ಸಾರಾಂಶ
ಅಸಂಖ್ಯಾತ ಭಕ್ತರ ಶ್ರದ್ಧೆಯ ಕೇಂದ್ರವಾಗಿರುವ ಮೂಕಪ್ಪ ಸ್ವಾಮಿಗಳ (ಜೋಡಿ ಬಸವಣ್ಣಗಳು) ಮಠಕ್ಕೆ ಜಾಗದ ಕೊರತೆ ವಿಪರೀತವಾಗಿದ್ದು, ಸರ್ಕಾರ ಈ ಕೂಡಲೇ ಸ್ಪಂದಿಸಿ ಲೋಕಕಲ್ಯಾಣಾರ್ಥವಾಗಿ ನಡೆಯುವ ಪೂಜಾ ಕಾರ್ಯಗಳಿಗೆ ಸಹಕಾರ ನೀಡಬೇಕು
ಕನ್ನಡಪ್ರಭ ವಾರ್ತೆ ಶಿಕಾರಿಪುರ
ತಾಲೂಕಿನ ಶಿರಾಳಕೊಪ್ಪದಲ್ಲಿ ಕಳೆದ ಹಲವು ವರ್ಷಗಳಿಂದ ಜಾಗದ ಕೊರತೆಯಿಂದಾಗಿ ಮನೆಯಲ್ಲಿಯೇ ಪೂಜಾ ಕೈಂಕರ್ಯದ ಮೂಲಕ ಅಸಂಖ್ಯಾತ ಭಕ್ತರ ಶ್ರದ್ಧೆಯ ಕೇಂದ್ರವಾಗಿರುವ ಮೂಕಪ್ಪ ಸ್ವಾಮಿಗಳ (ಜೋಡಿ ಬಸವಣ್ಣಗಳು) ಮಠಕ್ಕೆ ಜಾಗದ ಕೊರತೆ ವಿಪರೀತವಾಗಿದ್ದು, ಸರ್ಕಾರ ಈ ಕೂಡಲೇ ಸ್ಪಂದಿಸಿ ಲೋಕಕಲ್ಯಾಣಾರ್ಥವಾಗಿ ನಡೆಯುವ ಪೂಜಾ ಕಾರ್ಯಗಳಿಗೆ ಸಹಕಾರ ನೀಡಬೇಕು ಎಂದು ಶಿರಾಳಕೊಪ್ಪದ ಪಂಪ್ ಹೌಸ್ ಬಡಾವಣೆಯಲ್ಲಿನ ವೀರಭದ್ರೇಶ್ವರ ಮತ್ತು ಶನೇಶ್ವರ ದೇವಸ್ಥಾನ ಟ್ರಸ್ಟ್‌ನ ಪ್ರಭುದೇವ ಸ್ವಾಮೀಜಿ ಮನವಿ ಮಾಡಿದರು.ಪಟ್ಟಣದ ಸುದ್ದಿಮನೆಯಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಶಿರಾಳಕೊಪ್ಪದಲ್ಲಿನ ಪಂಪ್ ಹೌಸ್ ಬಳಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಮನೆಯಲ್ಲಿಯೇ ಪೂಜಾ ಪುನಸ್ಕಾರ ನಡೆಸಲಾಗುತ್ತಿದ್ದು ತೀವ್ರ ತೊಂದರೆಯಾಗುತ್ತಿದೆ. ಮೂಕಪ್ಪ ಸ್ವಾಮಿಗಳಿಗೆ ಅಸಂಖ್ಯಾತ ಭಕ್ತರು ನಡೆದುಕೊಳ್ಳುತ್ತಿದ್ದಾರೆ. ಈಗ ಮಠ ನಿರ್ಮಾಣ ಮಾಡಲು ಜಾಗದ ಅವಶ್ಯಕತೆ ಇದ್ದು, ಕಳೆದ ವಾರ ಜಾಗಕ್ಕಾಗಿ ಮೂಕಪ್ಪ ಸ್ವಾಮಿಗಳ ಮುಂದೆ ಬೇಡಿಕೆ ಇಟ್ಟಾಗ ಜಾಗ ತೋರಿಸುವುದಾಗಿ ಭಕ್ತರ ಜತೆ ಪಲ್ಲಕ್ಕಿ ಸಹಿತ ನಡೆದುಕೊಂಡು ಬಂದ ಸ್ವಾಮಿಗಳು ಮಠದಿಂದ ಅಂದಾಜು ಒಂದು ಕಿಮೀ ದೂರವಿರುವ ಡಿಪ್ಲೋಮಾ ಕಾಲೇಜಿನ ಬಳಿಯಲ್ಲಿರುವ ಹಾಲಿನ ಡೈರಿ ಹಿಂಭಾಗ ಮೂಲತಃ ಹಾನಗಲ್ ಕುಮಾರಸ್ವಾಮಿಗಳ ಮಠದ ಜಾಗದಲ್ಲಿ ಗುರುತನ್ನು ತೋರಿಸಿಲಾಗಿ ಅಂದು ಅಲ್ಲಿ ಮೂರು ಕಲ್ಲಿನ ವಿಗ್ರಹಗಳು ಪತ್ತೆಯಾದವು ಎಂದು ತಿಳಿಸಿದರು.
ಮೂಕಪ್ಪ ಸ್ವಾಮಿ ತೋರಿಸಿದ ಜಾಗದ ಬಳಿಯ ಹುತ್ತದ ಒಳಗಿದ್ದ ಮೂರ್ತಿಯನ್ನು ತೆಗೆಯುವ ಸಂದರ್ಭ ಸರ್ಪ ಕಾಣಿಸಿಕೊಂಡಿತು. ಮತ್ತೊಂದು ನೀರಿನಲ್ಲಿ ಇದ್ದು ಬಾಲರಾಮನ ಚಿತ್ರ ಉಳ್ಳ ವಿಗ್ರಹವಾಗಿದ್ದು ಈ ಬಗ್ಗೆ ಇತಿಹಾಸ ತಜ್ಞರ ಮೂಲಕ ಹೆಚ್ಚಿನ ಸಂಶೋಧನೆ ನಡೆಸಬೇಕಾಗಿದೆ. ಮೂಕಪ್ಪ ಸ್ವಾಮಿಗಳು ತೋರಿಸಿದ ಜಾಗವು ಸರ್ಕಾರ ಮತ್ತು ಹಾನಗಲ್ ಕುಮಾರ ಸ್ವಾಮಿಗಳ ಮಠದ ಮದ್ಯದ ತಕರಾರು ಜಾಗವಾಗಿದ್ದು,ನಮಗೆ ಈಗ ತೋರಿಸಿರುವ ಜಾಗದಲ್ಲಿ ಸರ್ಕಾರದಿಂದ ಮಠ ಕಟ್ಟಿಸಲು ಜನಪ್ರತಿನಿಧಿಗಳು ಸ್ಪಂದಿಸಬೇಕೆಂದು ವಿನಂತಿಸಿದರು.ದೇವಸ್ಥಾನ ಮಂಡಳಿಯ ಮಂಜುನಾಥ ಜಿಲೇಬಿ, ಸಂತೋಷ್ ಕುಮಾರ್, ಮಂಜುನಾಥ್ ಗೌಡ್ರು, ಬಸವರಾಜ್ ಮತ್ತಿತರರು ಹಾಜರಿದ್ದರು.