ಜಾತ್ರೆಯಲ್ಲಿ ಮೂಲಭೂತ ಸೌಲಭ್ಯ ಒದಗಿಸಿ: ಶಾಸಕ ಭೀಮಸೇನ ಚಿಮ್ಮನಕಟ್ಟಿ

| Published : Jan 20 2024, 02:03 AM IST

ಜಾತ್ರೆಯಲ್ಲಿ ಮೂಲಭೂತ ಸೌಲಭ್ಯ ಒದಗಿಸಿ: ಶಾಸಕ ಭೀಮಸೇನ ಚಿಮ್ಮನಕಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಜಾತ್ರೆಯ ಪೂರ್ವಸಿದ್ಧತೆ ಪರಿಶೀಲನೆ ನಡೆಸಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ಜಾತ್ರೆಗೆ ಬರುವ ಭಕ್ತರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾದಾಮಿ

ಬನಶಂಕರಿ ಜಾತ್ರೆಗೆ ವಿವಿಧ ಜಿಲ್ಲೆ ಮತ್ತು ಹೊರರಾಜ್ಯಗಳಿಂದ ಲಕ್ಷಾಂತರ ಜನ ಭಕ್ತರು ಆಗಮಿಸುತ್ತಾರೆ. ಭಕ್ತರಿಗೆ ವಾಹನ ಪಾರ್ಕಿಂಗ್, ರಸ್ತೆ, ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆ ಹೀಗೆ ಎಲ್ಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ದಕ್ಷಿಣ ಭಾರತದಲ್ಲಿಯೇ ಸುಪ್ರಸಿದ್ಧ ಶ್ರೀ ಬನಶಂಕರಿ ದೇವಿ ಜಾತ್ರೆಯು ಜ.೨೫ ರಿಂದ ನಿರಂತರ ಒಂದು ತಿಂಗಳು ಕಾಲ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಕೈಗೊಂಡಿರುವ ಪೂರ್ವಸಿದ್ಧತೆಗಳನ್ನು ಗುರುವಾರ ಅವರು ಬನಶಂಕರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಯಾವುದೇ ಲೋಪದೋಷಗಳಾಗದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು. ಲಕ್ಷಾಂತರ ಜನ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಕಳ್ಳತನ ಪ್ರಕರಣ ನಡೆಯದಂತೆ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಹೇಳಿದರು.

ಬಾದಾಮಿಯಿಂದ ಬನಶಂಕರಿಯವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಕೂಡಲೇ ಮುಗಿಸಬೇಕು ಎಂದು ಸೂಚಿಸಲಾಗಿದೆ. ಪುರಸಭೆಯವರು ರಸ್ತೆಯಲ್ಲಿ ಧೂಳಾಗದಂತೆ ಪ್ರತಿ ದಿನ ಸಂಜೆ ನೀರು ಸಿಂಪಡಿಸಬೇಕು. ಆರೋಗ್ಯ ಇಲಾಖೆಯವರು ಜಾತ್ರೆಯಲ್ಲಿ ಸ್ವಚ್ಛತೆ ಬಗ್ಗೆ ಗಮನಹರಿಸಬೇಕು. ತುರ್ತು ಚಿಕಿತ್ಸೆ ನೀಡಲು ಅಗತ್ಯ ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಿಸಬೇಕು ಎಂದರು.

ಗ್ರಾಪಂನವರು, ಟ್ರಸ್ಟ್ ಕಮಿಟಿಯವರು ದೇವಸ್ಥಾನದ ಸುತ್ತಮುತ್ತ ಯಾವುದೇ ಅಂಗಡಿ ಹಾಕದಂತೆ ನೋಡಿಕೊಳ್ಳಬೇಕು. ಸಾರಿಗೆ ಇಲಾಖೆಗೆ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಬಸ್ ವ್ಯವಸ್ಥೆ ಮಾಡಬೇಕು ಎಂದು ಘಟಕ ವ್ಯವಸ್ಥಾಪಕ ಪಿ.ಆರ್.ಚವ್ಹಾಣ ಅವರಿಗೆ ಸೂಚಿಸಿದರು. ಬಾದಾಮಿಯಿಂದ ಬನಶಂಕರಿಗೆ ಆಗಮಿಸಿ ಸುತ್ತಮುತ್ತಲ ಸ್ಥಳ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ನಂತರ ಬನಶಂಕರಿಯಲ್ಲಿರುವ ಗಾಯತ್ರಿ ಪೀಠದ ಸಮುದಾಯ ಭವನದಲ್ಲಿ ತಾಲೂಕುಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಜೆ.ಬಿ.ಮಜ್ಜಗಿ, ತಾಪಂ ಇಒ ಮಲ್ಲಿಕಾರ್ಜುನ ಕಲಾದಗಿ, ಬಿಇಒ ಎನ್.ವೈ.ಕುಂದರಗಿ, ಎಪಿಎಂಸಿ ಕಾರ್ಯದರ್ಶಿ ರವಿ ರಾಠೋಡ, ಪಿಡಿಒ ರವಿ ದೊಡಮನಿ, ಕಾರ್ಯದರ್ಶಿ ಸ್ವಾತಪ್ಪನ್ನವರ, ಪುರಸಭೆ ಸದಸ್ಯ ಮಂಜುನಾಥ ಹೊಸಮನಿ, ಮುಖಂಡರಾದ ಹನಮಂತ ಅಪ್ಪನ್ನವರ, ಶಿವುಕುಮಾರ ಹಿರೇಮಠ, ಬಸವರಾಜ ತಳವಾರ, ಬಸಯ್ಯ ಹಂಪಿಹೊಳಿ ಸೇರಿದಂತೆ ತಾಲೂಕುಮಟ್ಟದ ಅಧಿಕಾರಿಗಳು, ಬನಶಂಕರಿ ಟ್ರಸ್ಟ್ ಕಮಿಟಿ ಪದಾಧಿಕಾರಿಗಳು, ಗ್ರಾಪಂ ಸದಸ್ಯರು, ಚೊಳಚಗುಡ್ಡ ಗ್ರಾಮದ ಹಿರಿಯರು ಇದ್ದರು.