ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು. ಜಿಲ್ಲೆಗೆ ನಿಗದಿಯಾಗಿರುವ ನೀರನ್ನು ಸಂಪೂರ್ಣವಾಗಿ ಹರಿಸಬೇಕು ಎಂದು ಒತ್ತಾಯಿಸಿ ಡಿ.7ರಂದು ಸಂಯುಕ್ತ ಕಿಸಾನ್ ಕರ್ನಾಟಕ ನೇತೃತ್ವದಲ್ಲಿ ವಿವಿಧ ರೈತಪರ ಸಂಘಟನೆಗಳು ಕಪ್ಪುಪಟ್ಟಿ ಧರಿಸಿ ಬೃಹತ್ ಪ್ರತಿಭಟನಾ ಧರಣಿ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಹಮ್ಮಿಕೊಳ್ಳಲಾಗಿದೆ.ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಎಸ್.ಎನ್.ಸ್ವಾಮಿ, ಪ್ರಾಂತ ರೈತ ಸಂಘದ ಚನ್ನಬಸಣ್ಣ, ಅಜ್ಜಪ್ಪ, ಎಐಕೆಎಸ್ನ ಕಂಬೇಗೌಡ ,ವೆಂಕಟೇಗೌಡ, ಮಹಿಳಾ ವಿಭಾಗದ ಜಯಮ್ಮ ಮಾತನಾಡಿ, ಜಿಲ್ಲೆಯ ಜನಪ್ರತಿನಿಧಿಗಳು, ರೈತರ ಹಿತ ಮರೆತು ಮತ ರಾಜಕೀಯದ ಮೇಲಾಟ ನಡೆಸುತ್ತಿದ್ದಾರೆ. ಹಾಗಾಗಿ ರೈತ ಸಂಘಟನೆಗಳು ಹೋರಾಟವನ್ನು ತೀವ್ರಗೊಳಿಸಲು ಮುಂದಾಗಿವೆ ಎಂದರು. ಸಂಯುಕ್ತ ಹೋರಾಟದ ಸಂಚಾಲಕ ಸಿ.ಯತಿರಾಜು ಮಾತನಾಡಿ, ತುಮಕೂರು ಶಾಖಾ ನಾಲೆಯಿಂದ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ಸರ್ಕಾರ ಆರಂಭಿಸಿ ಜಿಲ್ಲೆಯ ಜನರಲ್ಲಿ ರೈತರಿಗೆ ತೀವ್ರವಾದ ಆತಂಕ ಸೃಷ್ಟಿ ಮಾಡಿದೆ ಎಂದರು.ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೊಂವಿಂದರಾಜು ಮಾತನಾಡಿ, ಈಗಾಗಲೇ ಶಾಖಾ ನಾಲೆಯಿಂದ ಕುಣಿಗಲ್‌ವರೆಗೂ ಹೇಮಾವತಿ ನೀರು ಹೋಗುತ್ತಿದೆ. ಇತ್ತೀಚಿಗೆ ಕೋಟ್ಯಾಂತರ ಹಣವನ್ನು ಮೂಲ ನಾಲೆಯ ಅಗಲೀಕರಣ ಮತ್ತು ನಾಲಾ ಅಭಿವೃದ್ಧಿ ಕೆಲಸ ನಡೆದಿದೆ. ಅಲ್ಲಿಂದಲೇ ಮಾಗಡಿಗೆ ನೀರನ್ನು ತೆಗೆದುಕೊಂಡು ಹೋಗಬಹುದಿತ್ತು. ಅದು ಸುಲಭ ಮತ್ತು ಖರ್ಚೂ ಕಡಿಮೆ. ಆದರೆ ಅದಕ್ಕೆ ಬದಲಿಗೆ ಗುಬ್ಬಿಯಿಂದ ಹೊಸದಾಗಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಡೆಯುತ್ತಿದೆ. ಇದರಿಂದ ಮತ್ತೆ ಕೋಟ್ಯಂತರ ಹಣ ದುಂದುವೆಚ್ಚವಾಗುತ್ತದೆ. ರೈತರ ಭೂಮಿ ಸ್ವಾಹ ಆಗುತ್ತದೆ. ಅಂತಿಮವಾಗಿ ಇದರ ಹೊರೆ ಜನರ ಮೇಲೆ ಬೀಳುತ್ತದೆ ಎಂದರು. ಪ್ರಾಂತ ರೈತ ಸಂಘದ ಚನ್ನ ಬಸಣ್ಣ, ಎಐಕೆಎಸ್ ಕಂಬೇಗೌಡ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಪ್ರಾಂತರೈತ ಸಂಘದ ಬಿ.ಉಮೇಶ್ ಉಪಸ್ಥಿತರಿದ್ದರು.