ಪಕ್ಷ ವಿರೋಧಿ ಚಟುವಟಿಕೆ ಸಾಬೀತುಪಡಿಸಿ

| Published : Sep 19 2024, 01:59 AM IST

ಪಕ್ಷ ವಿರೋಧಿ ಚಟುವಟಿಕೆ ಸಾಬೀತುಪಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ ಜಿಲ್ಲೆಯ ಮುಧೋಳ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆ ಮಾಡಿರುವುದನ್ನು 15 ದಿನಗಳೊಳಗಾಗಿ ಸಾಬೀತುಪಡಿಸಬೇಕು ಎಂದು ಬಿಜೆಪಿ ಉಚ್ಚಾಟಿತ ಹಿರಿಯ ಮುಖಂಡ ರಾಮಣ್ಣ ತಳೇವಾಡ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ಜಿಲ್ಲೆಯ ಮುಧೋಳ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆ ಮಾಡಿರುವುದನ್ನು 15 ದಿನಗಳೊಳಗಾಗಿ ಸಾಬೀತುಪಡಿಸಬೇಕು ಎಂದು ಬಿಜೆಪಿ ಉಚ್ಚಾಟಿತ ಹಿರಿಯ ಮುಖಂಡ ರಾಮಣ್ಣ ತಳೇವಾಡ ಹೇಳಿದರು.

ಬುಧವಾರ ತಮ್ಮ ಬೆಂಬಲಿಗರೊಂದಿಗೆ ನವನಗರದ ಬಿಜೆಪಿ ಜಿಲ್ಲಾ ಕಚೇರಿ ಮುತ್ತಿಗೆ ಹಾಕಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಅವರು, ಮುಧೋಳ ಮತಕ್ಷೇತ್ರದಲ್ಲಿ ಬಿಜೆಪಿಯು ಅರುಣ ಕಾರಜೋಳ ಪಕ್ಷವಾಗಿದೆ. ಮೂಲ ಬಿಜೆಪಿಗರಲ್ಲದ, ಕಾಂಗ್ರೆಸ್‌ನಿಂದ ಬಂದ ಅವರ ಹಿಂಬಾಲಕರನ್ನು ನೀವು ಪದಾಧಿಕಾರಿಗಳಾಗಿ ನೇಮಕ ಮಾಡಿದ್ದೀರಿ ಎಂದು ಹರಿಹಾಯ್ದರು.

ಪಿ.ಎಚ್.ಪೂಜಾರ ವಿರುದ್ಧ ಚುನಾವಣೆ:

ಅನೇಕ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣರಾಗಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ಪಿ.ಎಚ್.ಪೂಜಾರ ವಿರುದ್ಧ ಚುನಾವಣೆ ಮಾಡಿದರು. ಸ್ಪಷ್ಟವಾಗಿ ಪಕ್ಷೇತರ ಅಭ್ಯರ್ಥಿ ಪರ ಮತ ಚಲಾಯಿಸಲು ಸೂಚನೆ ನೀಡಿದರು. ನಮ್ಮಲ್ಲಿ ಅಧಿಕೃತ ದಾಖಲೆಗಳಿವೆ. ಇದೆಲ್ಲ ಗೊತ್ತಿದ್ದರೂ ಪಿ.ಎಚ್.ಪೂಜಾರ ಯಾಕೆ ಸುಮ್ಮನೆ ಕುಳಿತಿದ್ದಾರೆ ಎನ್ನುವುದು ಗೊತ್ತಿಲ್ಲ. ಕಾರಜೋಳ ಭಯ ಪೂಜಾರಗೆ ಕಾಡುತ್ತಿರಬಹುದು. ಕಾರಜೋಳ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಮತಚಾಯಿಸಿದ್ದಕ್ಕೆ ಕ್ರಮ ಏಕಿಲ್ಲ ಎಂದು ಪ್ರಶ್ನಿಸಿದರು.

ಪ್ರಕಾಶ ಚಿತ್ತರಗಿ, ಸಂಗಣ್ಣ ಕಾತರಕಿ ಕಾಂಗ್ರೆಸ್ನಿಂದ ಬಂದವರು. ನಾವ್ಯಾರು ಕಾಂಗ್ರೆಸ್ನವರು ಅಲ್ಲ. ಬಿಜೆಪಿ ನಮ್ಮ ಮನೆ. ಅದನ್ನು ತಮ್ಮ ಹಿತಾಸಕ್ತಿ ಬಳಸಿಕೊಳ್ಳಲು ಬಿಡುವುದಿಲ್ಲ. 15 ದಿನಗಳಲ್ಲಿ ಜಿಲ್ಲಾಧ್ಯಕ್ಷರು ಉಚ್ಛಾಟನೆ ಕುರಿತು ಸ್ಪಷ್ಟನೆ ನೀಡಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಪಕ್ಷ ಸಾಬೀತುಪಡಿಸಲಿ:

