ಸಾರಾಂಶ
ಗದಗ: ಬೆಳಗಾವಿ ಸುವರ್ಣಸೌಧದ ಸಮೀಪ 2ಎ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದ ಪಂಚಮಸಾಲಿ ಸಮುದಾಯದ ಮುಖಂಡರ ಮೇಲೆ ಲಾಠಿ ಚಾರ್ಜ್ ನಡೆಸಿರುವುದನ್ನು ಖಂಡಿಸಿ ಗುರುವಾರ ಗದಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಿ ರಸ್ತೆ ತಡೆ ಮಾಡಿ, ಟೈರ್‌ಗೆ ಬೆಂಕಿ ಹಚ್ಚಿ ರಾಜ್ಯ ಸರ್ಕಾರ ಮತ್ತು ಸಿದ್ಧರಾಮಯ್ಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಗದಗ ನಗರದ ಜನರಲ್ ಕಾರ್ಯಪ್ಪ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಂಚಮಸಾಲಿ ಸಮಾಜದ ಹಲವಾರು ಮುಖಂಡರು, ಯುವಕರು ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆ ಪ್ರಾರಂಭವಾಗುತ್ತಿದ್ದಂತೆ ಪಂಚಮಸಾಲಿ ಮುಖಂಡರು ರಾಜ್ಯ ಸರ್ಕಾರ ನಡೆಯನ್ನು ಉಗ್ರವಾಗಿ ಖಂಡಿಸಿ ಸಂಪೂರ್ಣ ಕೃಷಿಯನ್ನೇ ಆರ್ಥಿಕ ಹಿನ್ನೆಲೆಯಾಗಿ ಹೊಂದಿರುವ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಿ ಎಂದು ಕೇಳಿದರೆ ಲಾಠಿ ಚಾರ್ಜ್ ಮಾಡಿಸಿರುವ ಮುಖ್ಯಮಂತ್ರಿಗಳ ನಡೆಗೆ ಮುಂಬರುವ ದಿನಗಳಲ್ಲಿ ನಮ್ಮ ಸಮುದಾಯ ಸಮರ್ಪಕ ಉತ್ತರ ಕೊಡಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಮುದಾಯದ ಯುವಕರು, ಹಿರಿಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಪಾಲ್ಗೊಂಡಿದ್ದರು.
ಟೈರ್‌ಗೆ ಬೆಂಕಿ: ಜನರಲ್ ಕಾರ್ಯಪ್ಪ ವೃತ್ತದ (ಹಳೇ ಡಿಸಿ ಆಫೀಸ್) ಬಳಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡುವ ವೇಳೆ ಹೈಡ್ರಾಮಾವೇ ನಡೆಯಿತು. ಪ್ರತಿಭಟನಾಕಾರರು ಸರ್ಕಲ್ ಬಂದ್ ಮಾಡಿ ಟೈರ್ ಗೆ ಬೆಂಕಿ ಹಚ್ಚಲು ಮುಂದಾದಾಗ ಪೊಲೀಸರು ಅವಕಾಶ ನೀಡಲಿಲ್ಲ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತೀವ್ರ ವಾಗ್ವಾದವೇ ನಡೆಯಿತು. ಜತೆಗೆ ತಳ್ಳಾಟ, ನೂಕಾಟವೂ ನಡೆದು ಕೆಲಕಾಲ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪಟ್ಟು ಬಿಡದ ಪ್ರತಿಭಟನಕಾರರು ಟೈರ್ ಗೆ ಬೆಂಕಿ ಹಚ್ಚಿದರು.ಕೈಗೆ ಗಾಯ: ಟೈರ್‌ಗೆ ಬೆಂಕಿ ಹಚ್ಚಿದ ವೇಳೆಯಲ್ಲಿಯೇ ಪ್ರತಿಭಟನಾಕಾರನೊಬ್ಬ ಸಿಎಂ ಸಿದ್ಧರಾಮಯ್ಯ ಭಾವಚಿತ್ರ ಹಿಡಿದುಕೊಂಡು ಬಾಯಿ ಬಡಿದುಕೊಳ್ಳುತ್ತಾ ಬಂದು ಸಿಎಂ ಭಾವಚಿತ್ರವನ್ನು ಬೆಂಕಿ ಹಚ್ಚಿದ್ದ ಟೈರ್ ನಲ್ಲಿ ಹಾಕಿ ತನ್ನ ಆಕ್ರೋಶ ಹೊರ ಹಾಕಿದನು. ಇದನ್ನ ಆರಿಸಲು ಕೆಲ ಪೊಲೀಸ್ ಅಧಿಕಾರಿಗಳು ಮುಂದಾದರು. ಇದಕ್ಕೆ ಪ್ರತಿಭಟನಾಕಾರರು ಅಡ್ಡಿಪಡಿಸಿದರು. ಈ ವೇಳೆಯೂ ನೂಕಾಟ ತಳ್ಳಾಟ ಉಂಟಾದ ಹಿನ್ನೆಲೆಯಲ್ಲಿ ಪಂಚಮಸಾಲಿ ಸಮುದಾಯದ ಯುವ ಮುಖಂಡ ಶಿವರಾಜಗೌಡ ಹಿರೇಮನಿಪಾಟೀಲ ಕಾಲು, ಕೈಗೆ ಬೆಂಕಿ ತಗಲಿ ಅನಾಹುತವೇ ಸೃಷ್ಠಿಯಾಯಿತು. ತಕ್ಷಣವೇ ಗಮನಿಸಿದ ಇನ್ನುಳಿದ ಪ್ರತಿಭಟನಾಕಾರರು ಕಾಲಿಗೆ ಹತ್ತಿದ್ದ ಬೆಂಕಿ ನಂದಿಸಿದರು. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ ಆದರೆ ಕೈ ಮತ್ತು ಕಾಲಿಗೆ ಸುಟ್ಟಗಾಯಗಳಾಗಿವೆ.
