ದೇಶಕ್ಕೆ ಅನೇಕ ಕಾನೂನು ಪಂಡಿತರನ್ನು ಕೊಟ್ಟ ಹೆಮ್ಮೆ: ವನಮಾಲಾ ಯಾದವ

| Published : Jun 01 2024, 12:47 AM IST

ದೇಶಕ್ಕೆ ಅನೇಕ ಕಾನೂನು ಪಂಡಿತರನ್ನು ಕೊಟ್ಟ ಹೆಮ್ಮೆ: ವನಮಾಲಾ ಯಾದವ
Share this Article
  • FB
  • TW
  • Linkdin
  • Email

ಸಾರಾಂಶ

ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಎಸ್.ಸಿ.ನಂದಿಮಠ ಕಾನೂನು ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಾದ ಭಾಗ್ಯಶ್ರೀ ಮಾದರ ಹಾಗೂ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಆಯ್ಕೆಯಾದ ಸಂಧ್ಯಾ ಸಿದ್ದಾಪೂರ, ಇತರರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಿ.ವಿ.ವಿ. ಸಂಘದ ಎಸ್.ಸಿ. ನಂದಿಮಠ ಕಾನೂನು ಮಹಾವಿದ್ಯಾಲಯ ದೇಶಕ್ಕೆ ಅನೇಕ ಕಾನೂನು ಪಂಡಿತರನ್ನು ಕೊಟ್ಟ ಹೆಮ್ಮೆಯಿದೆ ಎಂದು ಜಿಲ್ಲಾ ಮತ್ತು ಸತ್ರ ನಿವೃತ್ತ ನ್ಯಾಯಾಧೀಶ ಹಾಗೂ ಬಿ.ವಿ.ವಿ. ಸಂಘದ ಕಾನೂನು ಸಲಹೆಗಾರ ವನಮಾಲಾ ಯಾದವ ಹೇಳಿದರು.

