ಸಾರಾಂಶ
- ಪುರಸಭೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ವ್ಯಾಪಾರಿಗಳು, ಸಂಘಟನೆಗಳ ಆಗ್ರಹ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದಲ್ಲಿ ಹಂದಿ, ನಾಯಿಗಳ ಹಾವಳಿ, ಹಲವಾರು ವಾರ್ಡುಗಳಲ್ಲಿ ಚರಂಡಿಗಳಿಲ್ಲದೇ ನೀರು ರಸ್ತೆಗೆ ಬರುತ್ತಿದೆ. ಸಂತೆ ಮೈದಾನದಲ್ಲಿ ಶೌಚಾಲಯ ಇಲ್ಲದೇ ಮಹಿಳಾ ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ತುಂಬಾ ತೊಂದರೆಯಾಗುತ್ತಿದೆ. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ 2025-26ನೇ ಸಾಲಿನ ಆಯ-ವ್ಯಯದಲ್ಲಿ ಹಣ ಮೀಸಲಿಡುವಂತೆ ಆಗ್ರಹಿಸಿ ನಾಗರಿಕರು, ಕನ್ನಡಪರ ಸಂಘಟನೆಗಳ ಪ್ರಮುಖರು ಬುಧವಾರ ಪುರಸಭೆಗೆ ಸಭೆಯಲ್ಲಿ ಮನವಿ ಮಾಡಿದರು.ಪುರಸಭೆ ಸಭಾಂಗಣದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷ ಮೈಲಪ್ಪ ಹಾಗೂ ಮುಖ್ಯಾಧಿಕಾರಿ ಟಿ.ಲೀಲಾವತಿ ಅವರಿಗೆ ಪಟ್ಟಣದ ನಾಗರಿಕರು ಪಟ್ಟಣದಲ್ಲಿ ಶೀಘ್ರ ಆಗಬೇಕಾದ ಅಭಿವೃದ್ದಿ ಕಾರ್ಯಗಳ ಬಗ್ಗೆ ಗಮನ ಸೆಳೆದರು.
ಪುರಸಭಾ ಸದಸ್ಯ ಧರ್ಮಪ್ಪ ಮಾತನಾಡಿ, ಬಜೆಟ್ ಮಂಡನೆ ಪೂರ್ವಭಾವಿ ಸಭೆ ಮುಂದಿನ ಒಂದು ವರ್ಷ ನಗರದ ಅಭಿವೃದ್ಧಿ ಕೈಗೊಳ್ಳಲು ಸಹಕಾರಿಯಾಗಲಿದೆ. ನಾಗರಿಕರ ಸಲಹೆಗಳನ್ನು ಪ್ರಾಮಾಣಿಕವಾಗಿ ಸ್ವೀಕರಿಸಿ, ಅಭಿವೃದ್ಧಿ ಶ್ರಮಿಸುತ್ತೇವೆ ಎಂದರು.ತಾಲೂಕು ಯುವಶಕ್ತಿ ಒಕ್ಕೂಟದ ಮುಖಂಡ ಕತ್ತಿಗೆ ನಾಗರಾಜ್ ಮಾತನಾಡಿ, ಈ ಹಿಂದೆ ಬಡ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ನೀಡಲಾಗುತ್ತಿತ್ತು. ಈಗ ನಿಲ್ಲಿಸಲಾಗಿದೆ. ಪ್ರೋತ್ಸಾಹಧನ ನೀಡುತ್ತಿದ್ದರು, ಈಗ ಅವುಗಳನ್ನು ಮುಂದಿನ ವರ್ಷದ ಬಜೆಟ್ ಮಂಡನೆ ನಂತರ ಮುಂದುವರಿಸಬೇಕು. ಸಂತೆ ಮೈದಾನದಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಿಸಿ ಮಹಿಳೆಯರಿಗೆ ತೊಂದರೆ ತಪ್ಪಿಸಿ ಎಂದು ಒತ್ತಾಯಿಸಿದರು.
