ಸಾರಾಂಶ
ಕಾಂಗ್ರೆಸ್ ಸರ್ಕಾರ ವಜಾ ಮಾಡಲು ಜೆಡಿಎಸ್ ಆಗ್ರಹ । ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ
ಕನ್ನಡಪ್ರಭ ವಾರ್ತೆ ಕೊಪ್ಪಳತೈಲ, ಹಾಲು ಬೆಲೆ ಏರಿಕೆ ವಿರೋಧಿಸಿ ಎತ್ತಿನಬಂಡಿಯೊಂದಿಗೆ ನಗರದಲ್ಲಿ ಜೆಡಿಎಸ್ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.ಜನ ವಿರೋಧಿ ನೀತಿಯಲ್ಲಿ ತೊಡಗಿರುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಕೂಡಲೇ ವಜಾ ಮಾಡಬೇಕೆಂದು ಆಗ್ರಹಿಸಿ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಹಾಗೂ ಜಿಲ್ಲಾಧ್ಯಕ್ಷ ಸುರೇಶ್ ಭೂಮರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.ನಗರದ ಬನ್ನಿಕಟ್ಟಿಯಿಂದ ಎತ್ತಿನಬಂಡಿಯೊಂದಿಗೆ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಕೇಂದ್ರ ಬಸ್ ನಿಲ್ದಾಣದ ಎದುರಿನ ರಸ್ತೆಯ ಮೂಲಕ ಬಸವೇಶ್ವರ ಸರ್ಕಲ್ ವರೆಗೂ ನಡೆಯಿತು.
ಅಶೋಕ ವೃತ್ತದಲ್ಲಿ ಜೆಡಿಎಸ್ ಕೋರ್ ಕಮಿಟಿ ರಾಜ್ಯ ಸದಸ್ಯ ಸಿ.ವಿ. ಚಂದ್ರಶೇಖರ ಮಾತನಾಡಿ, ಗ್ಯಾರಂಟಿ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕಳೆದ 14 ತಿಂಗಳಲ್ಲಿ ಸಾಮಾನ್ಯರ ಬದುಕನ್ನು ದುಸ್ತರ ಮಾಡಿದೆ. ಕಾಂಗ್ರೆಸ್ ನಾಯಕರು ನೇರವಾಗಿ ಬಡವರ ಜೇಬಿಗೆ ಕೈ ಹಾಕಿ ಲೂಟಿ ಹೊಡೆದದ್ದೆ ಕಳೆದ ಒಂದು ವರ್ಷದ ಸಾಧನೆ. ಅಲ್ಪ ಸ್ವಲ್ಪ ಉಳಿಯುತ್ತಿದ್ದ ಹಣವನ್ನೂ ನಿರ್ದಯವಾಗಿ ಕಿತ್ತುಕೊಂಡ ಈ ಸರ್ಕಾರ ಅಧಿಕಾರದಲ್ಲಿ ಮುಂದುವರೆಯುವ ನೈತಿಕ ಹಕ್ಕನ್ನೆ ಕಳೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.ವಿದ್ಯುತ್ ಬಿಲ್ಲು ದುಪ್ಪಟ್ಟಾಗಿದೆ. ತೈಲ ಬೆಲೆ ಗಗನಕ್ಕೇರಿದೆ. ಹಾಲಿನ ಬೆಲೆ ಮತ್ತೂ ಹೆಚ್ಚಾಯಿತು. ಬಿತ್ತನೆ ಬೀಜದ ದರ ಕೊಂಡುಕೊಳ್ಳಲಾಗದಷ್ಟು ಏರಿದೆ ಎಂದು ಕಿಡಿಕಾರಿದರು.
