ಕನ್ನಡಪ್ರಭ ವಾರ್ತೆ ಬಾಗಲಕೋಟೆಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲ್ಪಟ್ಟಿರುವ ಮಾಜಿ ದೇವದಾಸಿ ಮಹಿಳೆಯರಿಗೆ ಹಾಗೂ ಮರು ಸಮೀಕ್ಷೆಯಲ್ಲಿ ನೋಂದಣಿಯಾಗಿರುವ ಅರ್ಹ ಮಾಜಿ ದೇವದಾಸಿ ಮಹಿಳೆಯರಿಗೆ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳು ಮತ್ತು ಯೋಜನೆಗಳ ಪ್ರಯೋಜನ ಸಮರ್ಪಕವಾಗಿ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲ್ಪಟ್ಟಿರುವ ಮಾಜಿ ದೇವದಾಸಿ ಮಹಿಳೆಯರಿಗೆ ಹಾಗೂ ಮರು ಸಮೀಕ್ಷೆಯಲ್ಲಿ ನೋಂದಣಿಯಾಗಿರುವ ಅರ್ಹ ಮಾಜಿ ದೇವದಾಸಿ ಮಹಿಳೆಯರಿಗೆ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳು ಮತ್ತು ಯೋಜನೆಗಳ ಪ್ರಯೋಜನ ಸಮರ್ಪಕವಾಗಿ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ-2025 ಕುರಿತು ಜರುಗಿದ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮರು ಸಮೀಕ್ಷೆಯಲ್ಲಿ ಅರ್ಹರೆಂದು ಗುರುತಿಸಲ್ಪಟ್ಟ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಯೋಜನೆಗಳಡಿ ದೊರೆಯುವ ಸೌಲಭ್ಯಗಳನ್ನು ಒದಗಿಸುವಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ ಕೆ, ಮಾತನಾಡಿ, 1993-94 ಹಾಗೂ 2007-08ನೇ ಸಾಲಿನಲ್ಲಿ ನಡೆಸಲಾದ ಸಮೀಕ್ಷೆಯ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 7,827 ಮಾಜಿ ದೇವದಾಸಿ ಮಹಿಳೆಯರು ಗುರುತಿಸಲ್ಪಟ್ಟಿದ್ದರು. ಇವರಲ್ಲಿ 4,646 ಮಹಿಳೆಯರು ಜೀವಂತವಿದ್ದರೆ, 2,945 ಮಹಿಳೆಯರು ಮೃತಪಟ್ಟಿದ್ದಾರೆ. 236 ಮಹಿಳೆಯರು ವಲಸೆ ಹೋಗಿರುವುದು ದಾಖಲಾಗಿದೆ ಎಂದರು.ಅದೇ ರೀತಿ 1993-94 ಹಾಗೂ 2007-08ನೇ ಸಾಲಿನ ಮೂಲ ಸಮೀಕ್ಷೆಯಲ್ಲಿ ಭಾಗವಹಿಸದೇ ಇದ್ದ ಮಹಿಳೆಯರಿಗೆ ಮರು ಸಮೀಕ್ಷೆಯಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಅರ್ಜಿ ನಮೂನೆ-2ರಲ್ಲಿ ಒಟ್ಟು 1,128 ಅರ್ಜಿಗಳು ಸ್ವೀಕೃತವಾಗಿವೆ. ಈ ಪೈಕಿ 901 ಅರ್ಜಿದಾರರು ಅರ್ಹರು ಹಾಗೂ 227 ಅರ್ಜಿದಾರರು ಅನರ್ಹರು ಎಂದು ಸಮಿತಿ ತೀರ್ಮಾನಿಸಲಾಯಿತು. ಮಾಜಿ ದೇವದಾಸಿ ಮಹಿಳೆ ಮೃತಪಟ್ಟಿರುವ ಸಂದರ್ಭದಲ್ಲಿ ಅವರ ಕುಟುಂಬದ ಸದಸ್ಯರು ಮರು ಸಮೀಕ್ಷೆಯಲ್ಲಿ ಭಾಗವಹಿಸಿ ಸಲ್ಲಿಸಿದ್ದ 121 ಅರ್ಜಿಗಳು ಸ್ವೀಕೃತಗೊಂಡಿದ್ದು, ಎಲ್ಲಾ 121 ಅರ್ಜಿದಾರರನ್ನು ಅರ್ಹ ಫಲಾನುಭವಿಗಳೆಂದು ಸಮಿತಿಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸದಾಶಿವ ಬಡಿಗೇರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪಂಕಜ ಜೋಶಿ, ಜಿ.ಪಂ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಮುಬಾಶೀರ ಅಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ನಿರೂಪಣಾಧಿಕಾರಿ ಮಂಜುನಾಥ ಪರಸನ್ನವರ ಸೇರಿದಂತೆ ಆಯಾ ತಾಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಹಾಗೂ ಅಭಿವೃದ್ದಿ ನಿರೀಕ್ಷಕಿ ಮಧು ಲೋಕಾಪೂರ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. ಸರ್ಕಾರದ ನಿರ್ದೇಶನದಂತೆ 2025ರ ಸೆಪ್ಟೆಂಬರ್ 15 ರಿಂದ ಡಿಸೆಂಬರ್ 31ರ ವರೆಗೆ ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿತ್ತು. ಈ ಅವಧಿಯಲ್ಲಿ 4,186 ಜೀವಂತ ಮಾಜಿ ದೇವದಾಸಿ ಮಹಿಳೆಯರು ಮರು ಸಮೀಕ್ಷೆಗೆ ಹಾಜರಾಗಿ ನೋಂದಾಯಿಸಿಕೊಂಡಿದ್ದಾರೆ. ಅದೇ ರೀತಿ, ಮಾಜಿ ದೇವದಾಸಿ ಮಹಿಳೆಯರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅವರ ಕುಟುಂಬದ ಸದಸ್ಯರು ಅರ್ಜಿ ನಮೂನೆ-1ರಲ್ಲಿ 510 ಅರ್ಜಿಗಳನ್ನು ಸಲ್ಲಿಸಿ ಮರು ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ.- ಪ್ರಭಾಕರ.ಕೆ, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