ದಲಿತ ಹಕ್ಕುಗಳ ಸಮಿತಿ ಆಯುಷ್ಮಾನ್ ಆಸ್ಪತ್ರೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ, ಕಾನೂನು ಬದ್ಧ ಜಮೀನಿನಲ್ಲಿ ಯಾವುದೇ ನ್ಯಾಯಾಂಗ ಆದೇಶ ಉಲ್ಲಂಘನೆ ಆಗದಂತೆ ಮತ್ತು ಸಾರ್ವಜನಿಕ ಹಣ ನಷ್ಟವಾಗದಂತೆ ಬೇರೆ ಸ್ಥಳದಲ್ಲಿ ಆಸ್ಪತ್ರೆ ನಿರ್ಮಾಣವಾಗಬೇಕು. ಹೀಗಾಗಿ ಆಸ್ಪತ್ರೆ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಡಾ. ಶಿವಕುಮಾರ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಮಾಹರರ್ನವಮಿ ದೊಡ್ಡಿ ಗ್ರಾಮದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವ ಜಮೀನಿನಲ್ಲಿ ಆಯುಷ್ಮಾನ್ ಆಸ್ಪತ್ರೆ ನಿರ್ಮಾಣ ಕಾಮಗಾರಿ ವಿರೋಧಿಸಿ ದಲಿತ ಹಕ್ಕುಗಳ ಸಮಿತಿ ಕಾರ್ಯಕರ್ತರು ಶುಕ್ರವಾರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಸಮಿತಿ ಜಿಲ್ಲಾಧ್ಯಕ್ಷ ಆರ್.ಕೃಷ್ಣ, ತಾಲೂಕು ಅಧ್ಯಕ್ಷ ವಿಜೇಂದ್ರ ಕುಮಾರ್ ನೇತೃತ್ವದಲ್ಲಿ ಆಗಮಿಸಿದ್ದ ಕಾರ್ಯಕರ್ತರು ತಾಲೂಕು ಕಚೇರಿ ಎದುರು ಧರಣಿ ನಡೆಸಿ ಬೆಸಗರಹಳ್ಳಿ ಗ್ರಾಪಂ ಪಿಡಿಒ ವಿರುದ್ಧ ಘೋಷಣೆ ಕೂಗಿದರು.

ನ್ಯಾಯಾಲಯದ ವಿವಾದಿತ ಸರ್ವೇ ನಂಬರ್ 94/4 ಪಂಚಾಯಿತಿ ಖಾತೆ ಬದಲಾವಣೆ ಮಾಡಿ ಆಸ್ಪತ್ರೆ ನಿರ್ಮಾಣಕ್ಕೆ ಜಮೀನು ಹಸ್ತಾಂತರ ಮಾಡಿರುವುದನ್ನು ತೀವ್ರವಾಗಿ ವಿರೋಧಿಸಿದರು. ಆಸ್ಪತ್ರೆ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಇಲ್ಲವಾದಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘನೆ ಮೊಕದ್ದಮ್ಮೆ ದಾಖಲಿಸಿದಾಗ ಎಚ್ಚರಿಸಿದರು.

ಸದರಿ ಜಮೀನಿನಲ್ಲಿ ಹಿರಿಯಮ್ಮ ದೇವಿ ದೇವಸ್ಥಾನ ಮತ್ತು ಖಾಸಗಿ ವ್ಯಕ್ತಿಗಳ ಜಮೀನು ಇರುತ್ತದೆ. ಈ ಸ್ಥಳದಲ್ಲಿ ನೂರಾರು ವರ್ಷಗಳಿಂದ ಸ್ವಾಧೀನ ಅನುಭವದಲ್ಲಿರುತ್ತಾರೆ. ಆದರೆ, ಗ್ರಾಪಂನವರು ಅಕ್ರಮವಾಗಿ ಖಾತೆ ಮಾಡಿಕೊಂಡು ಜಮೀನಿನ ಮಾಲೀಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ದಲಿತ ಹಕ್ಕುಗಳ ಸಮಿತಿ ಆಯುಷ್ಮಾನ್ ಆಸ್ಪತ್ರೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ, ಕಾನೂನು ಬದ್ಧ ಜಮೀನಿನಲ್ಲಿ ಯಾವುದೇ ನ್ಯಾಯಾಂಗ ಆದೇಶ ಉಲ್ಲಂಘನೆ ಆಗದಂತೆ ಮತ್ತು ಸಾರ್ವಜನಿಕ ಹಣ ನಷ್ಟವಾಗದಂತೆ ಬೇರೆ ಸ್ಥಳದಲ್ಲಿ ಆಸ್ಪತ್ರೆ ನಿರ್ಮಾಣವಾಗಬೇಕು. ಹೀಗಾಗಿ ಆಸ್ಪತ್ರೆ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಡಾ. ಶಿವಕುಮಾರ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಜಿಲ್ಲಾ ಕಾರ್ಯದರ್ಶಿ ಅಂಬುಜಿ, ಜಿಲ್ಲಾ ಉಪಾಧ್ಯಕ್ಷೇ ವರಲಕ್ಷ್ಮಿ, ಕೆ.ಎಸ್. ಶಿವಲಿಂಗಯ್ಯ, ಮುಖಂಡರಾದ ಎಚ್. ಕೆ. ನಾಗೇಶ್, ರಾಧಾಮಣಿ, ತೊರೆಶೆಟ್ಟಿಹಳ್ಳಿ ಶಿವಕುಮಾರ್, ಶ್ರೀಧರ ಮತ್ತಿತರರು ಭಾಗವಹಿಸಿದ್ದರು.