ಸಾರಾಂಶ
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸಕ ವೀರೇಂದ್ರ ಪಪ್ಪಿ ಸೂಚನೆ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ದಾಖಲೆ ರಹಿತ ಜನ ವಸತಿ ಪ್ರದೇಶಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಒದಗಿಸಲು ಹಾಗೂ ಅವುಗಳಿಗೆ ಕಾನೂನು ರೀತಿ ಸ್ಥಾನಮಾನ ಕಲ್ಪಿಸಲು ಅಲ್ಲಿ ನಿರ್ಮಿಸಿಕೊಂಡಿರುವ ವಸತಿಗಳಿಗೆ 94 ಸಿ ನಿಯಮದಡಿ ಹಕ್ಕುಪತ್ರ ನೀಡಿ ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಲಂಬಾಣಿ ತಾಂಡ, ಗೊಲ್ಲರ ಹಟ್ಟಿ, ವಡ್ಡರಹಟ್ಟಿ, ಕುರುಬರಹಟ್ಟಿ, ನಾಯಕರಹಟ್ಟಿ, ಮಜರೆ ಗ್ರಾಮ, ಹಾಡಿ, ದೊಡ್ಡಿ, ಪಾಳ್ಯ ಮತ್ತು ಇತರೆ ದಾಖಲೆರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಚಿತ್ರದುರ್ಗ ತಾಲೂಕಿನಲ್ಲಿ ನೆಲಸಿರುವ ಲಂಬಾಣಿ (ಬಂಜಾರ), ಗೊಲ್ಲ, ಭೋವಿ, ನಾಯಕ, ಇತರೆ ಪರಿಶಿಷ್ಟ ಜಾತಿಗಳೂ ಸೇರಿದಂತೆ ದುರ್ಬಲ ಸಮುದಾಯಗಳ ಜನರು ವಾಸಿಸುವ ಹಲವು ವಸತಿ ಪ್ರದೇಶಗಳು ಅರಣ್ಯ, ಬೆಟ್ಟ ಗುಡ್ಡದ ತಪ್ಪಲು, ಗ್ರಾಮಠಾಣಾ, ಹೊರ ಖಾಸಗಿ ಜಮೀನುಗಳಲ್ಲಿ, ಸರ್ಕಾರಿ ಗೋಮಾಳ, ಕಾವಲು ಇತ್ಯಾದಿ ಸ್ಥಳಗಳಲ್ಲಿ ನಿರ್ಮಾಣಗೊಂಡು ಹಲವಾರು ವರ್ಷಗಳಿಂದ ಅಸ್ಥಿತ್ವದಲ್ಲಿ ಇರುತ್ತವೆ. ಶತಮಾನಗಳಿಂದ ಇಂತಹ ಪ್ರದೇಶಗಳಲ್ಲಿ ಜನರು ವಸತಿ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬಾರದೇ, ತಮ್ಮದೇ ಆದ ರೀತಿ ನೀತಿ, ಜೀವನಶೈಲಿ ರೂಢಿಸಿಕೊಂಡು ಬದುಕು ಸಾಗಿಸುತ್ತಾ ಬರುತ್ತಿದ್ದಾರೆ. ಇಂತಹ ಕಡೆ 10 ರಿಂದ 50 ವಸತಿ ಕುಟುಂಬಗಳಿದ್ದರೆ ಉಪ ಗ್ರಾಮ ಎಂದು, 50ಕ್ಕೂ ಹೆಚ್ಚು ಮನೆ, ಕುಟುಂಬ ಅಥವಾ 250 ಜನರಿರುವ ಪ್ರದೇಶವನ್ನು ಕಂದಾಯ ಗ್ರಾಮ ಎಂದು ಘೋಷಿಸಬೇಕಿದೆ. ಹಾಗಾಗಿ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಅಂತಹ ಪ್ರದೇಶಗಳನ್ನು ಗುರುತಿಸಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ರಾಜ್ಯ ಸರ್ಕಾರ ಎರಡು ವರ್ಷದ ಅವಧಿ ಪೂರೈಸುತ್ತಿರುವ ಸುಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮೇ 20ರಂದು 1 ಲಕ್ಷ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅದರ ಒಳಗಾಗಿ ಎಲ್ಲರಿಗೂ ಹಕ್ಕುಪತ್ರ ವಿತರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಚಿತ್ರದುರ್ಗ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ ರವಿಕುಮಾರ್, ಜಿಲ್ಲಾ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಆರ್.ಶಿವಣ್ಣ, ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಭೂಮಾಪಕರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು, ಸಮುದಾಯದ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.