ಜನಸಂಖ್ಯೆಗೆ ತಕ್ಕಂತೆ ಸ್ಮಶಾನ ಒದಗಿಸಿ

| Published : Oct 15 2025, 02:06 AM IST

ಸಾರಾಂಶ

ಹೋಬಳಿ ಕೇಂದ್ರವಾದ ಪಂಚನಹಳ್ಳಿಯಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸ್ಮಶಾನ ಒದಗಿಸುವಂತೆ ಶಾಸಕ ಕೆ.ಎಸ್.ಆನಂದ್ ಅವರು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಅವರಿಗೆ ಸೂಚಿಸಿದರು.

ಕಡೂರು: ಹೋಬಳಿ ಕೇಂದ್ರವಾದ ಪಂಚನಹಳ್ಳಿಯಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸ್ಮಶಾನ ಒದಗಿಸುವಂತೆ ಶಾಸಕ ಕೆ.ಎಸ್.ಆನಂದ್ ಅವರು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಅವರಿಗೆ ಸೂಚಿಸಿದರು.

ಮಂಗಳವಾರ ಪಂಚನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮ ಪಂಚಾಯ್ತಿ ಮಟ್ಟದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ಪಂಚನಹಳ್ಳಿಯಲ್ಲಿರುವ ನೂರಾರು ಎಕರೆ ಸರ್ಕಾರಿ ಜಾಗ ಉಳ್ಳವರ ಪಾಲಾಗುತ್ತಿದೆ. ಅದರಲ್ಲಿ ಕಡೆ ಪಕ್ಷ 5 ಎಕರೆ ಜಾಗವನ್ನು ಸ್ಮಶಾನಕ್ಕೆ ಮೀಸಲಿಡುವಂತೆ ಅನೇಕ ಬಾರಿ ಮನವಿ ಮಾಡಿದರು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥ ಸೋಮಶೇಖರ್ ಶಾಸಕರ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸ್ಮಶಾನದ ಉದ್ದೇಶಕ್ಕಾಗಿ ಹೆಚ್ಚುವರಿ ಜಾಗ ಗುರುತಿಸುವಂತೆ ತಹಸೀಲ್ದಾರ್ ಅವರಿಗೆ ಸೂಚಿಸಿದರು.ತಿಮ್ಮಲಾಪುರ ದಿನೇಶ್ ಮಾತನಾಡಿ , ಪಂಚನಹಳ್ಳಿಯಲ್ಲಿ ಸಾಕಷ್ಟು ಸರಕಾರಿ ಜಮೀನದ್ದರೂ ಪಂಚನಹಳ್ಳಿ ಗ್ರಾಮ ಪಂಚಾಯಿತಿ ಕಸವಿಲೇವಾರಿ ಘಟಕವನ್ನು ತಿಮ್ಮಲಾಪುರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವುದು ಸರಿಯಲ್ಲ. ತಿಮ್ಮಲಾಪುರದಲ್ಲಿರುವ ಸರ್ಕಾರಿ ಜಮೀನು ಒತ್ತುವರಿಯಾಗಿಲ್ಲ. ಸರಕಾರದ ಅನೇಕ ಯೋಜನೆಗಳಿಗೆ ಬಳಕೆಯಾಗುತ್ತಿದೆ. ಮುಂದೆ ಕೂಡ ಯಾವುದಾದರು ಸರಕಾರದ ಹೊಸ ಯೋಜನೆ ಬಂದರೆ ಈ ಜಾಗವನ್ನು ಬಳಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಆನಂದ್, ಪಂಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ಕಸ ವಿಲೇವಾರಿ ಘಟಕಕ್ಕೆ ಜಾಗ ಗುರುತಿಸುವಂತೆ ಹಾಗೂ ತಿಮ್ಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರಕಾರಿ ಜಾಗವನ್ನು ಇತರೆ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುವಂತೆ ಸೂಚಿಸಿದರು.ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಪಂಚನಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ 4 ಜನ ವೈದ್ಯರನ್ನು ನಿಯೋಜನೆ ಮಾಡಿರುವುದಾಗಿ ತಾಲೂಕು ವೈದ್ಯಾಧಿಕಾರಿ ಹೇಳುತ್ತಾರೆ. ಆದರೆ ಡಾ.ಭರತ್ ಒಬ್ಬರನ್ನು ಬಿಟ್ಟರೆ ಬೇರೆ ಯಾರೂ ಕೂಡ ಕರ್ತವ್ಯಕ್ಕೆ ಬರುತ್ತಿಲ್ಲ. ಈ ಬಗ್ಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಆಸ್ಪತ್ರೆಗೆ 4 ಜನ ವೈದ್ಯರನ್ನು ತಾತ್ಕಾಲಿಕವಾಗಿ ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಖಾಯಂ ವೈದ್ಯರ ನೇಮಕಕ್ಕೆ ಕ್ರಮ ವಹಿಸಲಾಗುವುದು ಎಂದು ಶಾಸಕ ಆನಂದ್ ತಿಳಿಸಿದರು.ಯುವಕ ಚೇತನ್ ಮಾತನಾಡಿ, ರೈತರು ಬಳಕೆ ಮಾಡುವ ಬೆಳೆ ಸಮೀಕ್ಷೆ ಆಪ್ ಸರಿಯಾಗಿ ಕೆಲಸ ಮಾಡುವುದಿಲ್ಲ. ಪ್ರತಿ ವರ್ಷ ಆ್ಯಪ್‌ನ ವರ್ಷನ್ ಬದಲಿಸುವುದರಿಂದ ರೈತರಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕೆಂದು ಕೋರಿದರು.ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಇಒ ಸಿ.ಆರ್.ಪ್ರವೀಣ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಎಸ್.ಸಂತೋಷ್, ಉಪಾಧ್ಯಕ್ಷೆ ಶೀಲಾ ರವಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯೆ ಸುಜಾತ ಚಂದ್ರಶೇಖರ್, ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು. ತಹಸೀಲ್ದಾರ್, ಯುವಕನ