ತಳ್ಳಾಟ ನೂಕಾಟ:ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ನಮ್ಮ ಸಮುದಾಯದ ಹೋರಾಟಗಾರರ ಮೇಲೆ ಅನಗತ್ಯವಾಗಿ ಲಾಠಿ ಚಾರ್ಜ್ ಮಾಡಿಸಿ ಸಮಾಜದಲ್ಲಿನ ಶಾಂತಿ ಕದಡುವಲ್ಲಿ ಸಿದ್ಧರಾಮಯ್ಯ ಅವರೇ ಪ್ರಮುಖ ಪಾತ್ರಧಾರಿಗಳು ಅವರು ಸಿಎಂ ಕುರ್ಚಿ ಮೇಲೆ ಕುಳಿತುಕೊಳ್ಳಲು ಯೋಗ್ಯರಲ್ಲ ಎಂದು ಅವರ ಅಣಕು ಶವಯಾತ್ರೆ ನಡೆಸಲು ಪ್ರತಿಭಟನಾಕಾರರು ಮುಂದಾದರು.ಶವಯಾತ್ರೆಗೆ ಸಿದ್ಧ ಮಾಡಿಕೊಂಡಿದ್ದ ವಸ್ತುಗಳನ್ನು ಪೊಲೀಸರು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಂತೆ ತೀವ್ರ ತಳ್ಳಾಟ, ನೂಕಾಟವೇ ಸೃಷ್ಟಿಯಾಗಿ ಪಂಚಮಸಾಲಿ ಮುಖಂಡರು ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ವಾಗ್ವಾದ ಉಂಟಾಗಿದ್ದರಿಂದ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿತ್ತು. ಕೊನೆಗೆ ಟೈರ್ ಗೆ ಹಚ್ಚಿದ್ದ ಬೆಂಕಿ ನಂದಿಸಿ ಪ್ರತಿಭಟನೆಯ ಬಿಗುವಿನ ಪರಿಸ್ಥಿತಿ ಪೊಲೀಸರು ಹರಸಾಹಸ ಪಟ್ಟು ನಿಯಂತ್ರಿಸಿದರು.
ಬೆಳಗಾವಿಯಲ್ಲಿ ಅನಗತ್ಯವಾಗಿ ನಮ್ಮ ಸಮುದಾಯದವರ ಮೇಲೆ ಲಾಠಿ ಚಾರ್ಜ್ ಮಾಡಿದರು. ಅದನ್ನು ಖಂಡಿಸಿ ಗದಗ ನಗರದಲ್ಲಿ ಹೋರಾಟ ಮಾಡುತ್ತಿರುವ ವೇಳೆಯಲ್ಲಿಯೂ ಪೊಲೀಸರು ಅಡ್ಡಿ ಪಡಿಸಲು ಮುಂದಾದರು ಇದರಿಂದ ನನ್ನ ಪ್ಯಾಂಟ್ ಹಾಗೂ ಕೈಗೆ ಬೆಂಕಿ ತಗಲಿ ಸುಟ್ಟಗಾಯಗಾಳಾಗಿವೆ ಎಂದು ಪ್ರತಿಭಟನೆಯಲ್ಲಿ ಗಾಯಗೊಂಡ ಯುವಕ ಶಿವರಾಜಗೌಡ ಹಿರೇಮನಿಪಾಟೀಲ ತಿಳಿಸಿದ್ದಾರೆ.ಶಾಂತಿಯುತವಾಗಿ ಹೋರಾಟ ಮಾಡಿದರೆ ಪೊಲೀಸರು ಸರ್ಕಾರದ ಕುಮ್ಮಕ್ಕಿನಿಂದ ಮೊನ್ನೆ ಬೆಳಗಾವಿಯಲ್ಲಿ ಅಟ್ಟಾಡಿಸಿ ಹೊಡೆದಿದ್ದಾರೆ. ಜಿಲ್ಲಾ ಕೇಂದ್ರದಲ್ಲೂ ನ್ಯಾಯಯುತ ಪ್ರತಿಭಟನೆಗೆ ಅಡ್ಡಿ ಪಡಿಸುತ್ತಾರೆ.ಸಿದ್ದರಾಮಯ್ಯ ಕುಮ್ಮಕ್ಕಿನಿಂದ ನಮ್ಮ ಸಮಾಜವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ಕೂಡಲೇ ನಿಲ್ಲಿಸಬೇಕು ಪಂಚಮಸಾಲಿ ಸಮುದಾಯದ ಯುವ ಮುಖಂಡ ವಸಂತ ಪಡಗದ ಹೇಳಿದರು.