ರೈಲ್ವೆ ಟಿಸಿಗಳಿಗೆ ಸೂಕ್ತ ರಕ್ಷಣೆ ನೀಡಿ

| Published : May 22 2024, 01:02 AM IST

ಸಾರಾಂಶ

ಟಿಸಿಗಳಿಗೆ ರೈಲ್ವೆ ಇಲಾಖೆ ಆರ್‌ಪಿಎಫ್ ಸಿಬ್ಬಂದಿ ಮೂಲಕ ರಕ್ಷಣೆ ಒದಗಿಸಬೇಕು. ಅನಗತ್ಯವಾಗಿ ರೈಲ್ವೆ ಸಿಬ್ಬಂದಿ ಹಾಗೂ ಅಧಿಕಾರಿಗಳ ಮೇಲೆ ನಿರಂತರ ಹಲ್ಲೆ ಮತ್ತು ಹಲ್ಲೆಗೆ ಯತ್ನಿಸಿದ ಘಟನೆಗಳು ಹೆಚ್ಚಾಗಿವೆ.

ಹುಬ್ಬಳ್ಳಿ:

ಈಚೆಗೆ ಚಾಲುಕ್ಯ ಎಕ್ಸ್‌ಪ್ರೆಸ್‌ ರೈಲಿನ ಟಿಕೆಟ್ ಕಲೆಕ್ಟರ್ (ಟಿಸಿ) ಅಶ್ರಫ್‌ಅಲಿ ಎಂಬುವರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಹಾಗೂ ಹೌಸ್ ಕಿಪಿಂಗ್ ಸಿಬ್ಬಂದಿ ದೇವರ್ಶಿ ವರ್ಮಾ ಕೊಲೆ ಖಂಡಿಸಿ ಹಾಗೂ ರೈಲ್ವೆ ಸಿಬ್ಬಂದಿಗೆ ಸೂಕ್ತ ರಕ್ಷಣೆಗೆ ಒತ್ತಾಯಿಸಿ ಇಂಡಿಯನ್ ರೈಲ್ವೆ ಟಿಕೆಟ್ ಚೆಕ್ಕಿಂಗ್ ಸ್ಟಾಪ್ ಆರ್ಗಾನೈಜೇಶನ್ ವತಿಯಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

ನಗರದ ರೈಲ್ವೆ ನಿಲ್ದಾಣದ ಆವರಣದಲ್ಲಿ ಸಮಾವೇಶಗೊಂಡ ವಿವಿಧ ಜಿಲ್ಲೆಯ ರೈಲ್ವೆ ಟಿಕೆಟ್ ಕಲೆಕ್ಟರ್ ಹಾಗೂ ಹೌಸ್ ಕಿಪಿಂಗ್‌ ಸಿಬ್ಬಂದಿ, ಹಲ್ಲೆಕೋರನ ವಿರುದ್ಧ ವಿವಿಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮೇ 16ರಂದು ರಾತ್ರಿ ಚಾಲುಕ್ಯ ಎಕ್ಸ್‌ಪ್ರೆಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟಿಸಿ ಅಶ್ರಫ್ ಅಲಿ ಎಂಬುವರು, ಅದೇ ರೈಲಿನ ದ್ವಾರದ ಬಳಿ ಕುಳಿತಿದ್ದ ವ್ಯಕ್ತಿಗೆ ಟಿಕೆಟ್ ತೋರಿಸುವಂತೆ ಕೇಳಿದ್ದಾರೆ. ಆಗ ಆತ ತನ್ನ ಬಳಿ ಟಿಕೆಟ್ ಇಲ್ಲದ ಕಾರಣಕ್ಕೆ ಚಾಕು ತೆಗೆದು ಟಿಸಿ ಮೇಲೆ ಮಾರಣಾಂತಿಕ ಹಲ್ಲೆಗೆ ಮುಂದಾಗಿದ್ದಾನೆ. ಅದೇ ಸಮಯಕ್ಕೆ (ಖಾನಾಪುರದ ಗುಂಜಿ ಹತ್ತಿರ ಹೋಗುತ್ತಿದ್ದಾಗ) ರೈಲಿನಲ್ಲಿದ್ದ ಹೌಸ್ ಕಿಪಿಂಗ್ (ದೇವರ್ಶಿ ವರ್ಮಾ) ಸಿಬ್ಬಂದಿಯು ಅಧಿಕಾರಿಯ ರಕ್ಷಣೆಗೆ ದಾವಿಸಿದ್ದಾನೆ,. ಆತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ನಂತರ ಆತ ಪೊಲೀಸರಿಗೂ ಸಿಗದೆ ಪರಾರಿಯಾಗಿದ್ದಾನೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಹಗಲು, ರಾತ್ರಿ ಎನ್ನದೆ ರೈಲ್ವೆಯಲ್ಲಿ ಕಾರ್ಯನಿರ್ವಹಿಸುವ ಟಿಸಿಗಳಿಗೆ ರೈಲ್ವೆ ಇಲಾಖೆ ಆರ್‌ಪಿಎಫ್ ಸಿಬ್ಬಂದಿ ಮೂಲಕ ರಕ್ಷಣೆ ಒದಗಿಸಬೇಕು. ಅನಗತ್ಯವಾಗಿ ರೈಲ್ವೆ ಸಿಬ್ಬಂದಿ ಹಾಗೂ ಅಧಿಕಾರಿಗಳ ಮೇಲೆ ನಿರಂತರ ಹಲ್ಲೆ ಮತ್ತು ಹಲ್ಲೆಗೆ ಯತ್ನಿಸಿದ ಘಟನೆಗಳು ಹೆಚ್ಚಾಗಿವೆ. ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಕೊಲೆಗಾರನನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸುವ ಮೂಲಕ ಉಗ್ರ ಶಿಕ್ಷೆಗೆ ಗುರಿಪಡಿಸಬೇಕು. ಮತ್ತೊಮ್ಮೆ ಇಂತಹ ಘಟನೆಗಳು ನಡೆಯದಂತೆ ತಡೆಯಲು ಹಾಗೂ ಸಿಬ್ಬಂದಿಯ ರಕ್ಷಣೆಗೆ ಎಲ್ಲ ರೈಲು ಹಾಗೂ ರೈಲ್ವೆ ನಿಲ್ದಾಣದಲ್ಲಿ ಸಮರ್ಪಕ ಆರ್‌ಪಿಎಫ್ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು. ಕೊಲೆಯಾದ ಸಿಬ್ಬಂದಿ ಹಾಗೂ ಗಾಯಗೊಂಡ ಅಧಿಕಾರಿಗೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ನಂತರ ಪ್ರತಿಭಟನಾಕಾರರು ಹುಬ್ಬಳ್ಳಿ ಸೌಥ್ ವೆಸ್ಟರ್ನ್ ರೈಲ್ವೆ ವಿಭಾಗದ ಜನರಲ್ ಮ್ಯಾನೇಜರ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಟಿಸಿಗಳಾದ ನಜೀರ್ ಅಹ್ಮದ್, ಸಂಪತ್, ವೀಣಾ, ಸುನೀತಾ, ಕೃಷ್ಣಾ ರಾವ್ ಸೇರಿದಂತೆ 50ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.