ಸಾರಾಂಶ
ಹಾವೇರಿ: ಇಂದು ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ, ಅಬಲೆಯಲ್ಲ ಸಬಲೆ ಎಂದು ಸಾಬೀತು ಮಾಡಿದ್ದಾಳೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಮತಾ ಹೊಸಗೌಡ್ರ ಹೇಳಿದರು.
ನಗರದ ಜಿಲ್ಲಾ ಗಾಂಧಿ ಭವನದಲ್ಲಿ ಶುಕ್ರವಾರ ಹಾವೇರಿ ತಾಲೂಕು ಆಡಳಿತದಿಂದ ಆಯೋಜಿಸಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಿ ನಾರಿಯರನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ವಾಸಿಸುತ್ತಾರೆ ಎಂದು ಹೇಳಲಾಗುತ್ತದೆ. ಭಾರತ ದೇಶದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನ ನೀಡಲಾಗಿದೆ. ತೊಟ್ಟಿಲನ್ನು ತೂಗುವ ಕೈ ದೇಶ ಆಳಬಲ್ಲದು ಎಂದು ತೋರಿಸಿದ್ದಾರೆ. ಹಾಗಾಗಿ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಹೇಳಲಾಗುತ್ತದೆ ಎಂದರು.ಮಹಿಳೆ ತಾಳ್ಮೆ, ಸಹನೆ, ಜಾಣ್ಮೆ, ವಿಭಿನ್ನ ಆಲೋಚನೆ ಶಕ್ತಿ ಹೊಂದಿದ್ದಾಳೆ. ಅವಕಾಶ ವಂಚಿತ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರ ಶಿಕ್ಷಣ, ಉದ್ಯೋಗ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿದೆ. ಸರ್ಕಾರದ ನೀಡಿದ ಅವಕಾಶದ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮುಂದೆ ಬರಬೇಕು ಎಂದು ಕರೆ ನೀಡಿದರು.
ಹಾವೇರಿ ಸೈಬರ್ ಕ್ರೈಂ ವಿಭಾಗದ ಡಿವೈಎಸ್‌ಪಿ ಪ್ರಜ್ಞಾ ಆನಂದ ಮಾತನಾಡಿ, ಮಹಿಳೆ ಗಂಡ, ಮನೆ ಹಾಗೂ ಮಕ್ಕಳ ಬೇಕು-ಬೇಡಗಳ ಬಗ್ಗೆ ಕಾಳಜಿ ವಹಿಸುತ್ತಾಳೆ. ಆದರೆ ತನ್ನ ಬಗ್ಗೆ ತಾನು ಗಮನ ನೀಡುವುದಿಲ್ಲ. ಮೊದಲು ತನ್ನನ್ನು ತಾನು ಪ್ರೀತಿಸಬೇಕು. ಎಲ್ಲರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮಹಿಳೆ ಮೊದಲು ತಾನು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಹಾಗೂ ಸದೃಢವಾಗಿರಬೇಕು ಎಂಬುದನ್ನು ಅರಿತುಕೊಳ್ಳಬೇಕು ಎಂದರು.ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ: ಇಂದು ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಮಹಿಳೆಯರು ತಮ್ಮ ವೈಯಕ್ತಿಕ ಹಾಗೂ ಇತರೆ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಬಾರದು. ಎಲ್ಲ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಬಾರದು. ಗೌಪ್ಯತೆ ಕಾಪಾಡಿಕೊಳ್ಳಬೇಕು. ಜತೆಗೆ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯಿಂದ ದೂರ ಇರಲು ತಿಳಿವಳಿಕೆ ನೀಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್. ಮಾತನಾಡಿ, ಹೆಣ್ಣು ಸಂಸಾರದ ಕಣ್ಣು, ಮಹಿಳೆ ತನ್ನ ಸಂಸಾರದ ಏಳ್ಗೆಗೆ ತನ್ನ ಜೀವನ ಮೀಸಲಿಡುತ್ತಾಳೆ. ಜಗತ್ತಿಗೆ ಉತ್ತಮ ವ್ಯಕ್ತಿಗಳನ್ನು ನೀಡುವ ಶಕ್ತಿ ಮಹಿಳೆಗಿದೆ ಎಂದರು.ಕೇಕ್ ಕತ್ತರಿಸಿ ಸಂಭ್ರಮಾಚರಣೆ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಅಧಿಕಾರಿಗಳು ಕೇಕ್ ಕತ್ತರಿಸಿ ಒಬ್ಬರಿಗೊಬ್ಬರು ತಿನ್ನಸುವ ಮೂಲಕ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಮಹಿಳಾ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮಕ್ಕೂ ಮೊದಲು ತಹಸೀಲ್ದಾರ್ ಕಚೇರಿ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ್ ಎಲ್. ಅವರು ಸಸಿ ನೆಟ್ಟರು.ಉಪ ವಿಭಾಗಾಧಿಕಾರಿ ಚೆನ್ನಪ್ಪ, ಅಬಕಾರಿ ಉಪ ಆಯುಕ್ತರಾದ ಶೈಲಜಾ, ಪಿಎಸ್‌ಐ ಭಾರತಿ, ಹಾವೇರಿ ತಹಸೀಲ್ದಾರ್ ಶರಣಮ್ಮ ಕಾರಿ, ರಟ್ಟಿಹಳ್ಳಿ ತಹಸೀಲ್ದಾರ ಶ್ವೇತಾ, ವಲಯ ಅರಣ್ಯಾಧಿಕಾರಿ ಸಿದ್ದಮ್ಮ ಕಾಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಶೈಲಜಾ ಕುರಹಟ್ಟಿ, ಪ್ರೇಮಕ್ಕ ಉಪಸ್ಥಿತರಿದ್ದರು.
ಗೀತಾ ಪೂಜಾರ ಸ್ವಾಗತಿಸಿದರು. ಅನ್ನಪೂರ್ಣಾ ನವಲೆ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು.