ಜಿಲ್ಲೆಯ ಬರ ಪರಿಸ್ಥಿತಿ, ಕುಡಿಯುವ ನೀರಿನ ಅಭಾವ, ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ ಹಿನ್ನೆಲೆಯಲ್ಲಿ ಭದ್ರಾ ಡ್ಯಾಂನಿಂದ ನಾಲೆಗಳಿಗೆ ಬಿಟ್ಟ ನೀರು ಸದ್ಬಳಕೆ ಆಗಬೇಕಿದ್ದು, ಬೆಸ್ಕಾಂ ಅಧಿಕಾರಿಗಳು ಲಭ್ಯ ಸಂಪನ್ಮೂಲ ಬಳಸಿ, ರೈತರ ಬೆಳೆಗಳಿಗೆ ಕನಿಷ್ಠ 6 ತಾಸು ಗುಣಮಟ್ಟದ ವಿದ್ಯುತ್ ಪೂರೈಸಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ ಸೂಚಿಸಿದ್ದಾರೆ.
- ಕುಡಿಯುವ ನೀರು ಪೂರೈಕೆಗೆ ತೊಂದರೆ ಆಗದಿರಲಿ: ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ - - -
ಕನ್ನಡಪ್ರಭ ವಾರ್ತೆ ದಾವಣಗೆರೆಜಿಲ್ಲೆಯ ಬರ ಪರಿಸ್ಥಿತಿ, ಕುಡಿಯುವ ನೀರಿನ ಅಭಾವ, ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ ಹಿನ್ನೆಲೆಯಲ್ಲಿ ಭದ್ರಾ ಡ್ಯಾಂನಿಂದ ನಾಲೆಗಳಿಗೆ ಬಿಟ್ಟ ನೀರು ಸದ್ಬಳಕೆ ಆಗಬೇಕಿದ್ದು, ಬೆಸ್ಕಾಂ ಅಧಿಕಾರಿಗಳು ಲಭ್ಯ ಸಂಪನ್ಮೂಲ ಬಳಸಿ, ರೈತರ ಬೆಳೆಗಳಿಗೆ ಕನಿಷ್ಠ 6 ತಾಸು ಗುಣಮಟ್ಟದ ವಿದ್ಯುತ್ ಪೂರೈಸಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ ಸೂಚಿಸಿದರು.
ನಗರದ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೈತರು ಬೆಳೆಗಳಿಗೆ ನೀರೊದಗಿಸಲು ಅನುಕೂಲ ಆಗುವಂತೆ ನಿರಂತರ 6 ಗಂಟೆಗಳ ಕಾಲ ಸಮರ್ಪಕ ವಿದ್ಯುತ್ ಪೂರೈಸಲು ಹಾಗೂ ಕುಡಿಯುವ ನೀರು ಪೂರೈಸಲು ಬೆಸ್ಕಾಂ ಅಧಿಕಾರಿಗಳು ಗಮನಹರಿಸಲಿ ಎಂದರು.ದಾವಣಗೆರೆ ದಕ್ಷಿಣ, ಮಾಯಕೊಂಡ, ಚನ್ನಗಿರಿ ಸೇರಿದಂತೆ ಜಿಲ್ಲೆಯ ಅನೇಕ ಕಡೆ ಅಂತರ್ಜಲಮಟ್ಟ ಕುಸಿದಿದೆ. ಕೊಳವೆಬಾವಿ ಬತ್ತಿ ಹೋಗುತ್ತಿವೆ. ನಾಲೆಯಲ್ಲಿ ನೀರು ಹರಿಯುತ್ತಿರುವುದಿಂದ ಸುತ್ತಲಿನ ಕೊಳವೆ ಬಾವಿ ಮರು ಪೂರ್ಣಗೊಳ್ಳುತ್ತಿವೆ. ಗ್ರಾಮೀಣ ಭಾಗದಲ್ಲಿ ನೀರಿನ ಅಭಾವ ತಪ್ಪಿಸಲು ಗಮನ ಹರಿಸಬೇಕು. ಕುಡಿಯುವ ನೀರಿನ ಕೊಳವೆ ಬಾವಿ ಹಾಗೂ ಸಾರ್ವಜನಿಕ ನೀರು ಪೂರೈಕೆಗೆ ಅಡೆತಡೆ ಇಲ್ಲದಂತೆ ವಿದ್ಯುತ್ ಪೂರೈಸಿ ಎಂದು ಅವರು ಹೇಳಿದರು.
