ಸಾರಾಂಶ
ಯಲಬುರ್ಗಾ:
ಪಟ್ಟಣದ ಬೀದಿಬದಿ ವ್ಯಾಪಾರಸ್ಥರಿಗೆ ವ್ಯಾಪಾರ-ವಹಿವಾಟು ನಡೆಸಲು ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ತಾಲೂಕು ಘಟಕದಿಂದ ಗುರುವಾರ ಧರಣಿ ಸತ್ಯಾಗ್ರಹ ನಡೆಸಿ ಉಪತಹಸೀಲ್ದಾರ್ ವಿಜಯಕುಮಾರ ಗುಂಡೂರ ಹಾಗೂ ಪಪಂ ಮುಖ್ಯಾಧಿಕಾರಿ ನಾಗೇಶಗೆ ಮನವಿ ಸಲ್ಲಿಸಲಾಯಿತು.ಒಕ್ಕೂಟದ ತಾಲೂಕು ಅಧ್ಯಕ್ಷ ಮಹ್ಮದ್‌ಗೌಸ್ ಮಕಾಂದಾರ ಮಾತನಾಡಿ, ಪಟ್ಟಣದ ಬೀದಿಬದಿ ಸೂಕ್ತ ಜಾಗ ಇಲ್ಲದೆ ಚರಂಡಿ, ಫುಟ್‌ಪಾತ್ ಮೇಲೆ ವ್ಯಾಪಾರಿ ನಡೆಸಿಕೊಂಡು ಉಪಜೀವನ ನಡೆಸುತ್ತಿದ್ದಾರೆ. ಪಟ್ಟಣದಲ್ಲಿ ಇದುವರೆಗೂ ವ್ಯಾಪಾರ ನಡೆಸಲು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲವಾಗಿದೆ. ವ್ಯಾಪಾರಸ್ಥರಿಗೆ ನೋಟಿಸ್ ನೀಡದೆ ಏಕಾಏಕಿ ಅಂಗಡಿ ತೆರವುಗೊಳಿಸಲು ಮುಂದಾಗಿರುವ ಪಪಂ ಆಡಳಿತ ವರ್ಗದ ನಿರ್ಧಾರ ವ್ಯಾಪಾರಸ್ಥರಿಗೆ ನೋವುಂಟು ಮಾಡಿದೆ. ಇದರಿಂದ ನಮ್ಮ ಬದುಕು ಅತಂತ್ರವಾಗಿದೆ. ಸಾಲ ಮಾಡಿಕೊಂಡು ಬಡ ಬೀದಿ ವ್ಯಾಪಾರಸ್ಥರು ಜೀವನ ಮಾಡುವುದು ಕಷ್ಟಕರವಾಗಿರುತ್ತದೆ. ಆದ್ದರಿಂದ ಮಾರುಕಟ್ಟೆಗೆ ಪರ್ಯಾಯ ಜಾಗೆ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಪಪಂ ಮುಖ್ಯಾಧಿಕಾರಿ ನಾಗೇಶ ಮಾತನಾಡಿ, ಅನಧಿಕೃತ ಸ್ಥಳದಲ್ಲಿ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿರುವ ಬೀದಿಬದಿ ಅಂಗಡಿ ತೆರವುಗೊಳಿಸಲಾಗುತ್ತಿದೆ. ವ್ಯಾಪಾರಸ್ಥರಿಗೆ ಯಾವುದೇ ಅನ್ಯಾಯ ಮಾಡುವ ಉದ್ದೇಶವಿಲ್ಲ. ಈಗಾಗಲೇ ಮಾರುಕಟ್ಟೆ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು, ಇನ್ನೆರಡು ತಿಂಗಳಲ್ಲಿ ವ್ಯಾಪಾರಸ್ಥರಿಗೆ ಅವಕಾಶ ಮಾಡಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.ರಸ್ತೆ ಸುರಕ್ಷತಾ ಹಿತದೃಷ್ಟಿಯಿಂದ ಚರಂಡಿ ಮೇಲಿರುವ ಅನಧಿಕೃತ ಗೂಡಂಗಡಿ ತೆರವುಗೊಳಿಸುವ ವಿಷಯದಲ್ಲಿ ಹಿಂದೆ ಸರಿಯುವುದಿಲ್ಲ. ತೆರವು ಕಾರ್ಯಾಚರಣೆ ಕುರಿತು ಈಗಾಗಲೇ ಪಪಂ ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಆದೇಶ ಕೂಡ ಪಾಲಿಸಬೇಕಿರುವುದು ನಮ್ಮ ಕರ್ತವ್ಯವಾಗಿದೆ. ಹೀಗಾಗಿ ಬೀದಿಬದಿ ವ್ಯಾಪಾರಸ್ಥರಿಗೆ ಯಾವುದೇ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಪಪಂ ಸದಸ್ಯ ಅಮರೇಶ ಹುಬ್ಬಳ್ಳಿ, ಮುಖಂಡರಾದ ವೀರಣ್ಣ ಹುಬ್ಬಳ್ಳಿ, ಷಣ್ಮುಖಪ್ಪ ರಾಂಪುರ, ಶಿವಕುಮಾರ ಭೂತೆ, ಬಸವರಾಜ ಗುಳಗುಳಿ, ದೇವರಾಜ ತೋಟದ, ಅಬ್ದುಲ್ ರಜಾಕ್ ಮಾತನಾಡಿದರು.ಈ ವೇಳೆ ಪಪಂ ಎಂಜಿನಿಯರ್ ಉಮೇಶ ಬೇಲಿ, ಸಿಬ್ಬಂದಿ ರಾಮಣ್ಣ ಭಜಂತ್ರಿ ಹಾಗೂ ಬೀದಿಬದಿ ವ್ಯಾಪಾರಸ್ಥರು ಇದ್ದರು.೨೧ವೈಎಲ್‌ಬಿ೦೨
ಯಲಬುರ್ಗಾದ ಬೀದಿಬದಿ ವ್ಯಾಪಾರಸ್ಥರಿಗೆ ವ್ಯಾಪಾರ ನಡೆಸಲು ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಬೀದಿಬದಿ ವ್ಯಾಪಾರಿ ಸಂಘಟನೆಗಳ ತಾಲೂಕು ಒಕ್ಕೂಟದಿಂದ ಧರಣಿ ನಡೆಸಿ ಮನವಿ ಸಲ್ಲಿಸಲಾಯಿತು.