ಸಾರಾಂಶ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ತಾಲೂಕಿನಾದ್ಯಂತ ಕಾಡು ಪ್ರಾಣಿಗಳ ಹಾವಳಿಯಿಂದ ಉಂಟಾಗುತ್ತಿರುವ ಹಾನಿಯಿಂದಾಗಿ ರೈತರು ಭಾವನಾತ್ಮಕವಾಗಿ ಹತಾಶರಾಗಿದ್ದು, ಸಂತ್ರಸ್ಥ ರೈತರಿಗೆ ಸಕಾಲದಲ್ಲಿ ಸೂಕ್ತ ಪರಿಹಾರ ನೀಡಲು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಆಗ್ರಹಿಸಿದರು.ಕಾಡುಪ್ರಾಣಿಗಳ ಹಾವಳಿ ಹಿನ್ನೆಲೆ ಆಗುತ್ತಿರುವ ಹಾನಿಯ ಕುರಿತಂತೆ ಸೋಮವಾರ ಆಗುಂಬೆಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿ, ವಿಶೇಷವಾಗಿ ಆಗುಂಬೆ ಸುತ್ತಲಿನ ಗ್ರಾಮಗಳಲ್ಲಿ ಒಂಟಿ ಸಲಗದ ಬಾಧೆ ಮುಂದುವರೆದಿದ್ದು ಕಾಡುಕೋಣಗಳ ಹಾವಳಿಯೂ ಹೆಚ್ಚುತ್ತಿದೆ. ಕಾಡುಪ್ರಾಣಿಗಳ ಹಾವಳಿಯಿಂದ ಹೈರಾಣಾಗಿರುವ ರೈತರು ಬೆಳೆದ ಬೆಳೆ ಕೈಗೆ ಬರುವ ಸಂಧರ್ಭದಲ್ಲಿ ಕಳೆದುಕೊಳ್ಳುವ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕಾಡು ಪ್ರಾಣಿಗಳ ಹಾನಿಯಿಂದಾಗಿರುವ ನಷ್ಟವನ್ನು ಭರಿಸಲು ಅರಣ್ಯ ಇಲಾಖೆ ಮತ್ತು ವನ್ಯಜೀವಿ ವಿಭಾಗದ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಕಾಡಾನೆ ನಿಯಂತ್ರಣದ ಸಲುವಾಗಿ ಆನೆ ಸಂಚರಿಸುವ ಸ್ಥಳಗಳಲ್ಲಿ ಅರಣ್ಯ ಇಲಾಖೆ ಅಗತ್ಯ ಸಿಬ್ಬಂದಿ ನೇಮಿಸುವ ಅಗತ್ಯವಿದೆ. ಕಾಡಾನೆ ಮತ್ತು ಕಾಡುಕೋಣಗಳಿಂದಾಗುವ ಹಾನಿಗೆ ಒಂದಿಷ್ಟು ಪರಿಹಾರ ದೊರೆಯುತ್ತಿದೆಯಾದರೂ ಅಡಕೆ ಬೆಳೆಯನ್ನೇ ನಾಶ ಮಾಡುತ್ತಿರುವ ಮಂಗಗಳಿಂದ ಆಗುತ್ತಿರುವ ಹಾನಿಗೆ ಪರಿಹಾರ ಇಲ್ಲದಿರುವುದು ವಿಷಾದನೀಯ ಸಂಗತಿ ಎಂದರು.ಈ ಬಗ್ಗೆ ಸರ್ಕಾರದ ಜೊತೆ ಚರ್ಚಿಸುವುದಾಗಿ ತಿಳಿಸಿದ ಅವರು, ತಾಲೂಕಿನಲ್ಲಿ ಮಂಗಗಳ ಹಾವಳಿಯಿಂದ ಹೆಂಚಿನ ಮನೆಯ ಬದಲಿಗೆ ತಾರಸಿ ಮನೆಗಳನ್ನು ಕಟ್ಟುವಂತಾಗಿದೆ ಎಂದರು.
ಮಂಗಗಳ ಹಾವಳಿ ಕುರಿತಂತೆ ಮಾತನಾಡಿದ ಗ್ರಾಮಸ್ಥರು, ಮನೆಯ ಹೆಂಚುಗಳನ್ನು ಕಿತ್ತು ವಸ್ತುಗಳನ್ನು ಹಾನಿ ಮಾಡುವ ಮಂಗಗಳು ಅನ್ನದ ತಪ್ಪಲೆಗಳನ್ನೇ ಹೊತ್ತೊಯ್ಯುತ್ತವೆ. ಅವುಗಳ ಹಾನಿಯನ್ನು ನಿಯಂತ್ರಣ ಮಾಡುವುದೇ ಕಷ್ಟಸಾಧ್ಯವಾಗಿದೆ ಎಂದರು.ಮಲ್ಲಂದೂರು ಗ್ರಾಮದಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದಾಗಿರುವ 22 ಪ್ರಕರಣಗಳಿಗೆ ₹2.75 ಲಕ್ಷ ರು.ಪರಿಹಾರ ಮಂಜೂರಾಗಿದೆ. ಆನೆ ಇರುವ ಸಂಧರ್ಭದಲ್ಲಿ ರಾತ್ರಿ ಪಾಳಿಯಲ್ಲಿ ಸಿಬ್ಬಂದಿ ನೇಮಿಸಲಾಗಿದೆ ಎಂದು ವನ್ಯಜೀವಿ ವಿಭಾಗದ ಅಧಿಕಾರಿ ತಿಳಿಸಿದರು.
ಸಭೆಯಲ್ಲಿ ಆಗುಂಬೆ ಗ್ರಾಪಂ ಅಧ್ಯಕ್ಷ ಜಯಪ್ರಕಾಶ್, ಡಿಸಿಎಫ್ ಶಿವಶಂಕರ್, ಎಸಿಎಫ್ ಮಧುಸೂದನ್, ತಾಪಂ ಇಒ ಎಂ.ಶೈಲಾ, ಕಾರ್ಕಳ ವನ್ಯಜೀವಿ ವಿಭಾಗದ ಚಿದಾನಂದ್, ಮೇಗರವಳ್ಳಿ ವಲಯಾರಣ್ಯಾಧಿಕಾರಿ, ಆಗುಂಬೆ ಗ್ರಾಪಂ ಮಾಜಿ ಅಧ್ಯಕ್ಷ ಹಸಿರುಮನೆ ನಂದನ್ ಇದ್ದರು.