ಸಾರಾಂಶ
ಹೊಸದುರ್ಗ: ಗ್ರಾಮೀಣ ಜನರಿಗೆ ಅನುಕೂಲವಾಗುವಂತೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಶಾಸಕ ಬಿ.ಜಿ. ಗೋವಿಂದಪ್ಪ ಅವರು ಹೊಸದುರ್ಗ ಮತ್ತು ಶ್ರೀರಾಂಪುರ ಬೆಸ್ಕಾಂ ಇಎಎಗಳಿಗೆ ತಾಕೀತು ಮಾಡಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ತಾಲೂಕಿನ ಗ್ರಾಪಂ, ಪಿಡಿಓಗಳ ಹಾಗೂ ಬೆಸ್ಕಾಂ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆಯಿಲ್ಲ. ಆದರೆ ಬೆಸ್ಕಾಂ ಸಿಬ್ಬಂದಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಸಾರ್ವಜನಿಕರು ದೂರುತ್ತಿದ್ದಾರೆ. ಕೆಲಸ ಮಾಡಲು ಆಸಕ್ತಿಯಿಲ್ಲದವರು ತಾಲೂಕಿನಿಂದ ವರ್ಗಾವಣೆ ಮಾಡಿಸಿಕೊಂಡು ಹೋಗಿ ಎಂದು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಶಾಸಕರು ಅಸಮಧಾನ ವ್ಯಕ್ತಪಡಿಸಿದರು.ತಾಲೂಕಿನ ಜನರಿಗೆ ವಿದ್ಯುತ್ ಸಮಸ್ಯೆಯಾಗಬಾರದು ಎಂಬ ಉದ್ದೇಶಕ್ಕಾಗಿ ಹಿಂದಿನ ಕಾಂಗ್ರೆಸ್ ಸರಕಾರದ ಅವಯಲ್ಲಿ ವಿದ್ಯುತ್ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಎಲ್ಲೂ ಇಲ್ಲದ ವಿದ್ಯುತ್ ಸೌಲಭ್ಯಗಳನ್ನು ಒದಗಿಸಿದ್ದೇನೆ. ತಾಲೂಕಿನಲ್ಲಿ ಎರಡು ಸಬ್ ಡಿವಿಜನ್‌ಗಳಿದ್ದು, ಇಬ್ಬರು ಎಇಇಗಳು ಕರ್ತವ್ಯ ನಿರ್ವಹಿಸಿದರೂ, ಜನರಿಗೆ ಸಮರ್ಪಕ ವಿದ್ಯುತ್ ಪೂರೈಸದಿದ್ದರೆ ಹೇಗೆ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು. ತಾಲೂಕಿನಲ್ಲಿ ಗಣಿಬಾಧಿತ ಗ್ರಾಮಗಳಾಗಿ 53 ಹಳ್ಳಿಗಳು ಆಯ್ಕೆಯಾಗಿವೆ. ಗಣಿ ಬಾಧಿತ ಗ್ರಾಮಗಳ ವಸತಿ ಯೋಜನೆಯಲ್ಲಿ ಮನೆ ಕಟ್ಟಿಕೊಳ್ಳುವ ಪಲಾನುಭವಿಗಳಿಗೆ ₹7 ಲಕ್ಷ ಹಣ ಬಿಡುಗಡೆಯಾಗುತ್ತದೆ. ಗಣಿ ಬಾಧಿತ ಗ್ರಾಮಗಳಲ್ಲಿ ಅ. 28ರೊಳಗೆ ಗ್ರಾಮ ಸಭೆಯ ಮೂಲಕ ವಸತಿ ರಹಿತ ಅರ್ಹ ಫಲಾನುಭವಿಗಳನ್ನು ಅಯ್ಕೆ ಮಾಡಬೇಕು. ಅನರ್ಹ ಫಲಾನುಭವಿಗಳನ್ನು ಅಯ್ಕೆ ಮಾಡಿದರೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆಯಾಗುತ್ತಾರೆ ಎಂದು ಪಿಡಿಓ ಗಳಿಗೆ ಎಚ್ಚರಿಕೆ ನೀಡಿದರು. ಸಭೆಯಲ್ಲಿ ತಾಪಂ ಇಓ ಬಿ. ಸುನೀಲ್ ಕುಮಾರ್, ಬೆಸ್ಕಾಂ ಎಇಇಗಳಾದ ಅನಿಲ್ ಕುಮಾರ್, ಕಿರಣರೆಡ್ಡಿ, ಸಹಾಯಕ ನಿರ್ದೇಶಕ ಶಿವಮೂರ್ತಿ, ತಾಂತ್ರಿಕ ಸಂಯೋಜಕ ಸಂತೋಂಷ್ ಕುಮಾರ್, ತಾಲೂಕು ವಸತಿ ಯೋಜನೆ ನೋಡಲ್ ಅಧಿಕಾರಿ ಮಹಾಂತೇಶ ನಾಯ್ಕ್, ತಾಲೂಕಿನ ಗ್ರಾಪಂ ಪಿಡಿಓಗಳು, ಬೆಸ್ಕಾಂ ಶಾಖಾಧಿಕಾರಿಗಳು ಹಾಜರಿದ್ದರು.