ಮುಧೋಳ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ವೇಳೆ ಬಿಜೆಪಿಯ ನಾಲ್ವರು ಸದಸ್ಯರು ಪಕ್ಷದ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ ಎನ್ನುವ ಆರೋಪದಲ್ಲಿ ಸದಸ್ಯರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಅವರಿಗೆ ಪಕ್ಷ ವ್ಹಿಪ್ ನೀಡದ ಹಿನ್ನೆಲೆಯಲ್ಲಿ ಅವರು ಬೇಕಾದವರಿಗೆ ಮತ ಹಾಕಿದ್ದಾರೆ. ಪಕ್ಷದವರು ವ್ಹಿಪ್ ಏಕೆ ನೀಡಲಿಲ್ಲ? ಅವರೊಂದಿಗೆ ಮಾತುಕತೆ ಏಕೆ ಮಾಡಲಿಲ್ಲ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ರಾಮಣ್ಣ ತಳೆವಾಡ ಅವರ ನಿರ್ದೇಶನದಂತೆ ಸದಸ್ಯರು ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆ ಎನ್ನುವ ಆರೋಪ ಇದೆ. ಇದನ್ನು ಪಕ್ಷ ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.

ಅರುಣ ಕಾರಜೋಳ ಕುಮ್ಮಕ್ಕಿನಿಂದ ಪಕ್ಷದ ತಾಲೂಕು ಹಾಗೂ ಜಿಲ್ಲಾ ಅಧ್ಯಕ್ಷರು ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಆಪಾದಿಸಿದರು. ಕಚೇರಿಯಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಇದರ ಮಧ್ಯೆ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲರು ತಮ್ಮ ಕಚೇರಿಯಲ್ಲಿ ರಾಮಣ್ಣ ತಳೇವಾಡ ಅವರೊಂದಿಗೆ ಮಾತುಕತೆ ನಡೆಸಿದರು. ಉಚ್ಚಾಟನೆಗೆ ಉತ್ತರ ನೀಡುವಂತೆ ಅಧ್ಯಕ್ಷರನ್ನು ಕೇಳಿಕೊಳ್ಳಲಾಗಿದೆ ಎಂದು ರಾಮಣ್ಣ ತಳೇವಾಡ ತಿಳಿಸಿದ್ದರು. ನಂತರ ಕಾರ್ಯಕರ್ತರು ಪ್ರತಿಭಟನೆ ಕೈಬಿಟ್ಟರು.

---

ಬಾಕ್ಸ್,,,,

ಕಾರಜೋಳ ಪುತ್ರನ ವ್ಯಾಮೋಹಕ್ಕೆ ಬಿದ್ದಿದ್ದಾರೆ:

ಗೋವಿಂದ ಕಾರಜೋಳ ಪುತ್ರನ ವ್ಯಾಮೋಹಕ್ಕೆ ಬಿದ್ದಿದ್ದಾರೆ. ಅಲ್ಲದೆ ಈ ಹಿಂದೆ ಬಿಜೆಪಿ ಜಿಪಂನಲ್ಲಿ ಬಹುಮತ ಇದ್ದಾಗಲೂ ಅಧಿಕಾರಕ್ಕೆ ಏರಲು ಸಾಧ್ಯವಾಗಲಿಲ್ಲ. ಬಾಯಕ್ಕ ಮೇಟಿ, ವೀಣಾ ಕಾಶಪ್ಪನವರ ಅಧ್ಯಕ್ಷರಾದರು. ನನ್ನ ಪತ್ನಿ ಅಲ್ಪ ಮತಗಳಿಂದ ಸೋತರು. ಆ ಸಂದರ್ಭದಲ್ಲಿಯೂ ಆಗಮಿಸಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಇಲ್ಲಿನ ಚಿತ್ರಣ ಗೊತ್ತಿತ್ತು. ಆದರೇ ಯಾರೂ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

---

ಜನಪ್ರಿಯ ಕಾರ್ಯಕ್ರಮ ಬಿಡುಗಡೆ

ಅರುಣ ಕಾರಜೋಳ ಮತ್ತು ಬಹುತೇಕ ಕಾಂಗ್ರೆಸ್ ಪಕ್ಷದಿಂದ ಬಂದ ಅವರ ಹಿಂಬಾಲಕರ ಜನಪ್ರಿಯ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವುದಾಗಿ ರಾಮಣ್ಣ ತಳೇವಾಡ ತಿಳಿಸಿದರು.

ಇಂತಹ ವ್ಯಕ್ತಿಗಳು ನಮ್ಮ ಮುಧೋಳ ಮತಕ್ಷೇತ್ರಕ್ಕೆ ಅಭ್ಯರ್ಥಿಗಳಾದರೆ ನಾವು ಸಹಿಸುವುದಿಲ್ಲ. ಒಂದು ವೇಳೆ ನಾನು ಪಕ್ಷದಲ್ಲಿ ಇರಲಿ, ಇರದೆ ಇರಲಿ ಅವರ ಘನ ಕಾರ್ಯಗಳನ್ನು ಬಿಡುಗಡೆ ಮಾಡುವೆ. ಅಧಿಕಾರ ಇಲ್ಲದೇನೆ ಇಂತಹ ಮಹಾನ್ ಕಾರ್ಯಗಳನ್ನು ಮಾಡಿದ್ದಾರೆ ಎಂದರು.