ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಸಲು ಶುಕ್ರವಾರ ನಗರಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರನ್ನು ಭೇಟಿಯಾದ ಸರ್ವ ಸಂಘಟನೆಗಳ ಒಕ್ಕೂಟದ ನಿಯೋಗದ ಅಧ್ಯಕ್ಷ ಮಲ್ಲಿಕಾರ್ಜುನ ಜಲ್ಲಪ್ಪನೋರ ರಾಮಸಮುದ್ರ ನೇತೃತ್ವದ ವಿವಿಧ ಸಂಘಟನೆಗಳ ಮುಖ್ಯಸ್ಥರು, ಜಿಲ್ಲೆಯ ಉಳಿದೆಲ್ಲ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಸಲು ಶುಕ್ರವಾರ ನಗರಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರನ್ನು ಭೇಟಿಯಾದ ಸರ್ವ ಸಂಘಟನೆಗಳ ಒಕ್ಕೂಟದ ನಿಯೋಗದ ಅಧ್ಯಕ್ಷ ಮಲ್ಲಿಕಾರ್ಜುನ ಜಲ್ಲಪ್ಪನೋರ ರಾಮಸಮುದ್ರ ನೇತೃತ್ವದ ವಿವಿಧ ಸಂಘಟನೆಗಳ ಮುಖ್ಯಸ್ಥರು, ಜಿಲ್ಲೆಯ ಉಳಿದೆಲ್ಲ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿದರು.ಈ ವೇಳೆ ಮುಖಂಡರು ಹಾಗೂ ಸಚಿವರ ನಡುವೆ ಚರ್ಚೆ ನಡೆದು ಉದ್ವೇಗಕ್ಕೂ ಕಾರಣವಾಗಿದ್ದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ರಾಜಾ ವೇಣುಗೋಪಾಲ ನಾಯಕ್ ಪರಿಸ್ಥಿತಿ ತಿಳಿಗೊಳಿಸಿದರು.
ಜಿಲ್ಲೆಯ ಐದೂ ತಾಲೂಕುಗಳಲ್ಲಿ ಮಳೆ ಕೊರತೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿ ರೈತರು ಸಾಲದ ಸುಳಿಗೆ ಸಿಲುಕಿ ಸಂಕಷ್ಟದಲ್ಲಿದ್ದಾರೆ. ರೈತರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದು ಜಿಲ್ಲಾಡಳಿತ ಸರ್ಕಾರಕ್ಕೆ ವಾಸ್ತವ ಬರ ವರದಿ ಸಲ್ಲಿಸಿದ್ದರೂ ಇನ್ನೂ ಏಕೆ ಪಟ್ಟಿಯಲ್ಲಿ ಸೇರಿಸಿಲ್ಲ ಎಂದು ಸಂಘಟನೆಗಳ ಮುಖಂಡರು ಸಚಿವರೆದುರು ಆಕ್ರೋಶ ವ್ಯಕ್ತಪಡಿಸಿದರು.ಸಚಿವ ಡಾ. ಪಾಟೀಲ್ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ ನಿಯಮಗಳಂತೆ ಕೆಲ ತಾಲೂಕುಗಳನ್ನು ಕೈ ಬಿಟ್ಟಿದ್ದಾರೆ. ಅದರಲ್ಲಿ ನನ್ನ ಮತಕ್ಷೇತ್ರ ಸೇಡಂ ಕೂಡ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಲೇ ಆಕ್ರೋಶಗೊಂಡ ಸಂಘಟನೆಗಳ ಮುಖಂಡರು, ನಾವು ಕೆಲವು ದಿನಗಳ ಹಿಂದೆ ಜಿಲ್ಲಾ ಕೇಂದ್ರ ಬಂದ್ ಮಾಡಿ ಪ್ರತಿಭಟನೆ ಮಾಡಿದ್ದೆವು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರ ಕೈಯಲ್ಲಿದ್ದ ಮನವಿ ಪತ್ರ ತೆಗೆದುಕೊಂಡ ಸಚಿವರು, ನಾನೂ ಕೂಡ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಗಮನಕ್ಕೆ ತಂದಿದ್ದೇನೆ. ಸೆ. 