ಸಾರಾಂಶ
ಮೆಡಿಕಲ್ ವಿದ್ಯಾರ್ಥಿನಿ ಕೊಲೆ ಖಂಡಿಸಿ ಪ್ರತಿಭಟನೆ
ಕನ್ನಡ ಪ್ರಭ ವಾರ್ತೆ ತಿಪಟೂರು
ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ, ದೌರ್ಜನ್ಯ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ತಾಲೂಕು ಶಾಖೆಯ ಪದಾಧಿಕಾರಿಗಳು ೨೪ ಗಂಟೆಗಳ ಕಾಲ ವೈದ್ಯಕೀಯ ಸೇವೆ ಬಂದ್ ಮಾಡಿ ನಗರದ ಶ್ರೀ ಕೆಂಪಮ್ಮದೇವಿ ದೇವಸ್ಥಾನದಿಂದ ತಾಲೂಕು ಆಡಳಿತಸೌಧದವರೆಗೆ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಪವನ್‌ಕುಮಾರ್‌ಗೆ ಮನವಿ ಪತ್ರ ಸಲ್ಲಿಸಿದರು.ಈ ವೇಳೆ ಭಾರತೀಯ ವೈದ್ಯಕೀಯ ಸಂಘದ ತಾಲೂಕು ಘಟಕದ ಅಧ್ಯಕ್ಷ ಡಾ.ರಾಮೇಗೌಡ ಮಾತನಾಡಿ, ಇದೊಂದು ಅತ್ಯಂತ ಅಮಾನವೀಯ ಹಾಗೂ ದೇಶವೇ ತಲೆ ತಗ್ಗಿಸುವಂತ ಘಟನೆಯಾಗಿದೆ. ಜನರ ಜೀವ ಉಳಿಸಲು ದಿನದ ೨೪ ತಾಸು ಕೆಲಸ ಮಾಡುವ ವೈದ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ವೈದ್ಯರ ರಕ್ಷಣೆಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಹಗಲು ರಾತ್ರಿ ಎನ್ನದೆ ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುವ ವೈದ್ಯರ ಮೇಲೆ ಇಂತಹ ಘಟನೆ ನಡೆದಿರುವುದರಿಂದ ವೈದ್ಯರು ಭಯಪಡುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಈ ಘಟನೆ ಅತ್ಯಂತ ಕ್ರೌರ್ಯದಿಂದ ಕೂಡಿದೆ. ಈ ಘಟನೆಯಲ್ಲಿ ಹಲವರು ಭಾಗಿಯಾಗಿದ್ದು, ಅವರನ್ನು ಬಂಧಿಸಿ ಗಲ್ಲು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.ಡಾ.ಶ್ರೀಧರ್ ಮತ್ತು ಡಾ.ಅನಿಲ್ ಮಾತನಾಡಿ, ವೈದ್ಯಕೀಯ ಶಿಕ್ಷಣ ಪಡೆಯುವುದು ಸುಲಭವಲ್ಲ. ಸಾಕಷ್ಟು ಶ್ರಮ, ಶ್ರದ್ಧೆ ವಹಿಸಿ ಈ ವೃತ್ತಿ ಆಯ್ಕೆ ಮಾಡಿಕೊಂಡು ಬಂದಿರುತ್ತಾರೆ. ಮತ್ತೊಬ್ಬರ ಜೀವ ಉಳಿಸುವ ವೈದ್ಯರ ಸ್ಥಿತಿಯೇ ಹೀಗಾದರೆ ಸಾಮಾನ್ಯ ಜನರ ಪಾಡೇನು. ಈ ಘಟನೆಯನ್ನು ನೋಡಿದರೆ ಮಹಿಳೆಯರಿಗೆ ಯಾವ ಕ್ಷೇತ್ರದಲ್ಲಿಯೂ ಸುರಕ್ಷತೆ ಇಲ್ಲದಂತಾಗಿದೆ. ಇಂತಹ ಘಟನೆಗಳು ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ವೈದ್ಯರಾದ ಡಾ.ವಿವೇಚನ್, ಡಾ.ಮಧುಸೂಧನ್, ಡಾ.ನೇಮಿನಾಥ್, ಡಾ.ರಕ್ಷಿತ್, ಡಾ.ಪ್ರಹ್ಲಾದ್, ಡಾ.ಮೀರಾಶ್ರೀಧರ್, ಎಂ.ಸಿ.ನಾಗರಾಜ್, ರಂಗನಾಥ್, ಸುರೇಶ್, ಸುಬ್ಬುರಾವ್, ಡಾ.ಅಶ್ವಿನಿ ಸೇರಿದಂತೆ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು, ಲ್ಯಾಬ್ ಟೆಕ್ನಿಷಿಯನ್ಸ್ ಭಾಗವಹಿಸಿದ್ದರು.