ವಂದೇ ಮಾತರಂ ಪೂರ್ಣ ಚರಣ ಹಾಡಲು ಸರ್ಕಾರ ಅವಕಾಶ ಕಲ್ಪಿಸಬೇಕು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಒತ್ತಾಯಿಸಿದ್ದಾರೆ. ಗಂಗಾವತಿ ನಗರದ ಅಮರಜ್ಯೋತಿ ಕಲ್ಯಾಣ ಮಂಟಪದಲ್ಲಿ ಜರುಗಿದ ಪ್ರಜಾಸೇವೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಂಗಾವತಿ: ವಂದೇ ಮಾತರಂ ಪೂರ್ಣ ಚರಣ ಹಾಡಲು ಸರ್ಕಾರ ಅವಕಾಶ ಕಲ್ಪಿಸಬೇಕು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಒತ್ತಾಯಿಸಿದ್ದಾರೆ.
ನಗರದ ಅಮರಜ್ಯೋತಿ ಕಲ್ಯಾಣ ಮಂಟಪದಲ್ಲಿ ಜರುಗಿದ ಪ್ರಜಾಸೇವೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಗಂಗಾವತಿಯಲ್ಲಿ ಈಚೆಗೆ ಜರುಗಿದ ಪ್ರಜಾಸೇವೆ ಅಂದೋಲನದಲ್ಲಿ ಮೊದಲಿಗೆ ಎರಡು ಚರಣಗಳನ್ನು ಪ್ರಸ್ತುತ ಪಡಿಸಲಾಗಿತ್ತು. ಆದರೆ ನಾನೇ ಪೂರ್ಣ ಚರಣಗಳ ವಂದೇ ಮಾತರಂ ಗೀತೆಯನ್ನು ಹಾಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದಾಗ ಧ್ವನಿಮುದ್ರಿತ ಹಾಡನ್ನು ಪ್ರಸ್ತುತಪಡಿಸಲಾಯಿತು. ಇದರಲ್ಲಿ ಅಧಿಕಾರಿಗಳ ತಪ್ಪೇನು ಇಲ್ಲ. ಈ ಬಗ್ಗೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬಾರದು ಎಂದು ಹೇಳಿದರು.
ಮಕ್ಕಳಲ್ಲಿ ದೇಶಭಕ್ತಿ ಮೂಡಲಿ ಎನ್ನುವ ಉದ್ದೇಶದಿಂದ ಈ ಗೀತೆಯನ್ನು ಪೂರ್ತಿ ಹಾಡುವಂತೆ ಹೇಳಿದ್ದೇನೆಯೇ ಹೊರತು ಇದರಲ್ಲಿ ರಾಜಕೀಯ ಏನೂ ಇಲ್ಲ ಎಂದರು.ಆನೆಗೊಂದಿಯಲ್ಲಿ ಪೊಲೀಸ್ ಠಾಣೆಯ ಆವಶ್ಯಕತೆ ಇದೆ. ಈ ಭಾಗದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ. ಗಂಗಾವತಿ ನಗರ ವೇಗವಾಗಿ ಬೆಳೆಯುತ್ತಿದ್ದು, ಸುಗಮ ಸಂಚಾರಕ್ಕೆ ಅನುಕೂಲವಾಗಲು ಬೈಪಾಸ್ ರಸ್ತೆಯ ಅವಶ್ಯಕತೆ ಇದೆ. ಗಂಗಾವತಿಗೆ ಮತ್ತೊಂದು ಪದವಿ ಕಾಲೇಜು ಬೇಕು. ಸಿಟಿ ಸೆಂಟರ್‌ನಲ್ಲಿ ಗಂಗಾವತಿ ತಾಲೂಕು ಆಡಳಿತ ಸೌಧ ನಿರ್ಮಾಣವಾಗಬೇಕು ಎಂದು ಶಾಸಕರು ಹೇಳಿದರು.ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಮಾತನಾಡಿ, ಆಡಳಿತವನ್ನು ಜನರ ಮನೆಬಾಗಿಲಿಗೆ ಕರೆದೊಯ್ಯುವ ಉದ್ದೇಶದಿಂದಾಗಿ ರಾಜ್ಯ ಸರ್ಕಾರ ಪ್ರತ್ಯೇಕ ಇಲಾಖೆಯೊಂದನ್ನು ಸ್ಥಾಪಿಸಿದ್ದು, ಆಡಳಿತದಲ್ಲಿ ಪಾರದರ್ಶಕತೆ ತರುವುದು ಸರ್ಕಾರ ಮುಖ್ಯ ಉದ್ದೇಶವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಸ್ವೀಕೃತವಾದ ಪ್ರಜಾಸೇವಾ ಅರ್ಜಿಗಳ ಪೈಕಿ ಶೇ. 40ರಷ್ಟು ಗುಣಾತ್ಮಕ ರೀತಿಯಲ್ಲಿ ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.ವಡ್ಡರಹಟ್ಟಿ ನೀರಾವರಿ ಇಲಾಖೆಯಲ್ಲಿ ನೌಕರ ಅಲ್ಲದವರು ವಸತಿ ನಿವಾಸಗಳಲ್ಲಿ ವಾಸ್ತವ್ಯ ಮಾಡಿದ್ದಾರೆ. ಕೂಡಲೆ ಅವರ ಇರುವ ಮನೆಗಳನ್ನು ತೆರವುಗೊಳಿಸಿ, ಉದ್ಯೋಗ ಮಾಡುವವರಿಗೆ ವಸತಿ ಸೌಕರ್ಯ ಕಲ್ಪಿಸಬೇಕು. ಸಾಣಾಪುರ ಭಾಗದಲ್ಲಿ ಹೋಂ ಸ್ಟೇ ನಿರ್ಮಿಸಿಕೊಳ್ಳಲು ಜಿಲ್ಲಾಡಳಿತ ಅನುಮತಿ ನೀಡಬೇಕು ಎಂದು ಸಾರ್ವಜನಿಕರು ಅರ್ಜಿ ಸಲ್ಲಿಸಿದರು.ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಜಿಪಂ ಸಿಇಒ ವರ್ಣಿತ್ ನೇಗಿ, ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಗಂಗಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ಇಸ್ಮಾಯಿಲ್ ಖಾದ್ರಿ, ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ದೊಡ್ಡಪ್ಪ ದೇಸಾಯಿ, ಸಹಾಯಕ ಆಯುಕ್ತ ಮೆಹೆಬೂಬ್ ಜಿಲಾನಿ, ಜಿಲ್ಲಾ ಆರೋಗ್ಯ ಕುಟಂಬ ಕಲ್ಯಾಣಾಧಿಕಾರಿ ಡ. ಈಶ್ವರ ಸವಡಿ, ಗಂಗಾವತಿ ತಹಸೀಲ್ದಾರ್ ವಸಂತಕುಮಾರಿ ಯು., ತಾಪಂ ಇಒ ರಾಮರೆಡ್ಡಿ ಉಪಸ್ಥಿತರಿದ್ದರು. ಜಯಶ್ರೀ ಹಕ್ಕಂಡಿ ಕಾರ್ಯಕ್ರಮ ನಿರೂಪಿಸಿದರು. ಬೇತಲ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ನಾಡಗೀತೆ ಮತ್ತು ವಂದೇ ಮಾತರಂ ಪ್ರಸ್ತುತ ಪಡಿಸಿದರು.