ನೇಹಾ ಹತ್ಯೆ ಖಂಡಿಸಿ ವಿವಿಧೆಡೆ ಪ್ರತಿಭಟನೆ

| Published : Apr 24 2024, 02:21 AM IST

ಸಾರಾಂಶ

ರಾಯಚೂರಿನ ಡಿಸಿ ಕಚೇರಿ ಮುಂದೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ದೇವದುರ್ಗ ಪಟ್ಟಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ದೇವದುರ್ಗ ತಾಲೂಕು ಸಮಿತಿ ರ್‍ಯಾಲಿ ನಡೆಸಿ,ತಹಸೀಲ್ದಾರ್‌ ಮುಖಾಂತರ ಸಿಎಂಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು/ದೇವದುರ್ಗ

ಹುಬ್ಬಳ್ಳಿ ಬಿವಿಬಿ ಕಾಲೇಜಿನ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಖಂಡನೀಯವಾಗಿದ್ದು, ಕೂಡಲೇ ಆರೋಪಿಗೆ ಉಗ್ರ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಜಿಲ್ಲೆಯ ವಿವಿಧೆಡೆ ವಿವಿಧ ಸಂಘಟನೆಗಳಿಂದ ಮಂಗಳವಾರ ಪ್ರತ್ಯೇಕ ಪ್ರತಿಭಟನೆಗಳನ್ನು ನಡೆಸಲಾಯಿತು.

ರಾಯಚೂರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೇರಿದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಸಮಿತಿ ಪದಾಧಿಕಾರಿಗಳು, ನಾಗರಿಕ ಹಿತರಕ್ಷಣಾ ವೇದಿಕೆ ಮುಖಂಡರು ಪ್ರತ್ಯೇಕ ಪ್ರತಿಭಟನೆ ನಡೆಸಿದರು. ಅದೇ ರೀತಿ ಅಂಬೇಡ್ಕರ್‌ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಹೋರಾಟ ನಡೆಸಲಾಯಿತು. ಇನ್ನು ದೇವದುರ್ಗ ಪಟ್ಟಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ದೇವದುರ್ಗ ತಾಲೂಕು ಸಮಿತಿ ರ್‍ಯಾಲಿ ನಡೆಸಿ, ತಹಸೀಲ್ದಾರ್‌ ಕಚೇರಿಯಲ್ಲಿ ಶಿರಸ್ತೇದಾರ ಭೀಮರಾಯ ನಾಯಕ ಗೋವಿಂದಪಲ್ಲಿರಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಕಾನೂನು ವ್ಯವಸ್ಥೆಗೆಟ್ಟಿರುವದು ಹಾಗೂ ಇಂತಹ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗದಿರುವದೇ ಇರುವದರಿಂದ ಘಟನೆಗಳ ಪುನಾರಾವರ್ತನೆಯಾಗುತ್ತಿವೆ. ಇದೊಂದು ಲವ್ ಜಿಹಾದ್ ಪ್ರಕರಣವಾಗಿದ್ದು, ಕ್ರೂರ ಮನಸ್ಸಿನ ಫಯಾಜ್‌ನಿಗೆ ಕಠಿಣ ಶಿಕ್ಷೆಯಾಗಬೇಕು. ಹಾಗೂ ನೇಹಾ ಹಿರೇಮಠ ಕುಟುಂಬಕ್ಕೆ ಸೂಕ್ತ ಕಾನೂನಿನ ರಕ್ಷಣೆ ನೀಡಬೇಕು. ಈ ಪ್ರಕರಣವನ್ನು ರಾಜಕಾರಣಕ್ಕೆ ಸಿಲುಕಿಸದೇ ಸಿಬಿಐಗೆ ತನಿಖೆಗೆ ಒಪ್ಪಿಸಬೇಕು.

ಕೂಡಲೇ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ಸೂಕ್ತ ರಕ್ಷಣೆ, ಪೊಲೀಸರು ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಬೇಕು ಎಂದು ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿಯ್ಯಾಪೂರ,ಜಿಲ್ಲಾ ಬಿಎಸ್‌ಪಿ ಅಧ್ಯಕ್ಷ ವೆಂಕನಗೌಡ,ಮುಖಂಡರಾದ ಮಂತ್ರಜಾತಯ್ಯ ಸ್ವಾಮಿ ಯರಮರಸ,ರೇಣುಕಾ ಮಯೂರಸ್ವಾಮಿ,ರವಿ ಪಾಟೀಲ್ ಅಳ್ಳುಂಡಿ,ಪ್ರಕಾಶ ಪಾಟೀಲ್ ಅಮರಾಪೂರ ಆಗ್ರಹಿಸಿದರು.

ರಾಯಚೂರಿನ ಹೋರಾಟದಲ್ಲಿ ಜನವಾದಿ ಸಂಘಟನೆ ಪದಾಧಿಕಾರಿಗಳಾದ ಸಂಘಟನೆಯ ಜಿಲ್ಲಾಧ್ಯಕ್ಷೆ ಶಕುಂತಲಾ ಪಾಟೀಲ್, ಜಿಲ್ಲಾ ಕಾರ್ಯದರ್ಶಿ ವರಲಕ್ಷ್ಮೀ, ಮುಖಂಡರಾದ ಸುಲೋಚನಾ ಸಂಘ, ಸಾವಿತ್ರಿ, ವಿಜಯಲಕ್ಷ್ಮೀ, ರೇಣುಕಾ ದೇವದುರ್ಗ, ನಾಗರತ್ನ, ಸರೋಜ, ಮುನ್ನಾಬೀ ಭಾಗವಹಿಸಿದ್ದರು.