ಸಾರಾಂಶ
ಕುಕನೂರು ಪಟ್ಟಣದ ರೈಲ್ವೆ ನಿಲ್ದಾಣ ವ್ಯಾಪ್ತಿಯಲ್ಲಿ ಮುಳ್ಳು-ಗಿಡ ಬೆಳೆದಿದ್ದು ರಾತ್ರಿ ಆಗಮಿಸುವ ಪ್ರಯಾಣಿಕರಿಗೆ ಭಯ ಕಾಡುತ್ತಿದೆ. ಅದನ್ನು ತೆರವುಗೊಳಿಸಬೇಕು. ಆಸನ ವ್ಯವಸ್ಥೆ, ನಿಲ್ದಾಣದ ಮುಖ್ಯ ರಸ್ತೆಯವರೆಗೆ ಬೀದಿದೀಪ ಅಳವಡಿಕೆ, ಸಫಾಯಿ ಕರ್ಮಚಾರಿಗಳ ನಿಯೋಜಿಸಬೇಕೆಂದು ಕುಕನೂರು ಹಿತರಕ್ಷಣಾ ಸಮಿತಿ ಒತ್ತಾಯಿಸಿದೆ.
ಕುಕನೂರು:
ಗದಗ-ವಾಡಿ ರೈಲ್ವೆ ಯೋಜನೆಯ ಕುಷ್ಟಗಿ ರೈಲ್ವೆ ನಿಲ್ದಾಣದಿಂದ ತಳಕಲ್ ನಿಲ್ದಾಣದ ವರೆಗೆ ಬರುವ ಎಲ್ಲ ರೈಲ್ವೆ ನಿಲ್ದಾಣಗಳಿಗೆ ಮೂಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಕುಕನೂರು ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಹೊಸಪೇಟಿಗೆ ಆಗಮಿಸಿದ್ದ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ.ಕುಕನೂರು ಪಟ್ಟಣದ ರೈಲ್ವೆ ನಿಲ್ದಾಣ ವ್ಯಾಪ್ತಿಯಲ್ಲಿ ಮುಳ್ಳು-ಗಿಡ ಬೆಳೆದಿದ್ದು ರಾತ್ರಿ ಆಗಮಿಸುವ ಪ್ರಯಾಣಿಕರಿಗೆ ಭಯ ಕಾಡುತ್ತಿದೆ. ಅದನ್ನು ತೆರವುಗೊಳಿಸಬೇಕು. ಆಸನ ವ್ಯವಸ್ಥೆ, ನಿಲ್ದಾಣದ ಮುಖ್ಯ ರಸ್ತೆಯವರೆಗೆ ಬೀದಿದೀಪ ಅಳವಡಿಕೆ, ಸಫಾಯಿ ಕರ್ಮಚಾರಿಗಳ ನಿಯೋಜಿಸಬೇಕೆಂದು ಒತ್ತಾಯಿಸಿದ್ದಾರೆ.
ಕುಕನೂರು ರೈಲ್ವೆ ನಿಲ್ದಾಣ ಹಾಗೂ ರೈಲ್ವೆ ಇಲಾಖೆಯ ನಿವೇಶನವಿರುವ ಸ್ಥಳದಲ್ಲಿ ಈ ಹಿಂದೆ ಎಸ್ಸಿ,ಎಸ್ಟಿ ಸಮುದಾಯದ ರುದ್ರಭೂಮಿ ಇತ್ತು. ಈ ಕಾಮಗಾರಿಗಾಗಿ ಈ ರುದ್ರಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ನಿಲ್ದಾಣದ ಎದುರಿನ ೪ ಗುಂಟೆ ಜಾಗೆ ಹಾಗೇ ಬಿಡಲಾಗಿದೆ. ಇದರಿಂದ ಶವಸಂಸ್ಕಾರಕ್ಕೆ ಕಷ್ಟವಾಗಿದೆ. ಅಲ್ಲದೇ ಶವಗಳನ್ನು ಇದೇ ಸ್ಥಳದಲ್ಲಿ ಸುಡುವಾಗ ಬರುವ ಹೊಗೆ ಹಾಗೂ ಮಾಲಿನ್ಯದಿಂದ ಪ್ರಯಾಣಿಕರಿಗೆ ಹಾಗೂ ರೈಲ್ವೆ ಸಿಬ್ಬಂದಿಗೆ ತೊಂದರೆಯಾಗುತ್ತಿದೆ. ಇದರಿಂದ ೪ ಗುಂಟೆ ಜಾಗವನ್ನು ಸ್ವಾಧೀನ ಪಡಿಸಿಕೊಂಡು ಸಮುದಾಯಗಳಿಗೆ ಬೇರೆ ಸ್ಥಳ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.ಗದಗ-ವಾಡಿ ರೈಲ್ವೆ ಕಾಮಗಾರಿ ತ್ವರಿತಗತಿ ಮುಗಿಸಿ ಪ್ರಯಾಣಿಕರ ಓಡಾಟಕ್ಕೆ ಅನುಕೂಲ ಕಲ್ಪಿಸಬೇಕು. ಇದರಿಂದ ಬೆಂಗಳೂರು- ಹೊಸಪೇಟೆ ರೈಲನ್ನು ಕೊಪ್ಪಳ, ತಳಕಲ್ ಮಾರ್ಗವಾಗಿ ಕುಷ್ಟಗಿ ವರೆಗೆ ವಿಸ್ತರಿಸಬೇಕು. ಹರಿಹರ-ಹೊಸಪೇಟೆ ಮಧ್ಯೆ ಸಂಚರಿಸುವ ರೈಲನ್ನು ಕುಷ್ಟಗಿ ವರೆಗೆ ವಿಸ್ತರಿಸಬೇಕು. ಬೆಳಗ್ಗೆ 8ಕ್ಕೆ ಹುಬ್ಬಳ್ಳಿಯಿಂದ ಕುಷ್ಟಗಿ ಹಾಗೂ ಸಂಜೆ ೫ರಿಂದ ಕುಷ್ಟಗಿಯಿಂದ ಹುಬ್ಬಳ್ಳಿಗೆ ಹೊಸ ರೈಲು ಪ್ರಾರಂಭಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ವೇಳೆ ಸಮಿತಿ ಸಂಚಾಲಕ ರವಿ ಜಕ್ಕಾ, ಸಹ ಸಂಚಾಲಕ ಮಂಜುನಾಥ ನಾಡಗೌಡ್ರ, ಅಂದಪ್ಪ ಜವಳಿ, ರಷಿದ್ ಹಣಜಗಿರಿ, ವಿನಾಯಕ ಯಾಳಗಿ, ಕಳಕೇಶ ಅತ್ತಿಕಟಗಿ ಇದ್ದರು.