ಸಾರ್ವಜನಿಕರ ಸಲಹೆ ಹಾಗೂ ಕುಂದುಕೊರತೆ ಆಲಿಸಿದ ಮುಖ್ಯಾಧಿಕಾರಿ ಲೀಲಾವತಿ ಮಾತನಾಡಿ, ನಗರದಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಆದರೆ ಟ್ರ್ಯಾಕ್ಟರ್ ಇಲ್ಲ. 15 ದಿನಗಳಲ್ಲಿ ಟ್ರ್ಯಾಕ್ಟರ್ ಬರಲಿದೆ. ಪೌರ ಕಾರ್ಮಿಕರ ಸಂಖ್ಯೆ ಕೂಡ ಕಡಿಮೆ ಇದೆ. ಅವರ ಹುದ್ದೆಗಳಿಗೂ ಶೀಘ್ರವೇ ನೇಮಕ ಮಾಡಿಕೊಳ್ಳಲಿದ್ದೇವೆ. ತದನಂತರ ನಗರದಲ್ಲಿ ಸಂಪೂರ್ಣ ಸ್ವಚ್ಛತೆಗೆ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದರು.ನಗರದಲ್ಲಿ ಸ್ವಚ್ಛತಾ ಕಾರ್ಯ ಕೈಬಿಟ್ಟಿಲ್ಲ. ನಗರದಲ್ಲಿ ರಸ್ತೆಗಳ ಕಾಮಗಾರಿಗೆ ಶಾಸಕ ಡಿ.ಜಿ.ಶಾಂತನಗೌಡ ₹30 ಕೋಟಿ ವೆಚ್ಚದ ಕ್ರಿಯಾ ಯೋಜನೆ ತಯಾರಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅನುದಾನ ಬಂದ ಕೂಡಲೇ ನಗರದ ರಸ್ತೆಗಳನ್ನು ಅಭಿವೃದ್ಧಿ ಮಾಡುತ್ತೇವೆ. ನಾಗರೀಕರು ಬಾಕಿ ಉಳಿಸಿಕೊಡಿರುವ ತೆರಿಗೆ ಕೂಡಲೇ ಪಾವತಿಸಿ, ಅಭಿವೃದ್ಧಿಗೆ ಸಹಕಾರ ನೀಡಿ ಎಂದು ಮನವಿ ಮಾಡಿದರು.
ಪುರಸಭಾಧ್ಯಕ್ಷ ಮೈಲಪ್ಪ ಮಾತನಾಡಿ, ನಗರದ ಅಭಿವೃದ್ಧಿಗೆ ಸಹಕಾರ ನೀಡಬೇಕು. ನಾಯಿ ಮತ್ತು ಹಂದಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ದೂರುಗಳು ಬಂದಿವೆ. ಈಗಾಗಲೇ ಬೀದಿನಾಯಿಗಳ ಹಿಡಿಯಲಿಕ್ಕೆ ಟೆಂಡರ್ ಕರೆಯಲು ಪ್ರಕ್ರಿಯೇ ಆರಂಭಿಸಿದ್ದೇವೆ ಎಂದರು.ಸದಸ್ಯರಾದ ಬಾವಿಮನೆ ರಾಜಪ್ಪ, ರಾಜೇಂದ್ರ ರಂಗಪ್ಪ, ಉಷಾಗಿರೀಶ್, ಮಂಜುನಾಥ ಇಂಚರ, ಕರವೇ ಶ್ರೀನಿವಾಸ್,ಇಂದ್ರೇಶ್, ಕೋಟೆ ಭಾಗದ ಸತೀಶ್ ಭಾರ್ಗವ್ ಪಟ್ಟಣದಲ್ಲಿನ ಹಲವಾರು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಮಾತನಾಡಿದರು.
ಪುರಸಭೆ ಆರೋಗ್ಯ ನಿರೀಕ್ಷಕರಾದ ಪರಮೇಶ್ವರ ನಾಯ್ಕ, ಮೋಹನ್, ರಂಜಿತಾ, ಭಾಗ್ಯಮ್ಮ, ಸಾಕಮ್ಮ ಜಯಪ್ಪ,ಮಲ್ಲೇಶ್, ಗೀತಾ, ಹೇಮಾ, ದಾಕ್ಷಾಯಣಿ, ಗಾಯತ್ರಿ, ಶಿವಾನಂದಪ್ಪ, ಬಾಬು ಸೇರಿದಂತೆ ಅನೇಕರು ಪೂರ್ವಭಾವಿ ಸಭೆಯಲ್ಲಿ ಉಪಸ್ಥಿತರಿದ್ದರು.- - - -18ಎಚ್.ಎಲ್.ಐ2.ಜೆಪಿಜಿ:
ಪುರಸಭಾಧ್ಯಕ್ಷ ಮೈಲಪ್ಪ ಅಧ್ಯಕ್ಷತೆಯಲ್ಲಿ 2025-26ನೇ ಸಾಲಿನ ಪುರಸಭೆ ಬಜೆಟ್ ಮಂಡನೆ ಪೂರ್ವಭಾವಿ ಸಭೆ ನಡೆಯಿತು.