ಭದ್ರಾ ನಾಲೆಗಳಲ್ಲಿ ಅಕ್ರಮ ಪಂಪ್‌ಸೆಟ್ ಹಾವಳಿ ಕಂಡು ಬರುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕು. ನಾಲೆಗಳಿಂದ ಅಧಿಕ ಪ್ರಮಾಣದಲ್ಲಿ 20 ಎಚ್‌ಪಿ ಮೋಟಾರು ಬಳಸಿ, ಅಕ್ರಮ ಪಂಪ್‌ಸೆಟ್‌ಗಳ ಮೂಲಕ ನೀರನ್ನು ಹೊಲ, ತೋಟಗಳಿಗೆ ಹರಿಸುತ್ತಿದ್ದಾರೆ. ಇದರಿಂದ ಭದ್ರಾ ಅಚ್ಚುಕಟ್ಟು ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಹಾಗಾಗಿ ಭದ್ರಾ ನಾಲೆಯ ಅಧಿಕೃತ ಅಚ್ಚುಕಟ್ಟು ರೈತರಿಗೆ ನೀರು ತಲುಪುವಂತೆ ನೋಡಿಕೊಳ್ಳಿ ಎಂದು ಅವರು ಸೂಚನೆ ನೀಡಿದರು. ಬೆಸ್ಕಾಂ ಇಇ ತಿಪ್ಪೇಸ್ವಾಮಿ ಮಾತನಾಡಿ, ಗಾಳಿ, ಸೌರ ವಿದ್ಯುತ್ ಉತ್ಪಾದನೆಯಲ್ಲಿ ಉಂಟಾಗುತ್ತಿರುವ ಏರಿಳಿತ, ಸ್ಟೇಷನ್ ಮತ್ತು ಲೈನ್‌ಗಳ ಮೇಲಿನ ಶೇಖರಣಾ ಒತ್ತಡದಿಂದಾಗಿ ವಿದ್ಯುತ್ ವಿತರಣೆಯಲ್ಲಿ ಕೆಲ ತಾಂತ್ರಿಕ ತೊಡಕಾಗುತ್ತಿವೆ. ಸದ್ಯ ಲಭ್ಯ ಮಾರ್ಗಗಳಲ್ಲಿ ಪ್ರತಿದಿನ 6 ಗಂಟೆ ವಿದ್ಯುತ್ ನೀಡುತ್ತಿದ್ದು, ಸಮಸ್ಯೆಯಿರುವ ಕೆಲ ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ 5ರಿಂದ ಐದೂವರೆ ತಾಸು ವಿದ್ಯುತ್ ಪೂರೈಸಲಾಗುತ್ತಿದೆ. ರಾಜ್ಯಾದ್ಯಂತ ಏಪ್ರಿಲ್‌ಗೆ ಹೋಲಿಸಿದರೆ ವಿದ್ಯುತ್ ಬೇಡಿಕೆ 12000-15000 ಮೆಗಾ ವ್ಯಾಟ್‌ನಿಂದ 20 ಸಾವಿರ ಮೆಗಾ ವ್ಯಾಟ್‌ಗೆ ಏರಿಕೆಯಾಗಿದೆ ಎಂದು ಸಭೆಯ ಗಮನಕ್ಕೆ ತಂದರು.ಜಿಪಂ ಸಿಇಒ ಸಾಹಿತ್ಯ ಎಂ.ಆಲದಕಟ್ಟಿ ಮಾತನಾಡಿ, ಚನ್ನಗಿರಿಯಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಸುಸಜ್ಜಿತವಾಗಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಅಗತ್ಯ ಜಮೀನನ್ನು ನೇರ ಖರೀದಿ ಕರಾರು ವಿಧಾನದ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ ವಶಪಡಿಸಿಕೊಳ್ಳಲು ಕ್ರಮ ವಹಿಸಬೇಕು. ಬಸ್ ನಿಲ್ದಾಣವಿಲ್ಲದೇ ಖಾಸಗಿ ಬಸ್ ನಿಲ್ದಾಣದ ಬಳಿಯೇ ಸರ್ಕಾರಿ ಬಸ್ಸು ಸಂಚರಿಸುತ್ತಿರುವುದರಿಂದ ಜನರಿಗೆ, ಚಾಲಕ, ನಿರ್ವಾಹಕರಿಗೆ ಗೊಂದಲವಾಗುತ್ತಿದೆ. ಸಮಸ್ಯೆ ಪರಿಹರಿಸಲು ಸಿಬ್ಬಂದಿ, ಪೋಲೀಸ್ ಸಿಬ್ಬಂದಿ ನೇಮಿಸಿ ಸಂಚಾರ ಸುಗಮ ಸೇರಿದಂತೆ ಶಾಶ್ವತ ಬಸ್ ನಿಲ್ದಾಣ ನಿರ್ಮಾಣದ ಜಮೀನು ಸ್ವಾಧೀನಕ್ಕೆ ಅಗತ್ಯ ಕ್ರಮವಹಿಸಿ ಎಂದರು.
ಭೂಸ್ವಾಧೀನ ಕಾಯ್ದೆ 2013ರ ಸುದೀರ್ಘ ಪ್ರಕ್ರಿಯೆಗೆ ಕಾಯುವ ಬದಲು, ನೇರ ಖರೀದಿ ಕರಾರಿನ ಮೂಲಕ 15 ದಿನಗಳಿಂದ 1 ತಿಂಗಳಲ್ಲಿ ಜಮೀನು ಸ್ವಾಧೀನಪಡಿಸಿಕೊಳ್ಳಲು ಅವಕಾಶವಿದೆ. ಈ ವಿಧಾನದಲ್ಲಿ ಭೂಮಾಲೀಕರಿಗೆ ಕಾಯ್ದೆಯನ್ವಯ ದೊರೆಯುವಷ್ಟೇ ಸೂಕ್ತ ಪರಿಹಾರದ ಮೊತ್ತ ಏಕಗಂಟಿನಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಜೊತೆಗೆ ಮುಂದಿನ ಜಮೀನು ಖರೀದಿಗೆ ಮುದ್ರಾಂಕ ಶುಲ್ಕ ವಿನಾಯಿತಿ ಸೌಲಭ್ಯವೂ ಸಿಗಲಿದ್ದು, ಕೋರ್ಟ್- ಕಚೇರಿ ಅಲೆದಾಟ ತಪ್ಪಲಿದೆ ಎಂದು ತಿಳಿಸಿದರು.ಕೆಎಸ್‌ಆರ್‌ಟಿಸಿ ಮತ್ತು ಇಲಾಖೆ ಅಧಿಕಾರಿಗಳು ಜಮೀನಿನ ಮಾಲೀಕರನ್ನು ವೈಯಕ್ತಿಕವಾಗಿ ಭೇಟಿಯಾಗಿ, ನೇರ ಖರೀದಿ ಅನುಕೂಲಗಳ ಬಗ್ಗೆ ಮನವರಿಕೆ ಮಾಡಿ ಒಪ್ಪಿಗೆ ಪಡೆಯಿರಿ. ಈ ಪ್ರಕ್ರಿಯೆ ಬಗ್ಗೆ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳೊಂದಿಗೆ ಚರ್ಚಿಸಿ, ಕಡತವನ್ನು ಶೀಘ್ರ ವಿಲೇವಾರಿ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ತಿಳಿಸಿದರು.
ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳ ನಿರ್ದೇಶನದಂತೆ ಭಾರತ ಜೋಡೋ ಯುವ ಸಂಘ ಯೋಜನೆ ಪರಿಣಾಮಕಾರಿಯಾಗಿ ಜಾರಿಗೊಳಿಸಲು ರಾಜ್ಯದಿಂದ ಬಂದ ವಿಶೇಷ ಕೋಡ್ ಮತ್ತು ಸಂಖ್ಯೆ ಹೊಂದಿರುವ ಅರ್ಜಿ ನಮೂನೆಗಳನ್ನು ಮುದ್ರಿಸಿ, ಪ್ರತಿ ಗ್ರಾಮಕ್ಕೂ ವಿತರಿಸಲಾಗುತ್ತಿದೆ. ಈ ನಮೂನೆಗಳು ಯೂನಿಕ್ ಆಗಿದ್ದು, ಜಾಗರೂಕತೆಯಿಂದ ಹಂಚಿಕೆ ಮಾಡಿ, ಭರ್ತಿ ಮಾಡಿದ ಅರ್ಜಿಗಳನ್ನು ಜವಾಬ್ದಾರಿಯಿಂದ ವಾಪಸ್ ಸಂಗ್ರಹಿಸಲು ಗ್ಯಾರಂಟಿ ಸಮಿತಿ ಸದಸ್ಯರು ಶ್ರಮಿಸಬೇಕು. ಯೋಜನೆಗೆ ಅಕ್ಟೋಬರ್ 2ರೊಳಗೆ ಚಾಲನೆ ನೀಡಲು ಮುಖ್ಯಮಂತ್ರಿ ತೀರ್ಮಾನಿಸಿದ್ದು, ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದರು.ಸಮಿತಿ ಉಪಾಧ್ಯಕ್ಷರಾದ ಮಂಜುನಾಥ, ನಂಜಾನಾಯ್ಕ, ರಾಜೇಶ್ವರಿ, ಅನೀಶ್ ಪಾಷ, ಸದಸ್ಯರಾದ ಡೋಲಿ ಚಂದ್ರು, ಶಶಿಕಲಾ, ನಾಗರಾಜ್, ಎಸ್.ಎಸ್.ಗಿರೀಶ, ಲಿಯಾಕತ್ ಅಲಿ, ಉಮೇಶ್, ಷಂಷೀರ್ ಅಹ್ಮದ್, ಶಿವರಾಮ ನಾಯಕ್, ಜಿಪಂ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ಸಿಪಿಒ ಮಲ್ಲಾ ನಾಯಕ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
- - -(ಕೋಟ್‌ಗಳು)
ಬಸ್ ನಿಲ್ದಾಣದಲ್ಲಿ ಭದ್ರತೆ, ಸಿಸಿಟಿವಿ ಕೊರತೆ ಇದೆ. ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾಗಳಿದ್ದರೂ ನಿರ್ವಹಣೆಯಲ್ಲದೇ ನಿಷ್ಕ್ರಿಯವಾಗಿವೆ. ರಾತ್ರಿ ವೇಳೆ ಮಹಿಳೆಯರ ಸುರಕ್ಷತೆಗಾಗಿ, ಪುಂಡ-ಪೋಕರಿಗಳ ಹಾವಳಿ ನಿಯಂತ್ರಣಕ್ಕೆ ಸಿಸಿಟಿವಿ ನಿರ್ವಹಣೆ, ಪೊಲೀಸ್ ಗಸ್ತು ಹೆಚ್ಚಿಸಬೇಕು. ಬಸ್ ನಿಲ್ದಾಣದ ಶೌಚಾಲಯದಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತಿದ್ದಾರೆ. ಶೌಚಾಲಯಗಳಲ್ಲಿ ಮಹಿಳಾ ಸಿಬ್ಬಂದಿ ನೇಮಿಸಿ, ಹೆಚ್ಚಿನ ದರ ವಸೂಲಿ ತಡೆಯಬೇಕು.- ಡೋಲಿ ಚಂದ್ರು, ಸದಸ್ಯ, ಜಿಲ್ಲಾ ಗ್ಯಾರಂಟಿ ಸಮಿತಿ.
