ಸರ್ಕಾರಿ ಆಸ್ಪತ್ರೆ, ಶಾಲಾ-ಕಾಲೇಜಿಗೆ ಮೂಲ ಸೌಕರ್ಯ ಕಲ್ಪಿಸಿ

| Published : Jan 01 2024, 01:15 AM IST

ಸಾರಾಂಶ

ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳು, ವಿದ್ಯಾಸಂಸ್ಥೆಗಳು ಮೂಲ ಸೌಕರ್ಯಗಳ ಕೊರತೆಯಿಂದ ನಲುಗುತ್ತಿವೆ. ಈ ಬಗ್ಗೆ ಸಂಬಂಧಿಸಿದ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಆರೋಗ್ಯ, ಶಿಕ್ಷಣ ಇಲಾಖೆ ಅಧಿಕಾರಿಗಳು, ಜಿಲ್ಲಾಡಳಿತ ಗಮನ ಹರಿಸಿ, ಮೂಲ ಸೌಕರ್ಯ ಕಲ್ಪಿಸಲಿ

ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಸ್.ಶಿವಕುಮಾರಪ್ಪ ಒತ್ತಾಯ

ಕನ್ನಡಪ್ರಭ ವಾರ್ತೆ ದಾವಣಗೆರೆ

ಸರ್ಕಾರಿ ಆಸ್ಪತ್ರೆ, ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಮೂಲ ಸೌಕರ್ಯಗಳು ತೀವ್ರ ಕೊರತೆ ಇದ್ದು, ಸಂಬಂಧಿಸಿದ ಸಚಿವರು, ಶಾಸಕರು, ಅಧಿಕಾರಿಗಳು ಬಗ್ಗೆ ಕ್ರಮ ಕೈಗೊಂಡು, ಜನ ಸಾಮಾನ್ಯರು, ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆ ಪರಿಹರಿಸಲಿ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಸ್.ಶಿವಕುಮಾರಪ್ಪ ಒತ್ತಾಯಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳು, ವಿದ್ಯಾಸಂಸ್ಥೆಗಳು ಮೂಲ ಸೌಕರ್ಯಗಳ ಕೊರತೆಯಿಂದ ನಲುಗುತ್ತಿವೆ. ಈ ಬಗ್ಗೆ ಸಂಬಂಧಿಸಿದ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಆರೋಗ್ಯ, ಶಿಕ್ಷಣ ಇಲಾಖೆ ಅಧಿಕಾರಿಗಳು, ಜಿಲ್ಲಾಡಳಿತ ಗಮನ ಹರಿಸಿ, ಮೂಲ ಸೌಕರ್ಯ ಕಲ್ಪಿಸಲಿ ಎಂದರು.

ಶಾಲಾ-ಕಾಲೇಜುಗಳಿಗೆ ಸರಿಯಾದ ಕಟ್ಟಡ, ಕೊಠಡಿ, ಶೌಚಾಲಯ, ಆಟದ ಮೈದಾನ, ಪ್ರಯೋಗಾಲಯ, ಗ್ರಂಥಾಲಯ, ಶಿಕ್ಷಕರು, ಬೋಧಕರು, ವಿದ್ಯುತ್ ಸೌಕರ್ಯ, ಶುದ್ದ ಕುಡಿಯುವ ನೀರು ಸೇರಿ ಮೂಲ ಸೌಕರ್ಯಗಳೇ ಇಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಇರುವ ಮೂಲಭೂತ ಸೌಕರ್ಯಗಳ ಸರ್ಕಾರಿ ಶಾಲಾ-ಕಾಲೇಜುಗಳಿಗೂ ಕಲ್ಪಿಸುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಸುಮಾರು 693 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು, 702 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, 99 ಖಾಸಗಿ ಹಾಗೂ ಸರ್ಕಾರಿ ಕಾಲೇಜುಗಳು ಹಾಗೂ ಇತರೆ ವಿದ್ಯಾಸಂಸ್ಥೆಗಳು ಸರ್ಕಾರದ ಅಧೀನದಲ್ಲಿವೆ. ಅವುಗಳ ಪೈಕಿ ಬಹುತೇಕ ಶಾಲೆಗಳಿಗೆ ಸಾವಿರಾರು ಕೊಠಡಿಗಳ ಕೊರತೆ ಇದ್ದು, ಅನೇಕ ಶಾಲೆ-ಕಾಲೇಜುಗಳ ಮೇಲ್ಚಾವಣಿ ಸರಿ ಇಲ್ಲದೇ, ಮಳೆಗಾಲದಲ್ಲಿ ಸೋರುತ್ತವೆ. ಕೆಲವೆಡೆ ಮರದ ಕೆಳಗೆ ಶಾಲಾ ತರಗತಿಗಳನ್ನು ನಡೆಸಲಾಗುತ್ತಿದೆ. ಇಂತಹ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಪ್ರಥಮಾದ್ಯತೆ ಮೇಲೆ ಮುಂದಾಗಬೇಕು ಎಂದು ತಿಳಿಸಿದರು.

ಸಂಬಂಧಿಸಿದ ಜನ ಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಇಚ್ಛಾಶಕ್ತಿ, ಬದ್ಧತೆಯಿಂದ ಸ್ಪಂದಿಸುವ ಮೂಲಕ ಮೂಲ ಸೌಕರ್ಯಗಳನ್ನು ಕಲ್ಪಿಸುವ ಕೆಲಸ ಮಾಡಬೇಕು ಎಂದು ಶಿವಕುಮಾರಪ್ಪ ಒತ್ತಾಯಿಸಿದರು. ಪಕ್ಷದ ಮುಖಂಡರಾದ ಗಣೇಶ ಕೆ.ದುರ್ಗದ, ಜಿ.ಎಚ್‌.ಬಸವರಾಜ, ಮಹಮ್ಮದ ಯೂಸೂಫ್‌, ಬಿ.ಮಲ್ಲೇಶ ಇತರರಿದ್ದರು.

.........