ತೀವ್ರ ಬರ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಹೆಕ್ಟೇರ್‌ಗೆ 50 ಸಾವಿರ ಬೆಳೆ ಪರಿಹಾರ ಘೋಷಿಸಬೇಕು. ರೈತರ ಪ್ರತಿ ಟನ್‌ ಕಬ್ಬಿನ ಎಫ್‌ಆರ್‌ಪಿ ಸುಮಾರು 5500 ರು. ನಿಗಧಿಪಡಿಸಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡುವ ಮೂಲಕ ರೈತರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹುಮನಾಬಾದ್

ತೀವ್ರ ಬರ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಹೆಕ್ಟೇರ್‌ಗೆ 50 ಸಾವಿರ ಬೆಳೆ ಪರಿಹಾರ ಘೋಷಿಸಬೇಕು. ರೈತರ ಪ್ರತಿ ಟನ್‌ ಕಬ್ಬಿನ ಎಫ್‌ಆರ್‌ಪಿ ಸುಮಾರು 5500 ರು. ನಿಗಧಿಪಡಿಸಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡುವ ಮೂಲಕ ರೈತರು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕ ಹಾಗೂ ಯುವ ಕ್ರಾಂತಿ ಸಂಘಟನೆಯ ಸಹಯೋಗದಲ್ಲಿ ಪಟ್ಟಣದ ಹೊರವಲಯದ ಹಳೆ ಆರ್.ಟಿ.ಓ ಕಚೇರಿಯ ಕಲಬುರಗಿ, ಬೀದರ್‌ ಮಾರ್ಗದ ರಾಷ್ಟ್ರೀಯ ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸಿದರು.

ಸ್ವಾಮಿನಾಥನ್‌ ವರದಿ ಜಾರಿಗೊಳಿಸಬೇಕು. ಸಕ್ಕರೆಗೆ 6000 ರು. ಎಮ್.ಎಸ್.ಪಿ ನಿಗದಿಗೊಳಿಸಬೇಕು, ಬರಗಾಲ ಪೀಡಿತ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಅಹಾರ ಉತ್ಪಾದಿಸುವ ರೈತರ ಕೃಷಿ ಐ.ಪಿ.ಎಸ್.ಇ.ಟಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಿಲ್ಲದೆ ಒಣಗುತ್ತಿರುವ ಬೆಳೆಗಳನ್ನು ರಕ್ಷಿಸಿಕೊಳ್ಳಲು ಹಗಲಿನಲ್ಲಿ 10 ಗಂಟೆ ವಿದ್ಯುತ್ ಸಂಪರ್ಕ ಪೂರೈಸಬೇಕು.

ಕಾಡು ಪ್ರಾಣಿಗಳಿಂದ ರಕ್ಷಣೆಗೆ ರೈತರಿಗೆ ಶೇ.90ರಷ್ಟು ರಿಯಾಯತಿ ದರದಲ್ಲಿ ಸೋಲಾರ್ ಬೇಲಿಗಳನ್ನು ಅಳವಡಿಸಬೇಕು, ಬರಗಾಲ ಘೋಷಣೆಯಾದ ಜಿಲ್ಲೆಗಳಲ್ಲಿ ಬೆಳೆ ವಿಮೆ ಕಟ್ಟದ ರೈತರ ಖಾತೆಗೆ ಶೇ.100ರಷ್ಟು ವಿಮೆ ಹಣ ಜಮಾ ಮಾಡಬೇಕೆಂದು ಆಗ್ರಹಿಸಿದರು.

