ಸಾರಾಂಶ
ಕನ್ನಡಪ್ರಭ ವಾರ್ತೆ ಕೊಲ್ಹಾರ
ಕೂಡಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎನ್.ಟಿ.ಪಿ.ಸಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕು, ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ವಿಶೇಷವಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು, ಸ್ವಚ್ಛತೆ ಒದಗಿಸುವ ನಿಟ್ಟಿನಲ್ಲಿ ಪಿಡಿಒ, ಅಧ್ಯಕ್ಷರು ಹಾಗೂ ಸದಸ್ಯರು ಕಾರ್ಯನಿರ್ವಹಿಸಬೇಕು ಎಂದು ಜಿಪಂ ಸಿಇಒ ರಿಷಿ ಆನಂದ್ ಹೇಳಿದರು.ತಾಲ್ಲೂಕಿನ ಕೂಡಗಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿದ ವೇಳೆ ಎನ್.ಟಿ.ಪಿ.ಸಿ ಯೋಜನೆ ಅಡಿಯಲ್ಲಿ ಕೈಗೊಳ್ಳಲಾದ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿದರು. ಶಾಲಾ ಕಟ್ಟಡ, ಚರಂಡಿ ನಿರ್ಮಾಣ, ಸಿ.ಸಿ.ರಸ್ತೆ, ಹೈಟೆಕ್ ಶೌಚಾಲಯ, ಆಟದ ಮೈದಾನ ಸೇರಿ ವಿವಿಧ ಕಾಮಗಾರಿಗಳ ಗುಣಮಟ್ಟದಿಂದ ಕೂಡಿರಬೇಕು ಹಾಗೂ ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿ ಅಧಿಕಾರಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಗಮನಹರಿಸಬೇಕು ಎಂದು ಸೂಚಿಸಿದರು.
ಕೂಡಗಿ ಗ್ರಾಪಂ ವ್ಯಾಪ್ತಿಯ ಕೂಡಗಿ ತಾಂಡಾದ ವಾರ್ಡ್‌ಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪೌಷ್ಟಿಕ ಆಹಾರ, ಆಟದ ಸಾಮಗ್ರಿಗಳು ಮತ್ತು ಪರಿಕರಗಳ ಬಗ್ಗೆ ಮಕ್ಕಳೊಂದಿಗೆ ಸಂಭಾಷಣೆ ನಡೆಸಿದರು. ನಂತರ ಸರ್ಕಾರಿ ಗಂಡು ಮಕ್ಕಳ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲಾ ಕಾಂಪೌಂಡ್ ಮತ್ತು ಶೌಚಾಲಯವನ್ನು ವೀಕ್ಷಿಸಿದರು. ಶಾಲಾ ಆವರಣದಲ್ಲಿ ಸ್ವಚ್ಛತೆಗೆ ಪ್ರಮುಖವಾಗಿ ಆದ್ಯತೆ ನೀಡಬೇಕೆಂದು ಶಾಲಾ ಮುಖ್ಯೋಪಾಧ್ಯರಾದ ಮಹಮ್ಮದ್ ಹಿರಿಯಾಳ ಇವರಿಗೆ ಸೂಚನೆ ನೀಡಿದರು.ನಂತರ ಗ್ರಾಪಂ ಸಭಾಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಎನ್‌ಟಿಪಿಸಿ ತೆರಿಗೆ ವಸೂಲಾತಿ 2021-22ನೇಯ ಸಾಲಿನ ಕ್ರಿಯಾ ಯೋಜನೆಯ ಮೊತ್ತದ ಕಾಮಗಾರಿಗಳಾದ ಗ್ರಂಥಾಲಯ ಕಟ್ಟಡ ನಿರ್ಮಾಣ, ಡಿಜಿಟಲ್ ಪರಿಕರಗಳ ಖರೀದಿಸುವುದು ಹಾಗೂ ಪುಸ್ತಕ ಖರೀದಿಸುವುದು, ಭಿಕ್ಷುಕರ ಉಪಕರಣಗಳ ಭರಣ , ಹೈಟೆಕ್ ಶೌಚಾಲಯ ನಿರ್ಮಾಣ, ಸಭಾಭವನ ನಿರ್ಮಾಣ, ಅಂಗನವಾಡಿ ಕಟ್ಟಡ ನಿರ್ಮಾಣ, ಆಡಳಿತಾತ್ಮಕ ವೆಚ್ಚ ಪರಿಕರಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ ಕುಡಿಯುವ ನೀರಿನ ವ್ಯವಸ್ಥೆ, ನೈರ್ಮಲ್ಯ, ಬೀದಿ ದೀಪಗಳು, ಶಿಕ್ಷಣ, ಕ್ರೀಡಾ ಸೌಲಭ್ಯಗಳು, ಅರಣ್ಯೀಕರಣ, ನಾಗರಿಕ ಸೇವೆಗಳ ವಿತರಣಾ ವ್ಯವಸ್ಥೆ ಸುಧಾರಣೆ, ಶಾಶ್ವತ ಆಸ್ತಿ ನಿರ್ಮಾಣ, ಹಾಗೂ ಇತರೆ ವಿಷಯಗಳ ಕುರಿತು ಪ್ರಗತಿಪರಿಶೀಲನೆ ನಡೆಸಿದರು.ಈ ವೇಳೆ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ತಾಪಂ ಇಒ ಸುನಿಲ ಮದ್ದೀನವರಿಗೆ ಹಾಗೂ ಪಿಡಿಒ ಆನಂದ್ ಕೋಟ್ಯಾಳ ಅವರಿಗೆ ಅತಿ ತುರ್ತಾಗಿ ಸಮಸ್ಯೆ ಪರಿಹರಿಸಲು ಸೂಚನೆ ನೀಡಿದರು.ಈ ವೇಳೆ ಜಿಪಂ ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ, ಬಸವನ ಬಾಗೇವಾಡಿ ಪಂಚಾಯತ್ ರಾಜ್ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ವಿಲಾಸ್ ರಾಠೋಡ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿ.ಬಿ.ಗೊಂಗಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ನಿರ್ಮಲಾ ಸುರಪುರ. ಗ್ರಾಪಂ ಅಧ್ಯಕ್ಷೆ ಹುಸೇನಬಿ ಮಾಶಾಳ ಸೇರಿದಂತೆ ಗ್ರಾಮ ಪಂಚಾಯತಿ ಉಪಾಧ್ಯಕ್ಷರು, ಸದಸ್ಯರು, ಜಿಪಂ ಅಧಿಕಾರಿಗಳು, ತಾಪಂ ಸಿಬ್ಬಂದಿ ಹಾಗೂ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.
ಬಾಕ್ಸ್ಜನರಲ್ಲಿ ಜಾಗೃತಿ ಮೂಡಿಸಿ: ಸಿಇಒಜಲ ಜೀವನ್ ಮಿಷನ್ ಯೋಜನೆಯಡಿ ಮನಬಂದಂತೆ ರಸ್ತೆ ಅಗೆಯಬೇಡಿ, ನೀರು ಪೂರೈಕೆ ಕುರಿತು ವಾಟರ್ ಮನ್, ಪಂಪ್ ಆಪರೇಟರ್‌ಗೆ ತರಬೇತಿ ನೀಡಬೇಕು. ನೀರು ಬಿಡುವ ಬಗ್ಗೆ ಗ್ರಾಮ ಪಂಚಾಯಿತಿಯಲ್ಲಿ ಯಾವ ಅವಧಿಗೆ ಯಾವ ಗ್ರಾಮಕ್ಕೆ ನೀರು ಬಿಡಲಾಗುತ್ತದೆಂದು ಅದರ ಬಗ್ಗೆ ಮಾಹಿತಿ ಅಳವಡಿಸಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾರ್ಡ್ ಸಭೆ ಹಾಗೂ ಗ್ರಾಮ ಸಭೆಗಳನ್ನು ಹಮ್ಮಿಕೊಂಡು ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಕುಡಿಯುವ ನೀರಿಗೆ ಸಂಬಂಧಪಟ್ಟ ಹಾಗೆ ವಾಟರ್ ಟೆಸ್ಟಿಂಗ್ ಮಾಡಿಸಿ ಜಿಲ್ಲಾ ಪಂಚಾಯಿತಿಗೆ ವರದಿ ಸಲ್ಲಿಸುವ ಜೊತೆಗೆ ಘನತಾಜ್ಯ ಹಾಗೂ ದ್ರವ ತಾಜ್ಯ ವಿಲೇವಾರಿ ಘಟಕ ಆರಂಭಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಪಿಡಿಒ ಆನಂದ್ ಕೋಟ್ಯಾಳ ಅವರಿಗೆ ಸೂಚನೆ ನೀಡಿದರು.