ಸ್ಥಾನದಲ್ಲಿದ್ದರೂ ನನ್ನ ಜನ್ಮಭೂಮಿ ಹುಬ್ಬಳ್ಳಿ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದು ಐಪಿಎಸ್ ಅಧಿಕಾರಿ, ಹೈದರಾಬಾದ್‌ ನಗರ ಪೊಲೀಸ್‌ ಆಯುಕ್ತ ವಿಶ್ವನಾಥ ಸಜ್ಜನರ ಹೇಳಿದರು.

ಹುಬ್ಬಳ್ಳಿ: ಇಂದು ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ನನ್ನ ಜನ್ಮಭೂಮಿ ಹುಬ್ಬಳ್ಳಿ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದು ಐಪಿಎಸ್ ಅಧಿಕಾರಿ, ಹೈದರಾಬಾದ್‌ ನಗರ ಪೊಲೀಸ್‌ ಆಯುಕ್ತ ವಿಶ್ವನಾಥ ಸಜ್ಜನರ ಹೇಳಿದರು.

ಇಲ್ಲಿನ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಬಯೋ ಟೆಕ್ನಾಲಜಿ ಸಭಾಂಗಣದಲ್ಲಿ ವಿಶ್ವನಾಥ ಸಜ್ಜನರ ಗೆಳೆಯರ ಬಳಗದ ವತಿಯಿಂದ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ವಿಶ್ವನಾಥ ಸಜ್ಜನರ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಗಣ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.ಈ ಜನ್ಮಭೂಮಿಯೇ ಸ್ಪೂರ್ತಿ

ನಾನು ಆಂಧ್ರ ಪ್ರದೇಶ, ತೆಲಂಗಾಣದ ಸಾಕಷ್ಟು ಪ್ರದೇಶಗಳಲ್ಲಿ ಹಾಗೂ ಗುಪ್ತ ದಳದಲ್ಲಿ ಕೆಲಸ ಮಾಡಲು ಗಂಡುಮೆಟ್ಟಿದ ನಾಡಾದ ಈ ಜನ್ಮಭೂಮಿಯೇ ಸ್ಫೂರ್ತಿ. ಹುಬ್ಬಳ್ಳಿಯ ಪರಿಸರ, ಸಂಸ್ಕೃತಿ ನನಗೆ ವಿವಿಧ ಭಾಗಗಳಲ್ಲಿ ಕೆಲಸ ಮಾಡಲು ಸಹಕಾರಿಯಾಗಿದೆ. ಒಬ್ಬ ವ್ಯಕ್ತಿ ಬೆಳೆಯಲು ಆತನ ಸ್ನೇಹಿತರು, ಕುಟುಂಬಸ್ಥರು ಕಾರಣರಾಗುತ್ತಾರೆ. ಆ ಸಾಲಿನಲ್ಲಿ ನನ್ನ ಹುಬ್ಬಳ್ಳಿ ಸ್ನೇಹ ಬಳಗ ಮತ್ತು ಕುಟುಂಬಸ್ಥರು ನನಗೆ ಕ್ಲಿಷ್ಟಕರವಾದ ಸನ್ನಿವೇಶಗಳಲ್ಲಿ ಧೈರ್ಯ ತುಂಬಿದ್ದಾರೆ. ಅದೇ ರೀತಿ ಗುರು- ಹಿರಿಯರು ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ಉತ್ತರ ಕರ್ನಾಟಕ ಭಾಗ ಬಹಳಷ್ಟು ಹಿಂದೆ ಉಳಿದಿದೆ. ಇಲ್ಲಿನ ಯುವಕರು ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುವಂತಾಗಬೇಕು. ನಾನು ಎಲ್ಲೇ ಇದ್ದು ಕೆಲಸ ಮಾಡಿದರೂ ನಿಮ್ಮವನಾಗಿ, ನಿಮ್ಮ ಪರವಾಗಿಯೇ ಇರುತ್ತೇನೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ದೇಶದ ಭದ್ರತೆ ಮತ್ತು ಆಂತರಿಕ ಭದ್ರತೆ ಬಗ್ಗೆ ವಿಶ್ವನಾಥ ಸಜ್ಜನರ ಸರ್ಕಾರಕ್ಕೆ ಸಲಹೆ ನೀಡುವ ಕೆಲಸ ಮಾಡುತ್ತಾರೆ. ಇತ್ತೀಚೆಗೆ ದೇಶದ ಭದ್ರತೆ ಬಗ್ಗೆ ಅವರು ಕೊಟ್ಟ ಕೆಲ ಮಾಹಿತಿಗಳನ್ನು ಕೇಂದ್ರದ ಗೃಹ ಸಚಿವಾಲಯಕ್ಕೆ ನೀಡಿದ್ದೇನೆ ಎಂದು ಸ್ಮರಿಸಿದರು.

