ಸಾರಾಂಶ
ಪರಿಶಿಷ್ಟ ಜಾತಿಯಲ್ಲಿ ಒಟ್ಟು 101 ಉಪ ಜಾತಿಗಳಿದ್ದು, ಇದರಲ್ಲಿ ಬಲಗೈಗೆ ಸಂಬಂಧಿಸಿದಂತೆ 39 ಉಪ ಜಾತಿ, ಎಡಗೈಗೆ ಸಂಬಂಧಿಸಿದಂತೆ 42 ಉಪ ಜಾತಿ, 13 ಲಂಬಾಣಿ ಹಾಗೂ 11 ಅಲೆಮಾರಿ ಜಾತಿಗಳಿವೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಉಪ ಜಾತಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು .
ಕನ್ನಡಪ್ರಭ ವಾರ್ತೆ ಮೈಸೂರು
ಒಳಮೀಸಲಾತಿ ಸಮೀಕ್ಷೆ ವೇಳೆ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಉಪ ಜಾತಿಗಳ ಬಗ್ಗೆ ಪ್ರತಿಯೊಬ್ಬರು ನಿಖರ ಮಾಹಿತಿ ನೀಡಬೇಕು ಎಂದು ಪರಿಶಿಷ್ಟ ಜಾತಿ ಹೊಲಯ, ಬಲಗೈ, ಛಲವಾದಿ ಒಳ ಮೀಸಲಾತಿ ಜಾಗೃತಿ ಸಮಿತಿಯ ಸಂಚಾಲಕ ಲಿಂಗೇಶ್ ಮನವಿ ಮಾಡಿದರು.ನಗರದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಪರಿಶಿಷ್ಟ ಜಾತಿ ಹೊಲಯ, ಬಲಗೈ, ಛಲವಾದಿ ಒಳ ಮೀಸಲಾತಿ ಜಾಗೃತಿ ಸಮಿತಿಯು ಭಾನುವಾರ ಆಯೋಜಿಸಿದ್ದ ಒಳ ಮೀಸಲಾತಿ ಕುರಿತ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಮೇ 5 ರಿಂದ ಸಮೀಕ್ಷೆ ಆರಂಭವಾಗಲಿದ್ದು, ನಮ್ಮ ಜಾತಿ ಮತ್ತು ಉಪ ಜಾತಿ ಬಗ್ಗೆ ಮಾಹಿತಿ ನೀಡುವ ಅನಿವಾರ್ಯತೆ ಇದೆ. ಈ ಹಿನ್ನೆಲೆ ಪ್ರತಿಯೊಬ್ಬರು ಜಾತಿ ಗಣತಿ ವೇಳೆ ನಿಮ್ಮ ಮನೆಗೆ ಬರುವ ಗಣತಿದಾರರಿಗೆ ಸಮಗ್ರ ಮಾಹಿತಿ ನೀಡಬೇಕು. ಜಾತಿ, ಉಪ ಜಾತಿ ಬಗ್ಗೆ ಮಾಹಿತಿ ನೀಡುವ ಬಗ್ಗೆ ಯಾವುದೇ ಗೊಂದಲಕ್ಕೆ ಒಳಗಾಗಬೇಡಿ. ಮೀಸಲಾತಿ ಪಡೆಯುವ ನಿಟ್ಟಿನಲ್ಲಿ ಈಗ ನಾವು ನೀಡುವ ಮಾಹಿತಿ ನಮ್ಮ ಮುಂದಿನ ಮಕ್ಕಳ ಭವಿಷ್ಯ ನಿರ್ಧರಿಸಲಿದೆ ಎಂದರು.ಡಾ. ಅಂಬೇಡ್ಕರ್ ವಿವಿದ್ದೋದ್ದೇಶ ಸಹಕಾರ ಸಂಘದ ರಾಜ್ಯಾಧ್ಯಕ್ಷ ತುಂಬಲ ರಾಮಣ್ಣ ಮಾತನಾಡಿ, ಪರಿಶಿಷ್ಟ ಜಾತಿಯಲ್ಲಿ ಒಟ್ಟು 101 ಉಪ ಜಾತಿಗಳಿದ್ದು, ಇದರಲ್ಲಿ ಬಲಗೈಗೆ ಸಂಬಂಧಿಸಿದಂತೆ 39 ಉಪ ಜಾತಿ, ಎಡಗೈಗೆ ಸಂಬಂಧಿಸಿದಂತೆ 42 ಉಪ ಜಾತಿ, 13 ಲಂಬಾಣಿ ಹಾಗೂ 11 ಅಲೆಮಾರಿ ಜಾತಿಗಳಿವೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಉಪ ಜಾತಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು ಎಂದು ಹೇಳಿದರು.
ಒಳ ಮೀಸಲಾತಿ ಬಗ್ಗೆ ವಿಷಯತಜ್ಞರು ವಿವರಿಸಿದರು. ಮೈಸೂರು, ಮಂಡ್ಯ, ಕೊಡುಗು ಜಿಲ್ಲೆಯಿಂದ ಮುಖಂಡರು ಪಾಲ್ಗೊಂಡಿದ್ದರು. ಮಾಜಿ ಮೇಯರ್ ಪುರುಷೋತ್ತಮ್, ಪಾಲಿಕೆ ಮಾಜಿ ಸದಸ್ಯೆ ಡಾ. ಅಶ್ವಿನಿ ಶರತ್, ಮುಖಂಡರಾದ ಸಿದ್ಧಸ್ವಾಮಿ, ಸೋಮಯ್ಯ ಮಲೆಯೂರು, ಸೋಸಲೆ ಸಿದ್ದರಾಜು, ಅಮ್ಮ ರಾಮಚಂದ್ರ, ಶರತ್ ಸತೀಶ್ ಮೊದಲಾದವರು ಇದ್ದರು.