ನಡುವೆ ಜಟಾಪಟಿ

ಪಂಚನಹಳ್ಳಿ ಬಾಣಾವಾರ ರಸ್ತೆಯಿಂದ ಬಿಟ್ಟೇನಹಳ್ಳಿ ಸಂಪರ್ಕಿಸುವ ನಕಾಶೆ ರಸ್ತೆ ಸಂಪೂರ್ಣವಾಗಿ ಒತ್ತುವರಿಯಾಗಿದೆ. ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದರೂ ತೆರವು ಮಾಡಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ದೂರಿದ ಸಾಗರ್ ಎಂಬ ಯುವಕ ತಹಸೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದನು.

ಈ ವೇಳೆ ತಹಸೀಲ್ದಾರ್ ಮತ್ತು ಯುವಕನ ನಡುವೆ ಜಟಾಪಟಿ ನಡೆಯಿತು. ಮಧ್ಯ ಪ್ರವೇಶಿಸಿದ ಶಾಸಕ ಆನಂದ್ ಅಧಿಕಾರಿಗಳ ಜತೆ ಸೌಜನ್ಯಯುತವಾಗಿ ವರ್ತಿಸುವಂತೆ ಯುವಕನಿಗೆ ತಿಳಿ ಹೇಳಿದರು. ಆಗ ಆತ ಕೇಳದಿದ್ದಾಗ ಪೊಲೀಸರು ಯುವಕನನ್ನು ಸಭೆಯಿಂದ ಹೊರಗೆ ಕಳುಹಿಸಿದ ಘಟನೆ ನಡೆಯಿತು.

ಈ ಸಂದರ್ಭ ಮಾತನಾಡಿದ ತಾಪಂ ಮಾಜಿ ಅಧ್ಯಕ್ಷ ಪಿ.ಸಿ.ಪ್ರಸನ್ನ, ನಕಾಶೆ ರಸ್ತೆಯಾಗಿರುವುದರಿಂದ ರಸ್ತೆ ತೆರವಿಗೆ ಅಧಿಕಾರಿಗಳು ಮುಂದಾಗಬೇಕು ಎಂದರು.