಿದ್ದರೂ ಅರ್ಹತೆಯಿರುವ ಕುಟುಂಬಗಳಿಗೆ ಹಕ್ಕು ಪತ್ರ ಸಮರ್ಪಕವಾಗಿ ಹಂಚಿಕೆಯಾಗಿಲ್ಲ. ಕೂಡಲೇ ಗ್ರಾಮದಲ್ಲಿ ಹಕ್ಕು ಪತ್ರಕ್ಕೆ ಅರ್ಜಿ ಸಲ್ಲಿಸಿದ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆಯಾಗಬೇಕು ಎಂದು ಒತ್ತಾಯಿಸಿದರು.

ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿ 10ರಂದು ನೆಲ್ಯಹುದಿಕೇರಿ ಗ್ರಾ.ಪಂ ಎದುರು ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದರು.

ಕೆ ಕೆ ಚಂದ್ರನ್, ಕೆ ಶಿವರಾಮನ್, ಯೂಸುಫ್, ಹಬೀಬ್, ಜೋಸ್, ಸೌಕತಲಿ ಹಾಜರಿದ್ದರು.