ಬಿ.ವಿ.ವಿ. ಸಂಘದ ಎಸ್.ಸಿ. ನಂದಿಮಠ ಕಾನೂನು ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ನಡೆದ ಸಿವಿಲ್ ನ್ಯಾಯಾಧೀಶ (ಕಿ.ಶ್ರೇಣಿ) ಭಾಗ್ಯಶ್ರೀ ಮಾದರ ಮತ್ತು ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಆಯ್ಕೆಯಾದ ಎಸ್.ಸಿ. ನಂದಿಮಠ ಇವರಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಕಾನೂನು ವಿದ್ಯಾರ್ಥಿಗಳಿಗೆ ಎಲ್ಲ ಕ್ಷೇತ್ರಗಳ ಬಗ್ಗೆ ಜ್ಞಾನ, ನೀತಿ-ನಿಯಮಗಳ ಜೊತೆಗೆ ಕಾನೂನಿನಲ್ಲಿ ಮೂಲ ಉದ್ದೇಶಗಳ ತಳಹದಿಯ ಅರಿವೂ ಬಹಳ ಮುಖ್ಯ. ಶಿಸ್ತು, ಮನೋಧರ್ಯ, ಸೇವಾಮನೋಭಾವ, ಮಾನವೀಯ ಗುಣ ಬೆಳೆಸಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಚಾಕಚಕ್ಯತೆ ಬೆಳೆಸಿಕೊಳ್ಳಬೇಕು, ವಿದ್ಯಾರ್ಥಿಗಳು ಸಂಶೋಧನಾತ್ಮಕ ಅಧ್ಯಯನದಲ್ಲಿ ತೊಡಗಬೇಕು. ಬಿ.ವಿ.ವಿ.ಸಂಘದ ಎಸ್.ಸಿ. ನಂದಿಮಠ ಕಾನೂನು ಮಹಾವಿದ್ಯಾಲಯ ದೇಶಕ್ಕೆ ಅನೇಕ ಉತ್ತಮ ಕಾನೂನು ಪಂಡಿತರನ್ನು ಕೊಟ್ಟಿರುವುದು ಹಮ್ಮೆಯ ವಿಷಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ, ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ, ಉತ್ತರ ಕರ್ನಾಟಕ ಭಾಗದಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಬಿ.ವಿ.ವಿ. ಸಂಘದ ಎಸ್.ಸಿ. ನಂದಿಮಠ ಕಾನೂನು ಮಹಾವಿದ್ಯಾಲಯ ತನ್ನದೇ ಆದ ಕೊಡುಗೆ ನೀಡುತ್ತ ಬಂದಿದ್ದು. 1986ರಲ್ಲಿ ಪ್ರಾರಂಭವಾದ ಮಹಾವಿದ್ಯಾಲಯ ಇಲ್ಲಿಯವರೆಗೆ ಸುಮಾರು 29 ಜನ ನ್ಯಾಯಾಧೀಶರನ್ನು, 40ಕ್ಕೂ ಹೆಚ್ಚು ಸರ್ಕಾರಿ ಅಭಿಯೋಜಕರನ್ನು, ಅನೇಕ ಬಹುರಾಷ್ಟ್ರೀಯ ಕಂಪನಿಗಳ ಕಾನೂನು ಅಧಿಕಾರಿಗಳು ಹಾಗೂ ಸಾವಿರಾರು ಉತ್ತಮ ವಕೀಲರನ್ನು ನೀಡಿದೆ. ತನ್ನದೆ ಆದ ಸಾಧನೆಯೊಂದಿಗೆ ರಾಜ್ಯದಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆ ವಿಷಯವಾಗಿದೆ ಎಂದ ಅವರು, ಕಾನೂನು ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿವೆ. ವಕೀಲಿಕೆ ವೃತ್ತಿಯಲ್ಲ ನ್ಯಾಯ ಒದಗಿಸುವ ವ್ಯವಸ್ಥೆ. ಕಾನೂನು ವಿದ್ಯಾರ್ಥಿಗಳು ಒಳ್ಳೆಯ ನ್ಯಾಯಾಧೀಶರು ಹಾಗೂ ವಕೀಲರಾಗಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸನ್ಮಾನ : ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಎಸ್.ಸಿ. ನಂದಿಮಠ ಕಾನೂನು ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಾದ ಭಾಗ್ಯಶ್ರೀ ಮಾದರ ಹಾಗೂ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಆಯ್ಕೆಯಾದ ಸಂಧ್ಯಾ ಸಿದ್ದಾಪೂರ, ವೈ.ಜೆ. ಸಣಬಸಣ್ಣವರ, ಜಗತ್ ಕಣವಿ ಹಾಗೂ ನಾಗರಾಜ ಪೂಜಾರಗೆ ಮಹಾವಿದ್ಯಾಲಯದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ ವೇದಿಕೆಯ ಮೇಲಿದ್ದರು. ಕಾಲೇಜಿನ ಪ್ರಾಚಾರ್ಯ ಡಾ.ಎಂ.ಪಿ.ಚಂದ್ರಿಕಾ ಸ್ವಾಗತಿಸಿ ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕಿ ಭವಾನಿ ಪಾಟೀಲ ಕಾಲೇಜಿನ ಬಗ್ಗೆ ಸಂಕ್ಷಿಪ್ತ ಪರಿಚಯ ತಿಳಿಸಿದರು. ಸುನೀಲ ಗೋಡಿ ಪ್ರಾರ್ಥಿಸಿದರು. ಸಹ ಪ್ರಾಧ್ಯಾಪಕ ಶರಣಬಸವ ವಂದಿಸಿದರು.

ಹಕ್ಕುಗಳ ಜೊತೆಗೆ ಕರ್ತವ್ಯಗಳ ಬಗ್ಗೆ ಅರಿವು ಅಗತ್ಯವಿದ್ದು, ನೋಂದವರ ಬೆನ್ನಿಗೆ ನಿಲ್ಲುವ ಕೆಲಸವಾಗಲಿ, ನಮಗೆ ವಿದ್ಯಾದಾನ ಮಾಡಿದ ಮಹಾವಿದ್ಯಾಲಯ ಹಾಗೂ ಸಂಘದ ಬಗ್ಗೆ ಹೆಮ್ಮೆ ಇರಲಿ. ಅದಕ್ಕೆ ಸದಾಕಾಲ ಚಿರರುಣಿಯಾಗಿರೋಣ.

- ಭ್ಯಾಗ್ಯಶ್ರೀ ಮಾದರ, ನ್ಯಾಯಾಧೀಶೆಯಾಗಿ ಆಯ್ಕೆಯಾದ ಯುವತಿ