ತುಂಗಭದ್ರಾ ಎಡದಂಡೆ ನಾಲೆಗಳಿಗೆ ನೀರು ಬಿಟ್ಟು 20 ದಿನ ಕಳೆದರೂ ಕೊನೆ ಭಾಗದ ಜಮೀನುಗಳಿಗೆ ನೀರು ತಲುಪದ ಕಾರಣ ಆಕ್ರೋಶಗೊಂಡ ನೂರಾರು ರೈತರು ಪಟ್ಟಣದ ನೀರಾವರಿ ಇಲಾಖೆ ಕಚೇರಿ ಆವರಣದಲ್ಲಿ ಮಂಗಳವಾರ ಬೆಳಗ್ಗೆಯಿಂದ ಅನಿರ್ದಿಷ್ಟಾವಧಿ ಧರಣಿ ಕೈಗೊಂಡು, ನಂತರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಕನ್ನಡಪ್ರಭ ವಾರ್ತೆ ಸಿರವಾರ
ತುಂಗಭದ್ರಾ ಎಡದಂಡೆ ನಾಲೆಗಳಿಗೆ ನೀರು ಬಿಟ್ಟು 20 ದಿನ ಕಳೆದರೂ ಕೊನೆ ಭಾಗದ ಜಮೀನುಗಳಿಗೆ ನೀರು ತಲುಪದ ಕಾರಣ ಆಕ್ರೋಶಗೊಂಡ ನೂರಾರು ರೈತರು ಪಟ್ಟಣದ ನೀರಾವರಿ ಇಲಾಖೆ ಕಚೇರಿ ಆವರಣದಲ್ಲಿ ಮಂಗಳವಾರ ಬೆಳಗ್ಗೆಯಿಂದ ಅನಿರ್ದಿಷ್ಟಾವಧಿ ಧರಣಿ ಕೈಗೊಂಡು, ನಂತರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.ಧರಣಿಯಲ್ಲಿ ಮಾತನಾಡಿದ ರೈತ ಮುಖಂಡ ಜೆ.ಶರಣಪ್ಪಗೌಡ, ಆಣೆಕಟ್ಟಿನಲ್ಲಿ ಈ ಬಾರಿ ಸಮರ್ಪಕ ನೀರು ಸಂಗ್ರಹವಿದ್ದು ನಾಲೆಗಳಿಗೆ ನೀರು ಹರಿಸಲಾಗುತ್ತಿದೆ, ಆದರೆ ಅಧಿಕಾರಿಗಳು ಸರಿಯಾಗಿ ಗೇಟ್ ನಿರ್ವಹಣೆ ಮಾಡದೇ ಇರುವುದು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಇಲ್ಲಿಯವರೆಗೂ ನಮ್ಮ ಭಾಗಕ್ಕೆ ನೀರು ತಲುಪಿಲ್ಲ ಕಳೆದ 5 ವರ್ಷಗಳಿಂದಲೂ ಇದೇ ರೀತಿ ಹೋರಾಟ ಮಾಡಿ ನೀರು ಪಡೆಯುವ ದುಸ್ಥಿತಿ ರೈತರದ್ದಾಗಿದೆ ನಾಲೆಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ಬರುವವರೆಗೂ ಹೋರಾಟ ನಿಲ್ಲದು ಎಂದರು.
ರೈತ ಮುಖಂಡ ಹರವಿ ಶಂಕರಗೌಡ ಮಾತನಾಡಿ, ಕೇವಲ ಭರವಸೆಗಳನ್ನು ನೀಡುವುದರಲ್ಲಿ ಅಧಿಕಾರಿಗಳು ಕಾಲ ಕಳೆಯದೇ, ಖುದ್ದು ಮುಂದೆ ನಿಂತು ಗೇಟ್ ನಿರ್ವಹಣೆ ಮಾಡಿ ನಮಗೆ ನೀರು ಒದಗಿಸಬೇಕು ಎಂದು ಒತ್ತಾಯಿಸಿದರು.ರೈತ ಸಂಘದ ರಾಜ್ಯ ಘಟಕದ ಮುಖಂಡ ಚಾಮರಸ ಮಾಲಿಪಾಟೀಲ ಮಾತನಾಡಿ, ನೀರಾವರಿ ಸಚಿವ ಚೆಲುವರಾಯಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದರೂ ಇಲ್ಲಿಯವರೆಗೂ ನೀರು ಬಂದಿಲ್ಲ, ಅಧಿಕಾರಿಗಳ ಬೇಜವಾಬ್ದಾರಿ ಹೆಚ್ಚಾಗಿದ್ದು, ರೈತರ ಜೀವದೊಂದಿಗೆ ಚೆಲ್ಲಾಟವಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಗಂಗಾಧರ ನಾಯಕ, ರಾಜಪ್ಪಗೌಡ ಗಣದಿನ್ನಿ ಅವರು ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.ಅಧಿಕಾರಿ ಭರವಸೆ ತಿರಸ್ಕಾರ : ಧರಣಿ ಸ್ಥಳಕ್ಕೆ ಮಧ್ಯಾಹ್ನದವರೆಗೂ ಯಾವೊಬ್ಬ ನೀರಾವರಿ ಅಧಿಕಾರಿಯೂ ಸ್ಥಳಕ್ಕೆ ಬಾರದ ಕಾರಣ ಆಕ್ರೋಶಗೊಂಡ ರೈತರು ಸಿರವಾರ-ರಾಯಚೂರು ಮುಖ್ಯರಸ್ತೆ ತಡೆದು ಸಂಜೆ 6 ಗಂಟೆಯವರೆಗೂ ಪ್ರತಿಭಟನೆ ನಡೆಸಿದರು. ಈ ವೇಳೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಸಂಜೆ ಸ್ಥಳಕ್ಕೆ ಬಂದ ಸಹಾಯಕ ಆಯುಕ್ತ ಪಂಪಣ್ಣ ಸಜ್ಜನ್ ಅವರು ರೈತರೊಂದಿಗೆ ಮಾತನಾಡಿ ಎರಡು ದಿನಗಳಲ್ಲಿ ನೀರು ಹರಿಸುವ ಭರವಸೆ ನೀಡಿದರೂ ಒಪ್ಪದ ರೈತರು, ನೀರಾವರಿ ಇಲಾಖೆಯ ಪ್ರಾದೇಶಿಕ ಆಯುಕ್ತರೇ ಖುದ್ದು ಸ್ಥಳಕ್ಕೆ ಬಂದು ಅಗತ್ಯ ಕ್ರಮಕೈಗೊಳ್ಳುವವರೆಗೂ ಧರಣಿ ಹಿಂಪಡೆಯುವುದಿಲ್ಲ ಹಾಗೂ ಬುಧವಾರ ಸಿರವಾರ ಬಂದ್ ಮಾಡಿ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.ಈ ಸಂದರ್ಭದಲ್ಲಿ ಜಿ. ಲೋಕರೆಡ್ಡಿ, ಜೆ. ದೇವರಾಜಗೌಡ, ಬಸನಗೌಡ ಬ್ಯಾಗವಾಡಿ, ಟಿ. ದೇವರಾಜ ಗೌಡ, ಎಂ. ನಾಗರಾಜಗೌಡ, ಅನಿತಾ, ವಿಜಯಲಕ್ಷ್ಮಿ, ಕಲ್ಲೂರು ಬಸವರಾಜ ನಾಯಕ, ಅಮರೇಶಗೌಡ ಪನ್ನೂರು, ಡಾ. ನಾಗರಾಜ ಪಾಟೀಲ, ಈಶಪ್ಪ ಹೂಗಾರ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.