ಕೆಲ ಸಮಯ ಮುಂಬೈ-ಹೈದ್ರಾಬಾದ್ ರಸ್ತೆ ತಡೆದು ಪ್ರತಿಭಟನೆ ನಡೆಸಿದ ನಂತರ ಬೈಪಾಸು ಹಾಗೂ ಫ್ಲೈವರ್ ಹತ್ತಿರ ಪ್ರತಿಭಟನೆಯ ಬಳಿಕ ಕಲಬುರಗಿ ಬೀದರ್‌ ಮಾರ್ಗ ಬಂದ್‌ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕೆಲ ರೈತರು ಹಾಗೂ ರೈತ ಮುಖಂಡರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಸಮಸ್ಯೆಗಳ ಪರಿಹಾರ ಜಿಲ್ಲಾಧಿಕಾರಿ ಅವರ ಕೈಯಲ್ಲಿದೆ. ಅದಕ್ಕೆ ಅವರು ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಪತ್ರ ಸ್ವೀಕರಿಸಬೇಕು ಎಂದು ರೈತರು ಪಟ್ಟು ಹಿಡಿದ ಕಾರಣ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಸಂಜೆ ಆಗಮಿಸಿ ಮುಖ್ಯಮಂತ್ರಿ ಹಾಗೂ ಪ್ರಧಾನಿಗೆ ಬರೆದ ಮನವಿ ಸ್ವೀಕರಿಸಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತರ ಜೊತೆ ಕಬ್ಬಿನ ದರ ನಿಗಧಿ ಮಾಡಲು ಶೀಘ್ರದಲ್ಲೆ ಸಭೆ ಕರೆಯಲಾಗುವುದು. ಬೆಳೆ ವಿಮೆ ಪರಿಹಾರ ಬಿಡುಗಡೆ ಬಳಿಕ ಸರ್ಕಾರ ನಿಯಮಾನುಸಾರ ನೀಡಲಾಗುವುದು. ಕಳೆದ ವರ್ಷ 267 ಕೋಟಿ ರು. ಜಿಲ್ಲೆಗೆ ನೀಡಲಾಗಿದ್ದು, ಅನಾವೃಷ್ಠಿಗೆ ಇದೇ ತರಹ ಪರಿಹಾರ ಸೀಗಲಿದೆ ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಖಾಸಿಮ್ ಅಲಿ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ತಾಲೂಕು ಅಧ್ಯಕ್ಷ ಮುಖಿಮೂದ್ದಿನ್, ವಿಠಲರೆಡ್ಡಿ, ಶಕುಂತಲಾ ಬಿರಾದಾರ, ಕಮಲಾಬಾಯಿ ಬಸವಕಲ್ಯಾಣ ಸೇರಿದಂತೆ ಇನ್ನಿತರ ರೈತ ಪ್ರಮುಖರು ಇದ್ದರು.

ಎಸ್ಪಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್‌: ಎಸ್.ಪಿ ಪ್ರದೀಪ ಗುಂಟಿ ನೇತೃತ್ವದಲ್ಲಿ ಬಸವಕಲ್ಯಾಣ ಸಹಾಯಕ ಆಯುಕ್ತ ಪ್ರಕಾಶ ಕುದರೆ, ಮೂವರು ಡಿವೈಎಸ್ಪಿ, ಸಿಪಿಐಗಳಾದ ರಘುವೀರಸಿಂಗ್ ಠಾಕೂರ, ಅಮೂಲ‌ ಕಾಳೆ, ಎಲ್.ಟಿ ‌ಸಂತೋಷ ಸೇರಿದಂತೆ 6ಜನ ಸಿಪಿಐಗಳು, ಪಿ.ಎಸ್.ಐ ಸೋಮಲಿಂಗ ವಡೆಯರ ಸೇರಿದಂತೆ 12 ಪಿಎಸ್ಐಗಳು ಅಲ್ಲದೇ ಎರಡು ಕೆ.ಎಸ್.ಆರ್.ಪಿ, ಮೂರು ಡಿ.ಆರ್ ತುಕಡಿ ಸೇರಿದಂತೆ ನೂರಾರು ಪೊಲೀಸ್ ಸಿಬ್ಬಂದಿ ಇದ್ದರು.