ವಾಲ್ಮೀಕಿ ನಿಗಮದಲ್ಲಿ ₹187 ಕೋಟಿ ಹಗರಣ ನಡೆದಿದೆ. ಅದರ ಬಗ್ಗೆ ಸಿಎಂ ಹಾಗೂ ಡಿಸಿಎಂ ಅವರಿಗೂ ಮಾಹಿತಿ ಇತ್ತು. ದಲಿತರ ಬಗ್ಗೆ ಇವರ ಕಣ್ಣೀರು ಮೊಸಳೆ ಕಣ್ಣೀರು ಎಂದು ಸಾಬೀತಾಗಿದೆ ಎಂದರು.ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ ಮಾತನಾಡಿ, ರಾಜ್ಯದಲ್ಲಿರುವ ಅತ್ಯಂತ ಪ್ರತಿಭಾವಂತರನ್ನು ಬಿಟ್ಟು ಹಣಕಾಸು ಕ್ರೂಢೀಕರಣಕ್ಕಾಗಿ ವಿದೇಶಿ ಸಲಹೆಗಾರರನ್ನು ನೇಮಿಸಿದ್ದು ಮಾತ್ರ ಸೋಜಿಗ. ಒಬ್ಬ ಮುಖ್ಯಮಂತ್ರಿಗೆ ಒಂದು ಡಜನ್‌ನಷ್ಟು ಸಲಹೆಗಾರರು. ಅವರಿಗೆ ಗೂಟದ ಕಾರು, ಕ್ಯಾಬಿನೆಟ್ ದರ್ಜೆ. ಇದು ಸಮಾಜವಾದ ಆಡಳಿತದ ವೈಖರಿಯೇ ಎಂಬುದನ್ನು ಸಿದ್ದರಾಮಯ್ಯನವರೇ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಕ್ಯಾಂಪಸ್‌ಗಳಲ್ಲಿ ಹಾಡು ಹಗಲೇ ಕೊಲೆಗಳಾದವು. ಹೆಣ್ಣುಮಕ್ಕಳ ಮಾನ ಹರಾಜಾಯಿತು. ವೈಯಕ್ತಿಕ ದ್ವೇಷ ಸಾಧನೆಗಾಗಿ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳಲಾಯಿತು. ಇದು ಸ್ವಯಂ ಘೋಷಿತ ಸಂವಿಧಾನ ರಕ್ಷಕರಿಗೆ ಶೋಭೆಯೇ ಎಂಬುದನ್ನು ಆ ಪಕ್ಷದ ಮುಖಂಡರು ಸ್ಪಷ್ಟಪಡಿಸಬೇಕು ಎಂದು ಯುವ ಘಟಕದ ಕಾರ್ಯಾಧ್ಯಕ್ಷ ರಾಜು ನಾಯಕ ಆಗ್ರಹಿಸಿದರು.ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ ಕಾನೂನು ವ್ಯವಸ್ಥೆ ಕುಸಿದಿದೆ. ಮುಖ್ಯಮಂತ್ರಿ ಅವರಿಗೆ ಆಡಳಿತ ಯಂತ್ರದ ಮೇಲೆ ನಿಯಂತ್ರಣವಿಲ್ಲ. ಹೀಗಾಗಿ ಈ ಕೂಡಲೇ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಜೆಡಿಎಸ್ ಜಿಲ್ಲಾ ಗೌರವಾಧ್ಯಕ್ಷ ದೇವಪ್ಪ ಕಟ್ಟಿಮನಿ, ಜಿಲ್ಲಾ ವಕ್ತಾರ ಮಲ್ಲನಗೌಡ ಕೋಣನಗೌಡ್ರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ ಹಾಗೂ ಈಶಪ್ಪ ಮಾದಿನೂರು, ಶರಣಪ್ಪ ಕುಂಬಾರ್, ಯಮನಪ್ಪ ಕಟಗಿ, ಬಸವರಾಜ್ ಗುರುಗುಳಿ, ಕೆಂಚಪ್ಪ ಹಳ್ಳಿ, ಕೃಷ್ಣ ನಾಯಕ್, ವಸಂತ ಕರಿಗಾರ್, ಭೀಮ್ ರೆಡ್ಡಿ ಗದ್ದಿಕೇರಿ, ಜಗನ್ನಾಥ್ ರೆಡ್ಡಿ, ಚಿಕ್ಕ ವೀರಣ್ಣ, ರಮೇಶ ಕುಣಿಕೇರಿ, ಹುಚ್ಚಪ್ಪ ಚೌದ್ರಿ, ಕರಿಯಪ್ಪ ಹಾಲವರ್ತಿ, ಆನಂದ ಕಾಸನಕಂಡಿ, ಜಗನ್ನಾಥ ಮುನಿರಾಬಾದ್, ಕಳಕನಗೌಡ ಹಲಗೇರಿ, ಶರಣಪ್ಪ ರಾಂಪುರ್, ಮೌನೇಶ ಮಾದಿನೂರ, ಪ್ರವೀಣ ಇಟಗಿ, ಶರಣು ಪಾಟೀಲ, ಮೂರ್ತ್ಯಪ್ಪ ಹಿಟ್ನಾಳ, ರುದ್ರೇಶ ಕೊಪ್ಪಳ, ಮಂಜುನಾಥ ಕುಣಿಕೇರಿ ಸೇರಿದಂತೆ ಪಕ್ಷದ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು