ಸರ್ಕಾರದ ಆದೇಶದಂತೆ 7 ತಾಸು ನಿರಂತರ ವಿದ್ಯುತ್ ಪೂರೈಸಿ : ರಾಜ್ಯ ರೈತ ಸಂಘದ ತಾಲೂಕು ಪದಾಧಿಕಾರಿಗಳು

| N/A | Published : Mar 07 2025, 12:48 AM IST / Updated: Mar 07 2025, 11:46 AM IST

ಸರ್ಕಾರದ ಆದೇಶದಂತೆ 7 ತಾಸು ನಿರಂತರ ವಿದ್ಯುತ್ ಪೂರೈಸಿ : ರಾಜ್ಯ ರೈತ ಸಂಘದ ತಾಲೂಕು ಪದಾಧಿಕಾರಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ಪಂಪ್‌ಸೆಟ್‌ಗಳಿಗೆ ಹಗಲು 7 ತಾಸು ನಿರಂತರ ವಿದ್ಯುತ್ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ತಾಲೂಕು ಪದಾಧಿಕಾರಿಗಳು ಜೆಸ್ಕಾಂ ವಿಭಾಗೀಯ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

 ಹಗರಿಬೊಮ್ಮನಹಳ್ಳಿ : ರೈತರ ಪಂಪ್‌ಸೆಟ್‌ಗಳಿಗೆ ಹಗಲು ೭ ತಾಸು ನಿರಂತರ ವಿದ್ಯುತ್ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ತಾಲೂಕು ಪದಾಧಿಕಾರಿಗಳು ಜೆಸ್ಕಾಂ ವಿಭಾಗೀಯ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. 

ರೈತ ಸಂಘದ ವಿಭಾಗೀಯ ಅಧ್ಯಕ್ಷ ಗೋಣಿಬಸಪ್ಪ ಮಾತನಾಡಿ, ತಂಬ್ರಹಳ್ಳಿ ಮತ್ತು ಉಪನಾಯಕನಹಳ್ಳಿ ವಿದ್ಯುತ್ ಉಪಕೇಂದ್ರದ ಮೇಲಿನ ಒತ್ತಡ ನಿರ್ವಹಿಸಲು ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು. ಈ ಎರಡು ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಕೃಷಿಪಂಪ್‌ಸೆಟ್‌ಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ವೋಲ್ಟೇಜ್ ಸಮಸ್ಯೆ ರೈತರನ್ನು ನಿರಂತರವಾಗಿ ಕಾಡುತ್ತಿದೆ. 

ಬೇಸಿಗೆ ವೇಳೆ ವಿದ್ಯುತ್ ಕಿರಿಕಿರಿ ತಪ್ಪಿಸಬೇಕು. ಸರ್ಕಾರದ ಆದೇಶದಂತೆ ಕನಿಷ್ಠ ೭ ತಾಸು ವಿದ್ಯುತ್ ಪೂರೈಸಬೇಕು. ತೆಲುಗೋಳಿ ಮತ್ತು ಜಿ.ಕೋಡಿಹಳ್ಳಿ ಗ್ರಾಮಗಳಲ್ಲಿನ 66/11  ಕೆ.ವಿ.ವಿದ್ಯುತ್ ಉಪಕೇಂದ್ರ ಕಾಮಗಾರಿ ಆರಂಭಿಸಬೇಕು. ಹೆಚ್ಚುವರಿ ಟಿಸಿ ಅಳವಡಿಸಬೇಕು. ಅಕ್ರಮ-ಸಕ್ರಮ ಯೋಜನೆಯಡಿ ನನೆಗುದಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಹೊರೆಯಾಗಿರುವ ಸ್ಮಾರ್ಟ್ ಮೀಟರ್ ದರ ಇಳಿಸಬೇಕು.

 ತಿಂಗಳೊಳಗಾಗಿ ಬೇಡಿಕೆ ಈಡೇರಿಸದಿದ್ದರೆ ವಿಭಾಗೀಯ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು. ಜೆಸ್ಕಾಂ ಇಇ ಕೆ.ಸತೀಶ್‌ಗೆ ಮನವಿ ಸಲ್ಲಿಸಿದರು. ಜೆಸ್ಕಾಂ ಎಇಇ ಭಾಸ್ಕರ್, ಸಂಘದ ತಾಲೂಕು ಅಧ್ಯಕ್ಷ ಹರಟೆ ಕಾಳಪ್ಪ, ಕಾರ್ಯದರ್ಶಿ ತಂಬ್ರಹಳ್ಳಿ ರವಿಕುಮಾರ, ಗೌರವಾಧ್ಯಕ್ಷ ಹಲಗೇರಿ ಮಹೇಶ, ಮುಖಂಡರಾದ ಬಾಣದ ಶಿವಪ್ಪ, ನಿವೃತ್ತ ಮುಖ್ಯಗುರು ನಾಗೇಂದ್ರಪ್ಪ, ಎಸ್.ಎಸ್. ಬಸವರಾಜ, ಲಡಕನಬಾವಿ ದೊಡ್ಡ ಹುಲುಗಪ್ಪ, ಗುಂಡಪ್ಪ, ಕೊಟ್ರಪ್ಪ ಇತರರಿದ್ದರು.