ಸಾರಾಂಶ
ಹೂವಿನಹಡಗಲಿ ತಾಲೂಕಿನ ಹ್ಯಾರಡ ಗ್ರಾಪಂ ವ್ಯಾಪ್ತಿಯ ನರೇಗಾ ಕಾರ್ಮಿಕರ ಕೂಲಿ ಹಣ ಸಂಪೂರ್ಣ ನೀಡದೇ ಭ್ರಷ್ಟಾಚಾರ ಮಾಡಿರುವ ಪಿಡಿಒ, ಎಂಜಿನಿಯರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಜಾ ಮಾಡಬೇಕು ಎಂದು ಅಖಿಲ ಭಾರತ ಕೃಷಿ ಕಾರ್ಮಿಕ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಪ್ರತಿಭಟನೆ ಮಾಡಿದೆ.
ಹೂವಿನಹಡಗಲಿ: ತಾಲೂಕಿನ ಹ್ಯಾರಡ ಗ್ರಾಪಂ ವ್ಯಾಪ್ತಿಯ ನರೇಗಾ ಕಾರ್ಮಿಕರ ಕೂಲಿ ಹಣ ಸಂಪೂರ್ಣ ನೀಡದೇ, ಭ್ರಷ್ಟಾಚಾರ ಮಾಡಿರುವ ಪಿಡಿಒ, ಎಂಜಿನಿಯರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಜಾ ಮಾಡುವ ಜತೆಗೆ, ಸಂಪೂರ್ಣ ₹379 ಕೂಲಿ ಹಣ ಪಾವತಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಕೃಷಿ ಕಾರ್ಮಿಕ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಪ್ರತಿಭಟನೆ ಮಾಡಿದೆ.
ಇಲ್ಲಿನ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಲ್ಲಿ ಪ್ರತಿಭಟನೆ ಮಾಡಿ ತಾಪಂ ಇಒ ಎಂ. ಉಮೇಶ ಅವರಿಗೆ ಮನವಿ ಪತ್ರ ಸಲ್ಲಿಸಿದ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಸಂದೇಶ ಪರಶುರಾಮ ಮಾತನಾಡಿ, ಹ್ಯಾರಡ ಗ್ರಾಮದ ನರೇಗಾ ಕೂಲಿ ಕಾರ್ಮಿಕರ ಕೂಲಿ ಹಣ ಸರ್ಕಾರ ₹379ಗಳನ್ನು ನಿಗದಿಪಡಿಸಿದೆ. ಆದರೆ ಕಡಿಮೆ ಕೂಲಿ ಮೊತ್ತವನ್ನು ಪಾವತಿ ಮಾಡುತ್ತಿದ್ದಾರೆ. ಗ್ರಾಮದಲ್ಲಿ ನರೇಗಾ ಕೂಲಿ ಕಾರ್ಮಿಕರು 1200 ಉದ್ಯೋಗ ಕಾರ್ಡ್ ಹೊಂದಿದ್ದು, ಒಂದು ಸಾವಿರಕ್ಕೂ ಅಧಿಕ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇಲ್ಲಿಯವರಿಗೆ 13ರಿಂದ 16 ದಿನ ಕೆಲಸ ಮಾಡಿದ್ದಾರೆ. ಇಲ್ಲಿನ ಪಿಡಿಒ ಹಾಗೂ ಎಂಜಿನಿಯರ್ ನರೇಗಾ ಯೋಜನೆಯ ನಿಯಮಗಳನ್ನು ಗಾಳಿಗೆ ತೂರಿದ್ದು, ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.ಸಂಘಟನೆಯ ಹುಲಿಕಟ್ಟೆ ಮೈಲೆಪ್ಪ, ಸಂತೋಷ ಮಾತನಾಡಿ, ನರೇಗಾ ನಿಯಮಗಳಂತೆ ಕಾರ್ಮಿಕರ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ, ನೆರಳಿನ ವ್ಯವಸ್ಥೆ, ಕುಡಿಯುವ ಶುದ್ಧ ನೀರಿನ ವ್ಯವಸ್ಥೆ ಮಾಡಿದೇ ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಈ ಕೂಡಲೇ ವಜಾ ಮಾಡಬೇಕು. ಕೂಲಿ ಕಾರ್ಮಿಕರ ಬಾಕಿ ಹಣ ಬ್ಯಾಂಕ್ ಜಮಾ ಮಾಡಬೇಕು. ಸರ್ಕಾರದ ಬೇಸಿಗೆ ನಿಯಮದಂತೆ ಶೇ. 70 ಕೆಲಸ ಮಾಡುವ ನಿಯಮವನ್ನು ಉಲ್ಲಂಘಿಸಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಜಿಪಂ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಫಕ್ಕೀರಪ್ಪ, ಹಾಲಮ್ಮ, ರೇಣುಕಮ್ಮ, ಲತಾ, ಕೋಟೆಪ್ಪ, ಭಾರತಿ, ಮಂಜಪ್ಪ, ಹನುಮಂತಪ್ಪ, ಶಾರದಮ್ಮ, ದ್ಯಾಮಮ್ಮ, ರತ್ನಮ್ಮ, ರಮೇಶ, ಪುಷ್ಪ, ಮಹಾಂತೇಶ ಇತರರಿದ್ದರು.