- - -ಜಿಲ್ಲೆಯಲ್ಲಿ ಜುಲೈ 2023ರಿಂದ ಡಿಸೆಂಬರ್ 2024ರ ಅಂತ್ಯದವರೆಗೆ ಒಟ್ಟು 346.33 ಕೋಟಿ ಹಣ ಡಿಬಿಟಿ ಮುಖಾಂತರ 1242812 ಫಲಾನುಭವಿ ಖಾತೆಗೆ ವರ್ಗಾಯಿಸಲಾಗಿದೆ. ಫೆಬ್ರವರಿ 2025ರಿಂದ ಸೆಪ್ಟೆಂಬರ್ 2026ರ ಅಂತ್ಯದ ವರೆಗೆ ಪ್ರತಿ ಫಲಾನುಭವಿಗೆ ಹೆಚ್ಚುವರಿ 5 ಕೆಜಿ ಅಕ್ಕಿ ವಿತರಿಸಿದ್ದು, ಸೆಪ್ಟೆಂಬರ್ 2026ರ ಅಂತ್ಯಕ್ಕೆ ಒಟ್ಟು 1139749 ಫಲಾನುಭವಿಗೆ 1193500 ಕ್ವಿಂಟಲ್ ಅಕ್ಕಿ ಉಚಿತವಾಗಿ ವಿತರಿಸಿದೆ. ಜಿಲ್ಲೆಯಲ್ಲಿ ಶೇ.52ರಷ್ಟು ಇ-ಕೆವೈಸಿ ಪೂರ್ಣಗೊಂಡಿದ್ದು, ರಾಜ್ಯದಲ್ಲಿ 7ನೇ ಸ್ಥಾನದಲ್ಲಿದ್ದೇವೆ. ನಿಗದಿತ ಅವಧಿಯಲ್ಲಿ ಇ-ಕೆವೈಸಿ ಕಾರ್ಯ ಪೂರ್ಣಗೊಳಿಸಲಾಗುವುದು.
- ಮಧುಸೂದನ್, ಜಂಟಿ ನಿರ್ದೇಶಕ, ಆಹಾರ ಇಲಾಖೆ.- - -
ಜಿಲ್ಲೆಯಲ್ಲಿ ಆಗಸ್ಟ್ 2023ರಿಂದ ಜೂನ್ 2026 ರವರೆಗೆ 352521 ಫಲಾನುಭವಿಗೆ 2264.33 ಕೋಟಿ ರು. ಪಾವತಿಸಿದೆ. ಯಾವುದೇ ಒಬ್ಬ ವ್ಯಕ್ತಿಗೆ 2 ಬಾರಿ ಹಣ ಸಂದಾಯವಾಗಿಲ್ಲ.-ರಾಜಾನಾಯ್ಕ, ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ.
- - -ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಲ್ಲಿ ಆಗಸ್ಟ್ 2026ರಲ್ಲಿ ಒಟ್ಟು 512933 ಫಲಾನುಭವಿಗೆ ₹4336.61 ಕೋಟಿ ಮೊತ್ತವನ್ನು ಹೊಂದಾಣಿಕೆ ಮಾಡಲಾಗಿದೆ. ಮನೆ ಮನೆ ಭೇಟಿ ಕಾರ್ಯ ಶೇ.92ರಷ್ಟು ಪೂರ್ಣಗೊಂಡಿದ್ದು, ಇನ್ನೂ 26000 ಮನೆ ಬಾಕಿ ಇವೆ.
- ತಿಪ್ಪೇಸ್ವಾಮಿ, ಇಇ, ಬೆಸ್ಕಾಂ,- - -
ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 16.44 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಇದರಿಂದ 490.27 ಕೋಟಿ ರು. ಪ್ರಯಾಣ ದರ ಆಗಿದೆ.- ಗಿರೀಶ, ವಿಭಾಗೀಯ ನಿಯಂತ್ರಕ, ಕೆಎಸ್ಸಾರ್ಟಿಸಿ,
- - -ಯುವನಿಧಿ ಯೋಜನೆಯಡಿ ಜಿಲ್ಲೆಯ 14532 ಪದವಿ ಫಲಾನುಭವಿಗೆ ತಲಾ ₹3 ಸಾವಿರದಂತೆ ಹಾಗೂ 347 ಡಿಪ್ಲೋಮಾ ಫಲಾನುಭವಿಗೆ ತಲಾ ₹1500 ರಂತೆ ₹42.70 ಲಕ್ಷ ಹೀಗೆ ಒಟ್ಟು 14879 ಫಲಾನುಭವಿಗಳಿಗೆ ₹48.27 ಕೋಟಿ ಪಾವತಿಸಲಾಗಿದೆ.
- ರವೀಂದ್ರ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ.- - -
-22ಕೆಡಿವಿಜಿ5, 6: ದಾವಣಗೆರೆ ಜಿಪಂ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ನಡೆಯಿತು.-22ಕೆಡಿವಿಜಿ7: ಸಾಹಿತ್ಯ ಎಂ.ಆಲದಕಟ್ಟಿ, ಸಿಇಒ, ಜಿಪಂ.