ಸಾಮಾನ್ಯ ಕುಟುಂಬದಲ್ಲಿ ಬೆಳೆದು ಈ ಮಟ್ಟಕ್ಕೆ ಸಜ್ಜನರ ಬೆಳೆದಿದ್ದಾರೆ. ಸರ್ಕಾರಗಳು ಬದಲಾದಂತೆ ಅಧಿಕಾರಿಗಳು ತಮ್ಮ ಅಧಿಕಾರ ಉಳಿಸಿಕೊಳ್ಳುವುದು ಕಷ್ಟ. ಆದರೆ, ಸಜ್ಜನರಿಗೆ ಈ ತೊಂದರೆ ಬರಲ್ಲ. ಏಕೆಂದರೆ ಅದು ಅವರ ಕರ್ತವ್ಯ ನಿಷ್ಠೆಯನ್ನು ತೋರ್ಪಡಿಸುತ್ತದೆ. ಅವರ ನಿವೃತ್ತಿ ನಂತರವೂ ಕೇಂದ್ರ ಸರ್ಕಾರದಿಂದ ಅವರ ಅನುಭವಗಳನ್ನು ಪಡೆಯುತ್ತೇವೆ ಎಂದರು.

ಮೆಚ್ಚುವಂತಹ ಕಾರ್ಯ

ವಿಪ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಹುಬ್ಬಳ್ಳಿಯಿಂದ ತೆಲಂಗಾಣಕ್ಕೆ ಹೋಗಿ ದೇಶವೇ ಹೆಮ್ಮೆ ಪಡುವಂತೆ ವಿಶ್ವನಾಥ ಸಜ್ಜನರ ಕೆಲಸ ಮಾಡುತ್ತಿದ್ದಾರೆ. ಪೊಲೀಸರ ಕೆಲಸ ಕ್ಲಿಷ್ಟಕರ. ಇಂತಹ ಇಲಾಖೆಯಲ್ಲಿ ಸಜ್ಜನರ ಎಲ್ಲರೂ ಮೆಚ್ಚುವಂತೆ ಕಾರ್ಯ ನಿರ್ವಹಿಸಿದ್ದಾರೆ. ಇವರು ಎನ್‌ಕೌಂಟರ್ ಮಾಡಿದಾಗ ಆ ಸನ್ನಿವೇಶದಲ್ಲಿ ನಿರ್ಧಾರ ಕೈಗೊಂಡು ಅವರು ಮಾಡಿರುವ ಕಾರ್ಯವನ್ನು ಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿದೆ. ಅಧಿಕಾರ ಇದ್ದಾಗ ಜನರಿಗಾಗಿ ಕೆಲಸ ಮಾಡಬೇಕು. ಆ ಕಾರ್ಯವನ್ನು ಸಜ್ಜನರ ಮಾಡಿದ್ದಾರೆ ಎಂದರು.

ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಮಾತನಾಡಿ, ಶಿಷ್ಟರ ರಕ್ಷಣೆ, ದುಷ್ಟರ ಶಿಕ್ಷಿಸುವ ಕಾರ್ಯ ಅವರದ್ದು, ಈ ಕಾರ್ಯದಿಂದಲೇ ತೆಲಂಗಾಣ ಶಾಂತವಾಗಿದೆ. ಅವರಿಗೆ ಮತ್ತಷ್ಟು ಉನ್ನತ ಹುದ್ದೆ ಅವರಿಗೆ ದೊರೆಯಲಿ ಎಂದರು.

ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಬಿವಿಬಿ ಕಾಲೇಜು ಮುಖ್ಯದ್ವಾರದಿಂದ ತೆರೆದ ಜೀಪ್‌ನಲ್ಲಿ ಸಜ್ಜನರ ದಂಪತಿಯನ್ನು ಮೆರವಣಿಗೆಯ ಮೂಲಕ ಕಾರ್ಯಕ್ರಮದ ವೇದಿಕೆಗೆ ಕರೆತರಲಾಯಿತು. ಮಹಿಳೆಯರು ಆರತಿ ಬೆಳಗಿ ಬರಮಾಡಿಕೊಂಡರು.

ಶಾಸಕರಾದ ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ವಿಪ ಸದಸ್ಯ ಪ್ರದೀಪ ಶೆಟ್ಟರ್, ಕೆಎಲ್‌ಇ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಕೆಎಂಸಿಆರ್‌ಐ ನಿರ್ದೇಶಕ ಡಾ. ಈಶ್ವರ ಹೊಸಮನಿ, ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರು ವಿಶ್ವನಾಥ ಸಜ್ಜನರ ಅವರ ಕಾರ್ಯಗಳ ಕುರಿತು ಶ್ಲಾಘಿಸಿದರು.

ಶ್ರೀ ಸಿದ್ಧಾರೂಢಸ್ವಾಮಿ ಮಠ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಚನ್ನವೀರ ಮುಂಗರವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಸ್ವಾಗತಿಸಿದರು. ವಿಶ್ವನಾಥ ಸಜ್ಜನರ ಪತ್ನಿ ಅನೂಪಾ ಸಜ್ಜನರ, ಕುಟುಂಬಸ್ಥರು ಹಾಗೂ ಸ್ನೇಹಿತರು ಪಾಲ್ಗೊಂಡಿದ್ದರು.