Provide 8 hours of electricity per day to farmers.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಳೆ ಕೊರತೆಯಿಂದ ಬೆಳೆಗಳು ಒಣಗುವ ಸ್ಥಿತಿಯಲ್ಲಿರುವಾಗ ಕೃಷಿ ಪಂಪ್ಸೆಟ್ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು. ರೈತರ ಹಿತದೃಷ್ಟಿಯಿಂದ ದಿನಕ್ಕೆ ಕನಿಷ್ಠ ಏಳು ಅಥವಾ ಎಂಟು ಗಂಟೆ, ಹಗಲಿನಲ್ಲೇ ವಿದ್ಯುತ್ ನೀಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಬಿಜೆಪಿ ರಾಜ್ಯ ಘಟಕ ಉಪಾಧ್ಯಕ್ಷ ಹರತಾಳು ಹಾಲಪ್ಪ ಎಚ್ಚರಿಸಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸನಗರ, ಸಾಗರ, ಸೊರಬ, ಶಿವಮೊಗ್ಗ ಗ್ರಾಮಾಂತರ ಹಾಗೂ ರಿಪ್ಪನ್ಪೇಟೆ ಸೇರಿದಂತೆ ಜಿಲ್ಲೆಯ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಭತ್ತ, ಜೋಳದ ಬೆಳೆ ಒಣಗುತ್ತಿದ್ದು, ಅಡಕೆ ತೋಟಗಳಿಗೂ ನೀರಿನ ಕೊರತೆಯಿಂದ ಹಾನಿಯಾಗುವ ಆತಂಕ ಎದುರಾಗಿದೆ ಎಂದರು.
ಈ ಹಿಂದೆ ರೈತರಿಗೆ ಏಳು ಗಂಟೆ ವಿದ್ಯುತ್ ಪೂರೈಸಲಾಗುತ್ತಿತ್ತು. ಈಗ ಆರು ಗಂಟೆ ನೀಡುವಂತೆ ಮೇಲಧಿಕಾರಿಗಳಿಂದ ಸೂಚನೆ ಬಂದಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.ಆದರೆ, ನಿಗದಿತ ಅವಧಿಯಲ್ಲಿಯೂ ನಿರಂತರ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಅರ್ಧ ಗಂಟೆ ಅಥವಾ ಮುಕ್ಕಾಲು ಗಂಟೆ ವಿದ್ಯುತ್ ಕಡಿತವಾಗುವುದರಿಂದ ರೈತರಿಗೆ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ದೊರೆಯುತ್ತಿಲ್ಲ. ಕಡಿತಗೊಂಡ ಅವಧಿಯನ್ನು ಹೆಚ್ಚುವರಿಯಾಗಿ ನೀಡುವಂತೆ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.
ರಾಜ್ಯದಲ್ಲಿ ಹಗಲಿನ ವೇಳೆ ಸಾಕಷ್ಟು ವಿದ್ಯುತ್ ಲಭ್ಯವಿದೆ ಎಂದು ಸರ್ಕಾರವೇ ಹೇಳುತ್ತಿದೆ. ಹಗಲಿನಲ್ಲಿ ವಿದ್ಯುತ್ ಬಳಸಿ ನೀರು ಸಂಗ್ರಹಿಸಿ, ರಾತ್ರಿ ಗರಿಷ್ಠ ಬೇಡಿಕೆಯ ಅವಧಿಯಲ್ಲಿ ಬಳಸುವ ಪಂಪ್ಸ್ಟೋರೇಜ್ ಯೋಜನೆಯ ಬಗ್ಗೆಯೂ ಚರ್ಚಿಸಲಾಗಿದೆ. ಹೀಗಿರುವಾಗ ಈಗ ಪಂಪ್ಸ್ಟೋರೇಜ್ ಕಾರ್ಯಗತ ಆಗಿಲ್ಲ. ಹೀಗಿರಿವಾಗ ರೈತರಿಗೆ ಏಳು ಅಥವಾ ಎಂಟು ಗಂಟೆ ಹಗಲು ವಿದ್ಯುತ್ ನೀಡಲು ಏನು ತೊಂದರೆ ಎಂದು ಪ್ರಶ್ನಿಸಿದರು.ರಿಪ್ಪನ್ಪೇಟೆ ಭಾಗದಲ್ಲಿ ರಾತ್ರಿ ವೇಳೆ ತೋಟಗಳಿಗೆ ನೀರು ಹಾಯಿಸಲು ರೈತರು ತೆರಳಬೇಕಾಗಿದೆ. ಈ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿರುವುದರಿಂದ ಜೀವಭಯದಲ್ಲೇ ಹೊಲಗಳಿಗೆ ಹೋಗುವ ಪರಿಸ್ಥಿತಿ ಇದೆ. ಈ ಹಿಂದೆ ಆನೆ ದಾಳಿಯಿಂದ ಸಾವು ಸಂಭವಿಸಿದ ಘಟನೆಗಳೂ ನಡೆದಿವೆ. ರೈತರ ಸುರಕ್ಷತೆಯ ದೃಷ್ಟಿಯಿಂದ ಹಗಲಿನಲ್ಲೇ ವಿದ್ಯುತ್ ಪೂರೈಸಬೇಕು. ಈ ಬೇಡಿಕೆಗಾಗಿ ರಿಪ್ಪನ್ಪೇಟೆ ಭಾಗದಲ್ಲಿ ಹೋರಾಟವನ್ನೂ ನಡೆಸಲಾಗಿದೆ ಎಂದರು.
