ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡಲಗಿ
ಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಿಗ ಹಿಂದೂಗಳ ಮೇಲೆ ನಡೆದ ಉಗ್ರರ ದಾಳಿ ಹಾಗೂ ಸಿಇಟಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಜನಿವಾರವನ್ನು ಕತ್ತರಿಸಿರುವುದನ್ನು ಖಂಡಿಸಿ ಸೋಮವಾರ ಹಿಂದೂಪರ ಸಂಘಟನೆಗಳ ಒಕ್ಕೂಟದಿಂದ ಪಟ್ಟಣದ ಹನುಮಾನ ದೇವಸ್ಥಾನದಿಂದ ಬೃಹತ್ ಮೆರವಣಿಗೆ ಮೂಲಕ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಪ್ರತಿಭಟಿಸಿ, ರಸ್ತೆ ತಡೆದು ಪಾಕಿಸ್ತಾನ ಧ್ವಜಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಈ ತಕ್ಷಣವೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಹಸೀಲ್ದಾರ್ ಕಚೇರಿಯ ಸಿರಸ್ತದಾರ ಪರಶುರಾಮ್ ನಾಯಕ ಮೂಲಕ ರಾಷ್ಟ್ರಪತಿಗಳಿಗೆ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಈ ವೇಳೆ ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ್ಯ ಸಂಯೋಜಕ ಲಕ್ಷ್ಮಣ ಮಿಶಾಳೆ ಮಾತನಾಡಿ, ಪೆಹಲ್ಲಾಮನಲ್ಲಿ ಪ್ರವಾಸಿಗ ಹಿಂದೂಗಳ ಮೇಲೆ ನಡೆದ ಭಯಾನಕ ಉಗ್ರರ ದಾಳಿಯಲ್ಲಿ ಕನ್ನಡಿಗರು ಸೇರಿ ದೇಶದ 28ಕ್ಕೂ ಹೆಚ್ಚು ಹಿಂದೂ ನಾಗರಿಕರ ಹತ್ಯೆ ಆಗಿದ್ದು, ರಾಷ್ಟ್ರದ ಪ್ರತಿಯೊಬ್ಬ ನಾಗರಿಕನ ಮನಸ್ಸಿನಲ್ಲಿ ದುಃಖ ಮತ್ತು ಆಕ್ರೋಶ ಉಂಟಾಗಿದೆ. ಈ ವಿಷಯದನ್ವಯ ಹಿಂದೂಗಳನ್ನು ಹತ್ಯೆ ಮಾಡಿದ ಪ್ರತಿಯೊಂದು ದೇಶದಲ್ಲಿನ ಜಿಹಾದಿ ಉಗ್ರರನ್ನು ಸಂಹರಿಸಿ ಕಠಿಣ ರೂಪದ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.ವಿಶ್ವ ಹಿಂದು ಪರಿಷತ್ತಿನ ಚಿಕ್ಕೋಡಿ ಜಿಲ್ಲಾ ವಿದ್ಯಾರ್ಥಿಗಳ ಮುಖಂಡ ಲಕ್ಷ್ಮಣ ಯಡ್ರಾವಿ ಹಾಗೂ ಮುಖಂಡ ಬಾಲದೇವ ಸಣ್ಣಕ್ಕಿ ಮಾತನಾಡಿ, ಹೇಡಿತನದ ಕೃತ್ಯ ಧೈರ್ಯದಿಂದ ಎದುರುಗಡೆ ನಿಂತು ಎದುರಿಸುವ ಶಕ್ತಿ ಇಲ್ಲ ಹೀಗಾಗಿ ಹಿಂದಿನಿಂದ ದಾಳಿ ಮಾಡುತ್ತಿದ್ದಾರೆ. ಹಿಂದೂಗಳ ಮೇಲೆ ದಾಳಿ ಮಾಡುವರ ವಿರುದ್ದ ತಕ್ಕ ಶಾಸ್ತಿ ಆಗಲೇಬೇಕು. ಹಾಗಾಗಿ ನಾವೆಲ್ಲ ಹಿಂದುಗಳು ಒಗ್ಗಟ್ಟಾಗಿ ದೇಶದ ಪ್ರಧಾನ ಮಂತ್ರಿಗಳಿಗೆ ಬೆಂಬಲ ಸೂಚಿಸಬೇಕು ಎಂದರು.ಜನಿವಾರ ಕತ್ತರಿಸಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿ ಪೈಶಾಚಿಕ ಕೃತ್ಯ ಎಸಗಿದ ಧಾರವಾಡ ಪೊಲೀಸ್ ಅಧಿಕಾರಿ ಅದೇ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಅವಹೇಳನಕಾರಿ. ಸಮಾಜ ವಿರೋಧಿ ಕೆಲಸದಲ್ಲಿ ಭಾಗಿಯಾದ ಎಲ್ಲ ಅಧಿಕಾರಿಗಳನ್ನು ಕೂಡಲೇ ವಜಾಗೊಳಿಸಬೇಕು. ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಸರ್ಕಾರವು ಸ್ಪಷ್ಟ ಮಾರ್ಗಸೂಚಿಗಳನ್ನು ಮುಂಚಿತವಾಗಿಯೇ ಹೊರಡಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಹಿಂದೂಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರಾದ ಮಾಳಪ್ಪ ಮೆಳವಂಕಿ, ಪುರುಷೋತ್ತಮ ಒಡೆಯರ, ಮಾಂತೇಶ ಹತ್ರಿಕಿ, ಬಸಯ್ಯ ಹಿರೇಮಠ, ಸಂಗಯ್ಯ ವಸ್ತ್ರದ, ದಯಾನಂದ ಸವದಿ, ಮಾಲತಿ ಅಶ್ರಿತ, ಸುಜಾತ ಹಿರೇಮಠ, ಮಹಾದೇವ ಶೆಕ್ಕಿ, ಮಹಾಂತೇಶ ಕುಡುಚಿ, ಶಿವಭೋದ ಗೋಕಾಕ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.