16 ರಂದು ಕೆಲ ತಾಲೂಕುಗಳನ್ನು ಬರಪಟ್ಟಿಗೆ ಸೇರ್ಪಡೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.ಸಮಾಧಾನಗೊಳ್ಳದ ಮುಖಂಡರು ಸೆ.17 ಒಳಗೆ ಬರಪಟ್ಟಿಗೆ ಜಿಲ್ಲೆಯ ತಾಲೂಕುಗಳನ್ನು ಸೇರಿಸದಿದ್ದರೆ ಅಂದು ನಡೆಯುವ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಕಾರ್ಯಕ್ರಮದಂದು ಕಪ್ಪು ಬಾವುಟ ಪ್ರದರ್ಶನ ಮಾಡಿ ಪ್ರತ್ಯೇಕ ರಾಜ್ಯ ಧ್ವಜ ಹಾರಿಸುತ್ತೇವೆ ಎಂದು ಎಚ್ಚರಿಸಿದರು.
ಸರ್ವ ಸಂಘಟನೆ ಸಮಿತಿಯ ಮುಖಂಡ ಮೈಲಾರಪ್ಪ ಜಾಗೀರ್ದಾರ್, ಕರ್ನಾಟಕ ಜನ ಸೇನಾ ರಾಜ್ಯಾಧ್ಯಕ್ಷ ಅಶೋಕ ಐಕೂರ, ವರ್ತೂರು ಪ್ರಕಾಶ್ ಯುವ ಘರ್ಜನೆ ಜಿಲ್ಲಾಧ್ಯಕ್ಷರು, ಸೈದಪ್ಪ ಕೂಲೂರುಕರ ದಲಿತ ಸೇನೆ. ರವಿ ಕೆ. ಮುದ್ನಾಳ, ನಮ್ಮ ಕರೆವೆ ಜಿಲ್ಲಾಧ್ಯಕ್ಷರು ಯಾದಗಿರಿ ವಿಶ್ವರಾಧ್ಯ ದಿಮ್ಮಿ, ಅನಿಲ್ ಕುಮಾರ್ ಕರಾಟೆ, ನಮ್ಮ ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷರು, ರಾಜಾಹುಲಿ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಜಿಲ್ಲಾಧ್ಯಕ್ಷರು, ಅಜಯ್ ಮಾಸನ್, ಸಿದ್ದು ತಂಗಡಗಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರು, ನವ ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷರು, ಮಾಸ್ಟರ್. ದೀಪಕ್ ಒಡೆಯರ್. ಭೀಮ ಪೂಜಾರಿ ನಮ್ಮ ಕರ್ನಾಟಕ ಸೇನೆ ಪ್ರಧಾನ ಕಾರ್ಯದರ್ಶಿ ಬಂಗಾರು ಬಂಜಾರ ಸಮಾಜ ಜಿಲ್ಲಾಧ್ಯಕ್ಷರು. ನಿಜಲಿಂಗಪ್ಪ ಕೆಆರ್‌ಎಸ್ ಪಕ್ಷ ಜಿಲ್ಲಾಧ್ಯಕ್ಷರು. ಆನಂದ್ ಹಾಸನಾಳ ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾ ಸಂಘಟನೆ ಕಾರ್ಯದರ್ಶಿ. ಗೌತಮ್ ಅರಿಕೇರಿ ವರ್ತೂರು ಪ್ರಕಾಶ್ ಯುವ ಘರ್ಜನೆ ಜಿಲ್ಲಾ ಉಪಾಧ್ಯಕ್ಷರು. ಸಿಮೆನ್ ತುಮಕೂರು. ಹಲವರು ಉಪಸ್ಥಿತರಿದ್ದರು.