ಲೈನ್ಮನ್ಗಳ ಕೊರತೆ:ಮೆಸ್ಕಾಂ ಇಲಾಖೆಯಲ್ಲಿ ಅಧಿಕಾರಿಗಳು ಮತ್ತು ಲೈನ್ಮನ್ಗಳ ಕೊರತೆಯಿಂದ ವಿದ್ಯುತ್ ಮಾರ್ಗಗಳ ನಿರ್ವಹಣೆ ಹಾಗೂ ದುರಸ್ತಿ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಸಾಗರ ಮತ್ತು ಶಿಕಾರಿಪುರದಲ್ಲಿ ಹುದ್ದೆಗಳು ಖಾಲಿಯಿದ್ದು, ಪ್ರಭಾರ ಅಧಿಕಾರಿಗಳ ಮೂಲಕ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಶೇ. 50 ರಷ್ಟು ಲೈನ್ ಮೆನ್ ಗಳಿಲ್ಲ. ರಿಪ್ಪನ್ಪೇಟೆಯಲ್ಲಿ 28 ಲೈನ್ಮನ್ಗಳು ಇರಬೇಕಾದ ಕಡೆ ಕೇವಲ 16 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ವಿದ್ಯುತ್ ವ್ಯತ್ಯಯ ಉಂಟಾದಾಗ ತಕ್ಷಣ ದುರಸ್ತಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. 2019ರ ಬಳಿಕ ನೇಮಕಾತಿ ನಡೆಯದಿರುವುದು ಹಾಗೂ ವರ್ಗಾವಣೆಗಳಿಂದ ಸಿಬ್ಬಂದಿ ಕೊರತೆ ಹೆಚ್ಚಾಗಿದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ, ಸಮಸ್ಯೆ ಪರಿಹರಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಹಾಗೂ ಮೆಸ್ಕಾಂ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸಾಗರ ಮತ್ತು ಹೊಸನಗರ ಭಾಗಗಳಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಹುದ್ದೆಗಳು ಖಾಲಿ ಇರುವುದರಿಂದ ಆಡಳಿತ ನಿರ್ವಹಣೆಗೆ ತೊಂದರೆಯಾಗಿದೆ. ಸಾಗರದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ನಗರಸಭೆ ಆಯುಕ್ತರು ಸೇರಿದಂತೆ ವಿವಿಧ ಹುದ್ದೆಗಳು ಖಾಲಿ ಇವೆ. ಪೊಲೀಸ್ ಇಲಾಖೆಯಲ್ಲಿಯೂ ಸಬ್ಇನ್ಸ್ಪೆಕ್ಟರ್ಗಳ ಕೊರತೆಯಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಕಡಸೂರು, ಸೊರಬ ಮಂಡಲದ ಪ್ರಧಾನ ಕಾರ್ಯದರ್ಶಿ ಸುರೇಶ್ ಉದ್ರಿ ಮತ್ತು ಜಾನಕಪ್ಪ, ಜಿಲ್ಲಾ ಮಾಧ್ಯಮ ಪ್ರಮುಖ ಮಂಜುನಾಥ್, ನಗರ ಮಂಡಲದ ಸಾಮಾಜಿಕ ಜಾಲತಾಣ ಪ್ರಮುಖ ಮುರಳಿ ಹಾಗೂ ಚಂದ್ರಶೇಖರ್ ಉಪಸ್ಥಿತರಿದ್ದರು.ಬಾಕ್ಸ್....ಜಿಲ್ಲೆಯ ವಿವಿಧೆಡೆ ಹೋರಾಟ ತೀವ್ರ ಮಲೆನಾಡು ಮತ್ತು ಅರೆಮಲೆನಾಡು ಭಾಗಗಳ ರೈತರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಅಡಿಕೆ ಬಹುವಾರ್ಷಿಕ ಬೆಳೆಯಾಗಿದ್ದು, ನೀರಿನ ಕೊರತೆಯಿಂದ ತೋಟಗಳು ಹಾಳಾದರೆ ರೈತರಿಗೆ ದೀರ್ಘಕಾಲದ ನಷ್ಟವಾಗಲಿದೆ. ಮುಂಬರುವ ಬೇಸಿಗೆಯಲ್ಲಿ ಸಮಸ್ಯೆ ಮತ್ತಷ್ಟು ತೀವ್ರವಾಗುವ ಮುನ್ನವೇ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ರೈತರ ಸಂಕಷ್ಟಕ್ಕೆ ಸ್ಪಂದಿಸದಿದ್ದರೆ ಜಿಲ್ಲೆಯ ವಿವಿಧೆಡೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಹರತಾಳು ಹಾಲಪ್ಪ ಎಚ್ಚರಿಸಿದರು.
-----------------------ಪೋಟೋ: 24ಎಸ್ಎಂಜಿಕೆಪಿ02
ಶಿವಮೊಗ್ಗದ ಪತ್ರಿಕಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಘಟಕ ಉಪಾಧ್ಯಕ್ಷ ಹರತಾಳು ಹಾಲಪ್ಪ ಮಾತನಾಡಿದರು.