ಸಾರಾಂಶ
ಸಫಾಯಿ ಕರ್ಮಚಾರಿಗಳಿಗೆ ಸಾಮಾಜಿಕ ಹಾಗೂ ಸೇವಾ ಭದ್ರತೆ, ಸಕಾಲದಲ್ಲಿ ವೇತನ ಪಾವತಿ, ವೇತನ ಶ್ರೇಣಿಗಳ ಪರಿಷ್ಕರಣೆ ಮತ್ತು ವೈದ್ಯಕೀಯ ವಿಮೆ, ರಜೆ, ಬೋನಸ್ನಂತಹ ಹೆಚ್ಚುವರಿ ಸೌಲಭ್ಯಗಳ ಕುರಿತಾಗಿ ನಿಯಮಿತವಾಗಿ ರೈಲ್ವೆ ಅಧಿಕಾರಿಗಳು ಪರಿಶೀಲಿಸಿ ಕ್ರಮಕೈಗೊಳ್ಳಬೇಕು
ಹುಬ್ಬಳ್ಳಿ:
ಸಫಾಯಿ ಕರ್ಮಚಾರಿಗಳಿಗೆ ಉತ್ತಮ ನೈರ್ಮಲ್ಯ ಸೌಲಭ್ಯ, ರಕ್ಷಣಾತ್ಮಕ ಸಾಧನ ಮತ್ತು ನಿಯಮಿತ ಆರೋಗ್ಯ ತಪಾಸಣೆ ನಡೆಸಬೇಕೆಂದು ರಾಷ್ಟ್ರೀಯ ಸಪಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಕೆ. ವೆಂಕಟೇಶ್ವನ್ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ನಗರದ ನೈಋತ್ಯ ರೈಲ್ವೆ ಪ್ರಧಾನ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಫಾಯಿ ಕರ್ಮಚಾರಿಗಳಿಗೆ ಸಾಮಾಜಿಕ ಹಾಗೂ ಸೇವಾ ಭದ್ರತೆ, ಸಕಾಲದಲ್ಲಿ ವೇತನ ಪಾವತಿ, ವೇತನ ಶ್ರೇಣಿಗಳ ಪರಿಷ್ಕರಣೆ ಮತ್ತು ವೈದ್ಯಕೀಯ ವಿಮೆ, ರಜೆ, ಬೋನಸ್ನಂತಹ ಹೆಚ್ಚುವರಿ ಸೌಲಭ್ಯಗಳ ಕುರಿತಾಗಿ ನಿಯಮಿತವಾಗಿ ರೈಲ್ವೆ ಅಧಿಕಾರಿಗಳು ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದರು.
ಸಫಾಯಿ ಕರ್ಮಚಾರಿಗಳಿಗೆ ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ತಡೆ ಮುಂತಾದ ವಿವಿಧ ಅಂಶಗಳನ್ನು ಅಧ್ಯಕ್ಷರು ಸಭೆಯಲ್ಲಿ ವಿಚಾರಿಸಿದರು.ಶೂಗಳ ಲಭ್ಯತೆ, ಮಳೆಗಾಲದಲ್ಲಿ ಜಾಕೆಟ್ ಮತ್ತು ಇತರ ಸೌಲಭ್ಯ. "ಶ್ರಮಿಕ್ ಕಲ್ಯಾಣ್ ಪೋರ್ಟಲ್ " ನಲ್ಲಿ ಕಡ್ಡಾಯವಾಗಿ ಗುತ್ತಿಗೆ ಸಿಬ್ಬಂದಿ ವಿವರವನ್ನು ಕಾಲ ಕಾಲಕ್ಕೆ ನವೀಕರಿಸುವುದನ್ನು ಆಯೋಗ ಗಮನಿಸುತ್ತದೆ. ಆದರೆ, ನವೀಕರಣ ಆಗುತ್ತಿಲ್ಲ ಎಂಬುದು ಕಂಡು ಬಂದಿದೆ. ಹೀಗೆ ಮುಂದುವರಿದರೆ ನೋಟಿಸ್ ನೀಡಿ ಕ್ರಮಕೈಗೊಳ್ಳಲಿದೆ ಎಂದು ಅಧ್ಯಕ್ಷರು ಎಚ್ಚರಿಸಿದರು.
ಸಫಾಯಿ ಕರ್ಮಚಾರಿಗಳ ಬಗ್ಗೆ ಗೌರವ ಮತ್ತು ಘನತೆ ಬೆಳೆಸಲು ಮತ್ತು ತಾರತಮ್ಯ ಮತ್ತು ಕಳಂಕ ತೊಡೆದುಹಾಕಲು ರೈಲ್ವೆ ನೌಕರರಲ್ಲಿ ಜಾಗೃತಿ ಮತ್ತು ಸೌಹಾರ್ದ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಅಧ್ಯಕ್ಷರು ಸಲಹೆ ನೀಡಿದರು.ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಅರವಿಂದ ಶ್ರೀವಾಸ್ತವ ಮಾತನಾಡಿ, ಆಯೋಗ ಸೂಚಿಸಿದ ಹಾಗೂ ಗಮನಕ್ಕೆ ತಂದ ಸಮಸ್ಯೆಗಳನ್ನು ತ್ವರಿತ ಗತಿಯಲ್ಲಿ ಬಗೆಹರಿಸುವುದಾಗಿ ಭರವಸೆ ನೀಡಿದರು.
ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಕೆ.ಎಸ್. ಜೈನ್, ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಹರ್ಷ ಖರೆ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಮತ್ತು ಇತರ ಹಿರಿಯ ಅಧಿಕಾರಿಗಳು ಮತ್ತು ಸಫಾಯಿ ಕರ್ಮಚಾರಿಗಳ ಒಕ್ಕೂಟದ ಮುಖಂಡರು ಉಪಸ್ಥಿತರಿದ್ದರು. ಇದೇ ವೇಳೆ ಕೆಲಸ ಸಫಾಯಿ ಕರ್ಮಚಾರಿಗಳ ಸಮಸ್ಯೆ ಆಲಿಸಿದರು.